ಭಾರತದಲ್ಲಿ ಕಾಡಾನೆಗಳ ಸಂಖ್ಯೆಯು ಶೇ.18ರಷ್ಟು ಇಳಿಕೆಯಾಗಿರುವ ಮಾಹಿತಿಯನ್ನು ದೇಶದ ಮೊದಲ ಡಿಎನ್‌ಎ ಆಧಾರಿತ ಸಮೀಕ್ಷೆಯು ತಿಳಿಸಿದೆ. 2017ರಲ್ಲಿ ನಡೆಸಲಾದ ಗಣತಿಯಲ್ಲಿ 27,312ರಷ್ಟು ಇದ್ದ ಕಾಡಾನೆಗಳ ಸಂಖ್ಯೆಯು ಪ್ರಸ್ತುತ 22446ಕ್ಕೆ ಇಳಿದಿರುವುದು ಈ ಸ್ಥೂಲ ಮಾಹಿತಿಗೆ ಮೂಲಾಧಾರ.
ಮತ್ತೊಂದೆಡೆ, ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಒಂದಷ್ಟು ಹುಲಿಗಳು ಅಸು ನೀಗಿದ ಘಟನೆಯೂ ವರದಿಯಾಗಿದೆ. ಇನ್ನು, ಚಿರತೆ, ಹುಲಿ, ಆನೆಗಳಂಥ ಕಾಡುಪ್ರಾಣಿಗಳು ಅರಣ್ಯ ಪ್ರದೇಶಕ್ಕೆ ತಗುಲಿಕೊಂಡಂತಿರುವ ಊರುಗಳನ್ನು ಪ್ರವೇಶಿಸಿ, ಜನಸಮುದಾಯದಲ್ಲಿ ಭೀತಿ ಹುಟ್ಟಿಸುವ ಘಟನೆಗಳು ಆಗಾಗ ವರದಿಯಾಗುವುದಿದೆ.
ಇದನ್ನೂ ಓದಿ; Vishwavani Editorial: ಖಾರವಾದ ಪ್ರತಿಕ್ರಿಯೆ ಬೇಕಿಲ್ಲ
ಅಭಿವೃದ್ಧಿ, ವಿಸ್ತರಣೆ, ನಗರೀಕರಣ, ಕೈಗಾರಿಕೆ/ಎಸ್ ಇಜಡ್‌ಗಳ ಸ್ಥಾಪನೆ ಮುಂತಾದ ಹಣೆಪಟ್ಟಿಯಲ್ಲಿ ಅರಣ್ಯಗಳನ್ನು ನಾವು ಒತ್ತುವರಿ ಮಾಡುತ್ತಿರುವುದರಿಂದಾಗಿ ವನ್ಯಜೀವಿಗಳ ನೆಲೆಗಳಿಗೆ ಮತ್ತು ಅಲ್ಲಿನ ಸಹಜ ವಾತಾವರಣಕ್ಕೆ ಧಕ್ಕೆ ಒದಗುತ್ತಿದೆ. ಅಭಯಾರಣ್ಯಗಳ ಮಧ್ಯದಲ್ಲೇ ಹಾದುಹೋಗುವಂತೆ ರಸ್ತೆಗಳನ್ನು ನಿರ್ಮಿಸುವುದಕ್ಕೆ ಕೆಲವರು ಹಪಹಪಿಸುವುದು ಕೂಡ ಇಂಥ ಮತ್ತೊಂದು ಅನಪೇಕ್ಷಿತ ನಡೆಯೇ. ಹೀಗಾಗಿ, ವನ್ಯಜೀವಿಗಳು ಸಹಜವಾಗಿಯೇ ಕಂಗಾಲಾಗುತ್ತಿವೆ, ಆ ಪೈಕಿ ಕೆಲ ಜೀವಿಗಳು ನಾಡೊಳಗೆ ನುಗ್ಗುವಂಥ ಪರಿಸ್ಥಿತಿ ಕಾಣಬರುತ್ತಿದೆ.
ಕೆಲ ವರ್ಷಗಳ ಹಿಂದೆ, ದಂತಚೋರರ ಕಾರಣದಿಂದಾಗಿ ಆನೆಗಳ ಮಾರಣಹೋಮವೇ ನಡೆದಿ ದ್ದನ್ನು ಬಿಡಿಸಿ ಹೇಳಬೇಕಿಲ್ಲ. ‘ನಾಡಿನ ಜನರ ಬದುಕು ಸಮಾಧಾನಕರವಾಗಿ ನಡೆಯಬೇಕೆಂದಿದ್ದರೆ, ವನವೂ ಇರಬೇಕು, ವನ್ಯಜೀವಿಗಳೂ ಇರಬೇಕು ಮತ್ತು ಆ ಎರಡರ ಅಸ್ತಿತ್ವಕ್ಕೆ ಸಂಚಕಾರ ತರಬಾರದು’ ಎಂಬ ಪ್ರಜ್ಞೆಯು ಜನರಲ್ಲಿ ಮೂಡಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಅರಣ್ಯಜೀವಿಗಳ ಅಳಲನ್ನು ಮತ್ತಷ್ಟು ಕೇಳಬೇಕಾಗಿ ಬಂದೀತು, ‘ವನ್ಯಜೀವಿಗಳಿಗಿದು ಕಾಲವಲ್ಲ’ ಎಂದು ಬಹಿರಂಗವಾಗಿ ಹೇಳಬೇಕಾದ ಕ್ಷಣ ಬಂದೀತು. ಹಾಗಾಗದಿರಲಿ...