FIFA World Cup 2026 Final ಪಂದ್ಯದಲ್ಲಿ ಕಣಕ್ಕೆ ಇಳಿದು ಇತಿಹಾಸ ಸೃಷ್ಟಿಸಿದ ಲಮೀನ್ ಯಮಾಲ್!
ಅರ್ಜೆಂಟೀನಾ ವಿರುದ್ಧ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಸ್ಪೇನ್ ತಂಡದ ಯುವ ಆಟಗಾರ ಲಮೀನ್ ಯಮಾಲ್ ಅವರು ನೂತನ ಮೈಲುಗಲ್ಲು ತಲುಪಿದ್ದಾರೆ. ಹದಿಹರೆಯದಲ್ಲೇ ಯುಇಎಫ್‌ಎ ಯುರೋ ಫೈನಲ್ ಹಾಗೂ ಫಿಫಾ ವಿಶ್ವಕಪ್ ಫೈನಲ್ ಎರಡರಲ್ಲೂ ಆಡಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.
ಫಿಫಾ ವಿಶ್ವಕಪ್ ಫೈನಲ್ ಆಡುವ ಮೂಲಕ ನೂತನ ಮೈಲುಗಲ್ಲು ತಲುಪಿದ ಲಮೀನ್ ಯಮಾಲ್. -
ನ್ಯೂ ಜೆರ್ಸಿ: ಅರ್ಜೆಂಟೀನಾ ಹಾಗೂ ಸ್ಪೇನ್ (ARG vs SPA) ತಂಡಗಳು ಜುಲೈ 20ರಂದು ನ್ಯೂಯಾರ್ಕ್-ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ 2026ರ ಫಿಫಾ ವಿಶ್ವಕಪ್ ಫೈನಲ್ (FIFA World Cup 2026) ಪಂದ್ಯದಲ್ಲಿ ಕಾದಾಟ ನಡೆಸಿದವು. ಎರಡೂ ತಂಡಗಳಿಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ. ಸ್ಪೇನ್‌ಗೆ 16 ವರ್ಷಗಳ ಬಳಿಕ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಎದುರಾಗಿದ್ದು, ತಂಡದಲ್ಲಿ ಹಲವು ಸ್ಟಾರ್ ಆಟಗಾರರಿದ್ದರೂ ಎಲ್ಲರ ಗಮನ ಸೆಳೆದಿರುವುದು ಬಾರ್ಸಿಲೋನಾದ ಯುವ ಪ್ರತಿಭೆ ಲಮೀನ್ ಯಮಾಲ್ (Lamine Yamal)!
ಫೈನಲ್ ಪಂದ್ಯಕ್ಕೆ ಸ್ಪೇನ್‌ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರುವ ಯಮಾಲ್, ಹದಿಹರೆಯದಲ್ಲೇ ಯುಇಎಫ್‌ಎ ಯುರೋ ಫೈನಲ್ ಮತ್ತು ಫಿಫಾ ವಿಶ್ವಕಪ್ ಫೈನಲ್ ಎರಡರಲ್ಲೂ ಆಡಿದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಯುವ ಸೆನ್ಸೇಷನಲ್ ಲಮೀನ್ ಯಮಾಲ್, ಕೇವಲ 19 ವರ್ಷ 6 ದಿನಗಳ ವಯಸ್ಸಿನಲ್ಲಿ 2024ರ ಯುರೋ ಫೈನಲ್‌ನಲ್ಲಿ ಸ್ಪೇನ್ ಪರ ಕಣಕ್ಕಿಳಿದಿದ್ದರೆ, ಇದೀಗ 2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲೂ ಆಡುವ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.
FIFA World Cup 2026 Final: ನೆರೆಹೊರೆಯ ದೇಶಗಳೇ ಅರ್ಜೆಂಟೀನಾದ ಸೋಲನ್ನು ಬಯಸುತ್ತಿವೆ! ಏಕೆ ಗೊತ್ತೆ?
