ಅಂತಾರಾಷ್ಟ್ರೀಯ ಸಂಬಂಧ ಎನ್ನುವುದು ಮುಳ್ಳುಬೇಲಿಯ ಮೇಲೆ ಹರವಿದ ತೆಳುವಾದ ಬಟ್ಟೆ ಯಿದ್ದಂತೆ. ಮುಳ್ಳುಬೇಲಿಯೇ ಅತ್ತಿತ್ತ ಅಲುಗಾಡಿದರೂ, ಅಥವಾ ನಾವೇ ನಿರ್ಲಕ್ಷ್ಯದಿಂದ ಎಳೆದರೂ ಹರಿಯುವುದು ಬಟ್ಟೆಯೇ. ಹೀಗಾಗಿ, ದೇಶವೊಂದರ ಒಳಾಡಳಿತಕ್ಕೆ ಗಮನವನ್ನು ಕೊಡುವ ರೀತಿ ಯಲ್ಲೇ ಅಂತಾರಾಷ್ಟ್ರೀಯ ಬಾಂಧವ್ಯವನ್ನು ಕಾಪಿಟ್ಟುಕೊಳ್ಳುವುದಕ್ಕೂ ಇನ್ನಿಲ್ಲದ ಒತ್ತು ನೀಡಲಾ ಗುತ್ತದೆ.
ಆದರೆ, ಇಂಥ ಎಲ್ಲ ಸೌಹಾರ್ದಯುತ ಯತ್ನಗಳ ಹೊರತಾಗಿಯೂ, ಬಾಂಧವ್ಯಗಳು ಬಿಗಡಾಯಿಸು ವುದಿದೆ. ಇದಕ್ಕೆ ರಾಜತಾಂತ್ರಿಕ, ವಾಣಿಜ್ಯಿಕ ಹೀಗೆ ಯಾವುದೇ ಕಾರಣಗಳಿರಬಹುದು. ಪಾಕಿಸ್ತಾನ, ಚೀನಾದಂಥ ಕೆಲವೊಂದು ಸಾಂಪ್ರದಾಯಿಕ ಶತ್ರುಗಳ ಜತೆಗೆ ಕಾಲಾನುಕಾಲಕ್ಕೆ ಒಂದಿಷ್ಟು ತಿಕ್ಕಾಟ ನಡೆಯುವುದು ಬಿಟ್ಟರೆ, ಭಾರತವು ವಿಶ್ವದ ಬಹುತೇಕ ರಾಷ್ಟ್ರಗಳ ಜತೆಗೆ ಒಳ್ಳೆಯ ಸಂಬಂಧವನ್ನೇ ಹೊಂದಿದೆ.
ಇದನ್ನೂ ಓದಿ: Vishwavani Editorial: ಬದಲಾವಣೆ ಜಗದ ನಿಯಮ
ವಿಶ್ವದ ವಿವಿಧೆಡೆ ಸುನಾಮಿ/ಚಂಡಮಾರುತ, ಭೂಕಂಪದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿ ದಾಗ, ಭಾರತವು ಮುಂದೆ ನಿಂತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿ ಕೊಂಡಿದ್ದಿದೆ. ಇದು ಬಹುತೇಕ ದೇಶಗಳಿಗೆ ಗೊತ್ತಿರುವ ಸಂಗತಿಯೇ. ಇಷ್ಟಾಗಿಯೂ, ‘ವಿಶ್ವದ ದೊಡ್ಡಣ್ಣ’ ಅಮೆರಿಕ ಕಳೆದ ಕೆಲ ತಿಂಗಳಿಂದ ಭಾರತದ ಮೇಲೆ ‘ಸುಂಕ ಸಮರ’ದ ಹೆಸರಲ್ಲಿ ಕೆಂಗಣ್ಣು ಬೀರಿಕೊಂಡೇ ಬಂದಿದೆ. ಈ ಸಾಲಿಗೆ ಈಗ ಮೆಕ್ಸಿಕೊ ಕೂಡ ಸೇರಿರುವುದು ಹಲವರ ಹುಬ್ಬೇರಿಸಿದೆ; ಭಾರತದಿಂದ ತನ್ನಲ್ಲಿಗೆ ಆಮದಾಗುವ ವಿವಿಧ ಸರಕುಗಳಿಗೆ ಶೇ.50ರಷ್ಟು ಸುಂಕ ವನ್ನು ಹೇರಲು ಮೆಕ್ಸಿಕೋ ನಿರ್ಧರಿಸಿರು ವುದು, ಇದಕ್ಕೆ ಅಲ್ಲಿನ ಸಂಸತ್ತು ಸಮ್ಮತಿಸಿರುವುದು ಇತ್ತೀಚಿನ ಬೆಳವಣಿಗೆ. ತಂತಮ್ಮ ಹಿತಾಸಕ್ತಿ ಯನ್ನು ಸಂರಕ್ಷಿಸಿಕೊಳ್ಳಲು ವಿವಿಧ ದೇಶಗಳು ಇಂಥ ಕ್ರಮಕ್ಕೆ ಮುಂದಾಗುವುದರಲ್ಲಿ ಹೊಸದೇ ನಿಲ್ಲ; ಆದರೆ ಸುಂಕದ ಪ್ರಮಾಣ ಮತ್ತು ಅದು ಹೇರಿಕೆ ಯಾಗಿರುವ ಕಾಲಘಟ್ಟ ಈಗ ಚರ್ಚೆಗೆ ಗ್ರಾಸವಾಗಿರುವಂಥದ್ದು.
ಒಟ್ಟಿನಲ್ಲಿ, ‘ಮೃದು ರಾಜತಂತ್ರಕ್ಕೆ ಇದು ಕಾಲವಲ್ಲ’ ಎಂಬ ಗ್ರಹಿಕೆಯನ್ನು ಒತ್ತಿ ಹೇಳುವಂಥ ಸಾಕಷ್ಟು ಘಟನೆಗಳು ನಡೆಯುತ್ತಿವೆ. ದೇಶದ ದೊಡ್ಡವರು ಈ ನಿಟ್ಟಿನಲ್ಲಿ ಯಾವ ಕ್ರಮವನ್ನು ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕಷ್ಟೇ...