ವಿಶ್ವದ ಅತಿ ದೊಡ್ಡ ಕ್ರೀಡಾ ಟೂರ್ನಮೆಂಟ್ ಎನಿಸಿಕೊಂಡಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾಟ ಗಳಿಗೆ ತೆರೆ ಬಿದ್ದಿದೆ. ಹಲವು ಸಲದ ಚಾಂಪಿಯನ್ ಅರ್ಜೆಂಟೀನಾವನ್ನು ಮಣಿಸಿ ಸ್ಪೇನ್‌ನ ಹುಡುಗರು ಆಕ್ರಮಣಕಾರಿಯಾಗಿ ಆಡಿದ್ದು, ಕಪ್ ಗೆದ್ದುಕೊಂಡಿದ್ದಾರೆ. ಪೂರ್ಣ ಪಂದ್ಯದಲ್ಲಿ ಒಂದೇ ಒಂದು ಗೋಲನ್ನೂ ಮಾಡಲು ಅರ್ಜೆಂಟೀನಾಗೆ ಅವಕಾಶ ಮಾಡಿಕೊಡದೆ, ಹೆಚ್ಚಿನ ಅವಧಿ ಪಡೆದು ವಿಜಯದ ಗೋಲ್ ದಾಖಲಿಸಿ ಸ್ಪೇನ್ ಗೆದ್ದಿದೆ. 3 ದೇಶಗಳಲ್ಲಿ, 16 ಕ್ರೀಡಾಂಗಣಗಳಲ್ಲಿ ನಡೆದ ಈ ಮಹಾಕಾಳಗದಲ್ಲಿ 48 ತಂಡಗಳು ಭಾಗವಹಿಸಿದ್ದವು.
ಹಲವು ಕಾರಣಗಳಿಗಾಗಿ ಈ ಸಲದ ಕ್ರೀಡಾಕೂಟ ನೆನಪಿನಲ್ಲಿ ಉಳಿಯುವಂತಿದೆ. ಒಂದೂವರೆ ತಿಂಗಳ ಕಾಲದ ನೂರಾರು ಕ್ರೀಡಾಳುಗಳು ಕ್ರೀಡಾಪ್ರೇಮಿಗಳ ಮನಸೂರೆಗೊಂಡಿದ್ದಾರೆ. ಫುಟ್ಬಾಲ್ ಕ್ಷಣ ಕ್ಷಣವೂ ಆಟಗಾರರನ್ನೂ ನೋಡುಗರನ್ನೂ ಅಲರ್ಟ್ ಆಗಿರಿಸುವ, ರೋಮಾಂಚನ ನೀಡುವ ಆಟ. ಈ ಸಲದ ಪಂದ್ಯಾವಳಿಯಲ್ಲಿ ಆಡಿದ ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ, ಬ್ರೆಜಿಲ್‌ನ ನೆಯ್ಮಾರ್, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಫುಟ್ಬಾಲ್ ಕ್ಷೇತ್ರ ನೀಡಿದ ದಂತಕತೆ ಗಳಂಥ ಮಹಾನ್ ಆಟಗಾರರು. ಅವರ ತಂಡಗಳು ಸೋತ ಭಾವುಕ ಕ್ಷಣದಲ್ಲಿ ಅವರು ಕಣ್ಣೀರು ಹಾಕಿದ್ದು ಎಲ್ಲ ಕ್ರೀಡಾಪ್ರೇಮಿಗಳ ಮನಸನ್ನು ತೋಯಿಸಿದೆ.
ಇದನ್ನೂ ಓದಿ: FIFA World Cup 2026 Final ಪಂದ್ಯದಲ್ಲಿ ಕಣಕ್ಕೆ ಇಳಿದು ಇತಿಹಾಸ ಸೃಷ್ಟಿಸಿದ ಲಮೀನ್ ಯಮಾಲ್!
ಬಹುಶಃ ಇದು ಅವರ ಕೊನೆಯ ವಿಶ್ವಕಪ್ ಪಂದ್ಯಾವಳಿ ಆಗಿರುವುದು ಇದಕ್ಕೆ ಮುಖ್ಯ ಕಾರಣ. ಅವರ ನಿರ್ಗಮನದ ಹಿಂದೆಯೇ ಫ್ರಾನ್ಸ್‌ನ ಕೀಲಿಯನ್ ಎಂಬಾಪೆ, ಸ್ಪೇನ್‌ನ ಲಮಿನ್ ಯಮಾಲ್ ಮೊದಲಾದ ಹೊಸ ಪ್ರತಿಭಾವಂತರು ಫುಟ್ಬಾಲ್ ಕ್ರೀಡೆಯ ರೋಮಾಂಚನವನ್ನು ಮುಂದುವರಿ ಸುವ ಭರವಸೆ ತೋರಿದ್ದಾರೆ. ಆದರೆ ಪಂದ್ಯದ ಸೋಲಿನ ಬಳಿಕ ಕ್ರೀಡಾಸ್ಪೂರ್ತಿಯನ್ನು ಮರೆತು ಅರ್ಜೆಂಟೀನಾದ ಆಟಗಾರರು ಸ್ಪೇನ್ ಕ್ರೀಡಾಳುಗಳ ಮೇಲೇರಿ ಹೋಗಿದ್ದು ತಂಡಕ್ಕೆ ಕಪ್ಪು ಚುಕ್ಕೆ. ಇಂಥದು ಘಟಿಸುವುದು ಸಲ್ಲದು.
ಇನ್ನೂ ಒಂದು ವಿಷಾದದ ಸಂಗತಿ ಎಂದರೆ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಈ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿಯೂ ಭಾಗವಹಿಸಲಿಲ್ಲ. ನಮ್ಮ ಫುಟ್‌ಬಾಲ್ ಮೂಲವ್ಯವಸ್ಥೆಯ ಕಳಪೆ ನಿರ್ವಹಣೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಪ್ರತಿಭೆಗಳನ್ನು ಪತ್ತೆ ಹಚ್ಚಿ ತಯಾರು ಮಾಡುವಲ್ಲಿನ ನ್ಯೂನತೆಗಳಿಂದಾಗಿ ಸದ್ಯೋಭವಿಷ್ಯದಲ್ಲಿಯೂ ನಾವು ಫಿಫಾದಲ್ಲಿ ಕಾಣಿಸಿ ಕೊಳ್ಳುವ ಸಂಭವ ಇಲ್ಲ.
ನಮ್ಮ ಗೋವಾದಷ್ಟು ಸಣ್ಣ ದೇಶವಾದ ಕೇಪ್ ವರ್ಡೆ ಈ ಟೂರ್ನಿಯಲ್ಲಿ ಗಮನ ಸೆಳೆಯುವಂತೆ ಆಡಿದೆ. ಕ್ರಿಕೆಟ್ ಮೇಲಿರುವ ಅತಿ ಮೋಹವನ್ನು ತೊರೆದು, ಮುಂದಿನ ಸಲವಾದರೂ ಫಿಫಾದಲ್ಲಿ ಕಾಣಿಸಿಕೊಳ್ಳಲು ನಾವು ಯತ್ನಿಸಬೇಕಿದೆ.