ಇದರ ಜೊತೆಗೆ ಯಮಾಲ್ ಮತ್ತೊಂದು ಅಪರೂಪದ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಈಗಾಗಲೇ 2024ರ ಯುರೋ ಕಪ್ ಗೆದ್ದಿರುವ ಅವರು, ವಿಶ್ವಕಪ್ ಪ್ರಶಸ್ತಿಯನ್ನೂ ಗೆದ್ದರೆ, ಹದಿಹರೆಯದಲ್ಲೇ ಯುರೋ ಮತ್ತು ಫಿಫಾ ವಿಶ್ವಕಪ್ ಎರಡೂ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟ್ರೋಫಿಗಳನ್ನು ಜಯಿಸಿದ ಇತಿಹಾಸದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಎಲೈಟ್ ಲಿಸ್ಟ್‌ಗೆ ಸೇರಿದ ಲಮೀನ್ ಯಮಾಲ್
ಸ್ಪೇನ್‌ನ ಲಮೀನ್ ಯಮಾಲ್ ಹಾಗೂ ಅವರ ಸಹ ಆಟಗಾರ ಪೌ ಕುಬಾರ್ಸಿ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಇತಿಹಾಸದ ನಾಲ್ಕನೇ ಮತ್ತು ಐದನೇ ಹದಿಹರೆಯದ ಆಟಗಾರರು ಎಂಬ ಅಪರೂಪದ ಸಾಧನೆ ಮಾಡಿದ್ದಾರೆ. ಆ ಮೂಲಕ ಅವರು ಫುಟ್ಬಾಲ್ ದಂತಕಥೆಗಳಾದ ಪೀಲೆ, ಜ್ಯೂಸೆಪ್ಪೆ ಬೆರ್ಗೋಮಿ ಮತ್ತು ಕಿಲಿಯನ್ ಎಂಬಾಪೆ ಅವರನನು ಒಳಗೊಂಡ ಸಾಲಿಗೆ ಸೇರ್ಪಡೆಯಾಗಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಹದಿಹರೆಯದಲ್ಲೇ ಕಣಕ್ಕಿಳಿದ ಅಪರೂಪದ ಆಟಗಾರರ ಪಟ್ಟಿಯಲ್ಲಿ ಇದೀಗ ಯಮಾಲ್ ಮತ್ತು ಕುಬಾರ್ಸಿ ಕೂಡ ಸೇರ್ಪಡೆಯಾಗಿದ್ದಾರೆ.
The world stage is ready.#FIFAWorldCup pic.twitter.com/OzBObT1uHB
— FIFA World Cup (@FIFAWorldCup) July 19, 2026
ಫಿಫಾ ವಿಶ್ವಕಪ್ ಫೈನಲ್ ಆಡಿದ ಹದಿಹರಿಯದ ಆಟಗಾರರು
ಪೀಲೆ (ಬ್ರೆಜಿಲ್ 1958) vs ಸ್ವೀಡನ್) 17 ವರ್ಷ, 249 ದಿನಗಳು
ಜ್ಯೂಸೆಪ್ಪೆ ಬೆರ್ಗೋಮಿ (ಇಟಲಿ 1982) vs ವೆಸ್ಟ್ ಜರ್ಮನಿ, 18 ವರ್ಷ, 174 ದಿನಗಳು
ಕಿಲಿಯನ್ ಎಂಬಾಪೆ (ಫ್ರಾನ್ಸ್ 2018) vs ಕ್ರೊವೇಷ್ಯಾ, 19 ವರ್ಷ, 207 ದಿನಗಳು
