ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಮತ್ತು ವಸತಿ ಶಾಲೆಗಳಲ್ಲಿ ವಿದ್ಯಾರ್ಥಿ ಗಳು ದಿನಪತ್ರಿಕೆಗಳನ್ನು ಓದುವಂತಾಗುವ ಆದೇಶವನ್ನು ಅನುಷ್ಠಾನಗೊಳಿಸಬೇಕು ಎಂಬುದಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಆಗ್ರಹಿಸಿರುವುದಾಗಿ ವರದಿಯಾಗಿದೆ.
‘ಇದ್ಯಾವ ಘನಂದಾರಿ ಆಗ್ರಹ?’ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಇಂಥ ಉಪಕ್ರಮಕ್ಕೆ ಅತೀವ ಮಹತ್ವವಿದೆ. ಶಾಲೆಗಳಲ್ಲಿ ಮುಂಜಾನೆಯ ಪ್ರಾರ್ಥನೆ ಮತ್ತು ರಾಷ್ಟ್ರಗೀತೆ ಗಾಯನದ ಸಂದರ್ಭದಲ್ಲಿ, ಅಂದಿನ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಮುಖ ಸುದ್ದಿಗಳನ್ನು/ಸುದ್ದಿ ಶೀರ್ಷಿಕೆಗಳನ್ನು ದಿನಕ್ಕೊಬ್ಬ ವಿದ್ಯಾರ್ಥಿಯಿಂದ ಓದಿಸುವ ಪರಿಪಾಠ ಬಹುತೇಕ ಶಾಲೆಗಳಲ್ಲಿದೆ.
ಇದನ್ನೂ ಓದಿ: Vishwavani Editorial: ಉಗ್ರರಿದ್ದಾರೆ, ನಿರ್ಲಕ್ಷ್ಯ ಸಲ್ಲ
ಆದರೆ ಇದು ‘ಹತ್ತರಲ್ಲಿ ಹನ್ನೊಂದು’ ಎಂಬಂಥ ಚಟುವಟಿಕೆ ಆಗಿ ಬಿಟ್ಟಿದೆಯೇ ವಿನಾ, ಸಾಕಷ್ಟು ವಿದ್ಯಾರ್ಥಿಗಳು ಇದರ ಮಹತ್ವವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಯಾಕೆಂದರೆ, ಯಾವುದೇ ಸುದ್ದಿ, ಅಂಕಣ ಬರಹ ಅಥವಾ ಸಚಿತ್ರ ಲೇಖನವನ್ನು ಓದಿದಾಗ ಸಹಜವಾಗೇ ಹುಟ್ಟುವ ಒಂದ ಷ್ಟು ಪ್ರಶ್ನೆಗಳನ್ನು ತಮ್ಮ ಉಪಾಧ್ಯಾಯ ವೃಂದದವರಿಗೆ ಕೇಳುವಂತಾಗಲು ಈ ಪರಿಪಾಠ ಅನುವು ಮಾಡಿಕೊಡುತ್ತದೆ.
ಇದರಿಂದಾಗಿ, ಅನುಗಾಲವೂ ‘ಮಾಹಿತಿವಂತರಾಗಿ’ ಇರಬೇಕಾದ ಅನಿವಾರ್ಯತೆ ಶಿಕ್ಷಕ ವೃಂದದ ಹೆಗಲೇರುತ್ತದೆ. ಒಟ್ಟಿನಲ್ಲಿ, ಪಠ್ಯಪುಸ್ತಕಗಳಲ್ಲಿನ ಹುರುಳನ್ನು ಮಾತ್ರವಲ್ಲದೆ, ಸುತ್ತಮುತ್ತಲ ಜಗತ್ತಿನ ಹತ್ತು ಹಲವು ಸಂಗತಿಗಳನ್ನು ಕೆಲ ಪ್ರಮಾಣದಲ್ಲಾದರೂ ತಲೆಗೆ ಇಳಿಸಿಕೊಳ್ಳುವುದಕ್ಕೆ ಇಂಥ ಸುದ್ದಿವಾಚನ ಇಂಬು ನೀಡುತ್ತದೆ.
ಜತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎದುರಾಗುವ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರಿಸಲು ಸಜ್ಜಾ ಗುವುದಕ್ಕೂ ಈ ಕಸರತ್ತು ನೆರವಾಗುತ್ತದೆ. ಈ ಮಹತ್ತರ ಸಂಗತಿಯನ್ನು ಮನೆಯಲ್ಲಿ ಪೋಷಕರೂ ಅರಿಯಬೇಕು, ಪ್ರತಿದಿನವೂ ವೃತ್ತಪತ್ರಿಕೆಗಳನ್ನು ಓದುವುದಕ್ಕೆ ಕಿರಿಯರನ್ನು ಅವರು ಉತ್ತೇಜಿಸ ಬೇಕು. ಓದುವ ಸಂಸ್ಕೃತಿಯೇ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಇಂಥದೊಂದು ಕ್ರಮದ ಅಗತ್ಯವಿದೆ.