ಇದು ನಿಜಕ್ಕೂ ಆಘಾತಕಾರಿ ಸಂಗತಿ. ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿರುವ ಸಮಾಜ ನಮ್ಮದು. ‘ಮಾತೃದೇವೋ ಭವ, ಪಿತೃದೇವೋ ಭವ’ ಎಂಬ ನುಡಿಯ ಮುಂದುವರಿದ ಭಾಗವಾಗಿ ‘ಆಚಾರ್ಯ ದೇವೋ ಭವ’ ಎಂಬ ಸದಾಶಯಕ್ಕೂ ಆಸ್ಪದ ನೀಡಿದ ಪರಂಪರೆ ನಮ್ಮದು. ‘ಗುರುವಿಗಿಂತ ದೊಡ್ಡದಾದುದು ಯಾವುದೂ ಇಲ್ಲ’ ಎಂಬ ಧ್ಯೇಯವಾಕ್ಯ ವನ್ನು ನಿಷ್ಠೆಯಿಂದ ಅನುಸರಿಸುವ ಸಂಸ್ಕೃತಿ ನಮ್ಮದು. ಆದರೆ, ಇಂಥ ಗ್ರಹಿಕೆಗಳಿಗೆ ಧಕ್ಕೆಯಾದಾಗ ಯಾರಲ್ಲೇ ಆದರೂ ಅಸಮಾಧಾನ ಮತ್ತು ಆಕ್ರೋಶಗಳು ಉಕ್ಕುವುದು ಸಹಜ.
ಈ ಮಾತಿಗೆ ಪುಷ್ಟಿ ನೀಡುವಂತಿದೆ ಗುಜರಾತಿನ ಭರೂಚ್‌ನ ಶಾಲೆಯೊಂದರಲ್ಲಿ ನಡೆದ ಘಟನೆ. ಅಲ್ಲಿನ ಹಳೆಯ ವಿದ್ಯಾರ್ಥಿಗಳ ಸಭೆಗೆ ಬಂದ ಯುವತಿಯೊಬ್ಬಳ ಮೇಲೆ ಶಾಲೆಯ ಮುಖ್ಯೋ ಪಾಧ್ಯಾಯರೇ ಅತ್ಯಾಚಾರ ನಡೆಸಿದರು ಎನ್ನಲಾದ ಘಟನೆಯಿದು. 2021-22ರಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗಲೂ ಈಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು, ಆದರೆ ಆರೋಪಿಯು ಬೆದರಿಸಿದ್ದರಿಂದ ಹಿಂದೆ ದೂರು ನೀಡಿರಲಿಲ್ಲ ಎಂಬುದು ಈಕೆ ಪೊಲೀಸರಲ್ಲಿ ಹೇಳಿಕೊಂಡಿರುವ ಮಾತು.
ಮನೆಯಲ್ಲಿದ್ದಾಗ ತಮ್ಮ ರಕ್ಷಾಕವಚದಲ್ಲಿರುವ ಮಕ್ಕಳು ಶಾಲೆಗೆ ಹೋದಾಗ, ಅಲ್ಲಿನ ಶಿಕ್ಷಕರು ಅವರ ನಿಗಾ ನೋಡುತ್ತಾರೆ ಎಂಬ ನಂಬಿಕೆ ಪೋಷಕರಲ್ಲಿರುತ್ತದೆ. ಜತೆಗೆ, ಮನೆ ಯನ್ನು ಬಿಟ್ಟರೆ ಮಕ್ಕಳು ಹೆಚ್ಚು ಹೊತ್ತು ಇರುವುದೇ ಶಾಲೆಯಲ್ಲಾದ್ದರಿಂದ, ಶಿಕ್ಷಕರ ಮೇಲೆ ಇಂಥದೊಂದು ವಿಶ್ವಾಸವಿಡುವುದು ಸಹಜ ನಡೆಯೇ ಆಗಿರುತ್ತದೆ. ಅಂಥ ವಿಶ್ವಾಸಕ್ಕೆ ಚ್ಯುತಿಯಾದಲ್ಲಿ, ಅನ್ಯಾಯ ಕ್ಕೊಳಗಾದ ಮಕ್ಕಳು ಮತ್ತು ಅವರ ಪೋಷಕರು ಏನು ಮಾಡಬೇಕು, ಯಾರಲ್ಲಿ ಮೊರೆ ಹೋಗಬೇಕು? ಇಲ್ಲಿ ನೀತಿಶಿಕ್ಷಣದ ಅಗತ್ಯವಿರುವುದು ಯಾರಿಗೆ? ಹೆಣ್ಣು ಮಕ್ಕಳ ವಿಷಯ ಬಂದಾಗ, ಅವರ ಭವಿಷ್ಯದ ಬದುಕಿನ ದೃಷ್ಟಿಯಿಟ್ಟು ಕೊಂಡು ಇಂಥ ದೌರ್ಜನ್ಯಗಳನ್ನು ಕೆಲವರು ಮರೆಮಾಚುವುದಿದೆ.
ಆದರೆ, ದೌರ್ಜನ್ಯ ಘಟಿಸಿದ ವೇಳೆ ಆ ಹೆಣ್ಣಿನ ಹೃದಯದಲ್ಲಿ ಆಗುವ ಆಳಗಾಯವು ಬಹಳ ಕಾಲದವರೆಗೆ ಮಾಸದೆ ಉಳಿದುಬಿಟ್ಟಿರುತ್ತದೆ ಎಂಬುದು ಸತ್ಯ. ದುರ್ಮಾರ್ಗಿಗಳಿಗೆ ದೇವರೇ ಬುದ್ಧಿ ಹೇಳಬೇಕು!