ಲಮೀನ್ ಯಮಾಲ್ (ಸ್ಪೇನ್ 2026) vs ಅರ್ಜೆಂಟೀನಾ, 19 ವರ್ಷ, 6 ದಿನಗಳು
ಪೌ ಕುಬಾರ್ಸಿ (ಸ್ಪೇನ್ 2026) vs ಅರ್ಜೆಂಟೀನಾ, 19 ವರ್ಷ , 179 ದಿನಗಳು
ಲಮೀನ್ ಯಮಾಲ್‌ಗೆ ಅರ್ಜೆಂಟೀನಾ ಕೋಚ್ ಮೆಚ್ಚುಗೆ
ಫಿಫಾ ವಿಶ್ವಕಪ್ 2026ರ ಟೂರ್ನಿಯ ಫೈನಲ್‌ಗೂ ಮುನ್ನ ಮಾತನಾಡಿದ್ದ ಅರ್ಜೆಂಟೀನಾ ಮುಖ್ಯ ಕೋಚ್ ಲಿಯೋನೆಲ್ ಸ್ಕಲೋನಿ, ಸ್ಪೇನ್‌ನ ಯುವ ತಾರೆ ಲಮೀನ್ ಯಮಾಲ್ ಅವರನ್ನು ಮನಸಾರೆ ಹೊಗಳಿದ್ದಾರೆ. ಯಮಾಲ್ ಅವರನ್ನು ಲಿಯೋನೆಲ್ ಮೆಸ್ಸಿಯಂತಹ ಅಪರೂಪದ ಪ್ರತಿಭೆಗೆ ಹೋಲಿಸಿದ ಸ್ಕಲೋನಿ, ಅವರನ್ನು ತಡೆಯುವ ಏಕೈಕ ಮಾರ್ಗ ಎಂದರೆ ತಮಾಷೆಯಾಗಿ ಅವರನ್ನೇ ಕೊಠಡಿಯಲ್ಲಿ ಬಂದ್ ಮಾಡುವುದು ಎಂದು ಹೇಳಿದ್ದಾರೆ.
ಬುಕಾಯೊ ಸಕ ಹ್ಯಾಟ್ರಿಕ್ ಗೋಲು; ಫ್ರಾನ್ಸ್ ಮಣಿಸಿ ಕಂಚಿನ ಪದಕ ಗೆದ್ದ ಇಂಗ್ಲೆಂಡ್
"ಲಮೀನ್ ಯಮಾಲ್ ಅವರನ್ನು ಹೇಗೆ ತಡೆಯುವುದು? ಸಾಧ್ಯವಾದರೆ ಅವರನ್ನು ಅವರ ಕೊಠಡಿಯಲ್ಲೇ ಬಂದ್ ಮಾಡಿಬಿಡಬೇಕೆಂದು ಅನಿಸುತ್ತದೆ!" ಎಂದು ಹಾಸ್ಯವಾಗಿ ಆರಂಭಿಸಿದ ಸ್ಕಲೋನಿ, "ಯಮಾಲ್ ನಿಜಕ್ಕೂ ಅಸಾಧಾರಣ ಪ್ರತಿಭೆ. ಈ ಹುಡುಗ ಫುಟ್ಬಾಲ್‌ಗೆ ಒಂದು ಅಮೂಲ್ಯ ಸಂಪತ್ತು. ಇನ್ನೂ ತುಂಬಾ ಚಿಕ್ಕ ವಯಸ್ಸಿನಲ್ಲಿರುವ ಅವರಲ್ಲಿ ಸಾಕಷ್ಟು ಸಾಮರ್ಥ್ಯ ಅಡಗಿದೆ. ಭವಿಷ್ಯದಲ್ಲಿ ಸ್ಪೇನ್‌ಗೆ ಅವರು ಅಪಾರ ಯಶಸ್ಸು ತಂದುಕೊಡಲಿದ್ದಾರೆ. ಆದರೆ ಅದು ಭಾನುವಾರದ ಫೈನಲ್‌ನಲ್ಲಿ ಆಗದಿರಲಿ ಎಂಬುದು ನಮ್ಮ ಆಶಯ," ಎಂದರು.
"ಅವರು ಲಿಯೋನೆಲ್ ಮೆಸ್ಸಿಯಂತೆಯೇ, ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗದ ಆಟಗಾರ. ಅವರಂತಹ ಪ್ರತಿಭಾವಂತರನ್ನು ತಡೆಯುವುದು ಯಾವ ತಂಡಕ್ಕೂ ಅತ್ಯಂತ ಕಠಿಣ ಸವಾಲು," ಎಂದು ಸ್ಕಲೋನಿ ಅಭಿಪ್ರಾಯಪಟ್ಟರು.