Vishwavani Editorial: ಬದಲಾವಣೆ ಜಗದ ನಿಯಮ
ಹಲವು ಹನ್ನೊಂದು ಭಯ ಮತ್ತು ಆತಂಕಗಳ ನಡುವೆಯೂ ‘ಕೃತಕ ಬುದ್ಧಿಮತ್ತೆ’ (ಆರ್ಟಿಫಿ ಷಿಯಲ್ ಇಂಟೆಲಿಜೆನ್ಸ್- ಎಐ) ಎಂಬ ವಿನೂತನ ಕಾರ್ಯಸಾಧ್ಯತೆಯ ಕಡೆಗೆ ಇಡೀ ವಿಶ್ವವೇ ಹೊರಳಬೇಕಾಗಿ ಬಂದಿದೆ, ಭಾರತವೂ ಇದಕ್ಕೆ ಹೊರತಲ್ಲ. ‘ಎಐ’ ಕ್ಷೇತ್ರದಲ್ಲಿ ತನ್ನದೇ ಆದ ಪ್ರಬಲ ತಂತ್ರಾಂಶವನ್ನು ಹೊಂದಲು ಭಾರತ ಸಂಕಲ್ಪಿಸಿರುವುದು ‘ಬದಲಾವಣೆಯೇ ಜಗದ ನಿಯಮ’ ಎಂಬ ಗ್ರಹಿಕೆಯ ಪುನರು ಚ್ಚರಣೆಯೇ ಆಗಿದೆ ಎನ್ನಲಡ್ಡಿಯಲ್ಲ
ಭಾರತವು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಷ್ಟೇ ಅಲ್ಲ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನೂ ಒತ್ತಿರುವ, ತನ್ಮೂಲಕ ಪ್ರಪಂಚ ಭೂಪಟದಲ್ಲಿ ತನ್ನ ಹೆಸರು ಎದ್ದು ಕಾಣುವಂತೆ ಮಾಡಿರುವ ರಾಷ್ಟ್ರವೂ ಹೌದು. ಇಸ್ರೊ ಸಂಸ್ಥೆ ಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾಲಾನುಕಾಲಕ್ಕೆ ಮೆರೆಯುತ್ತಿರುವ ಸಾಧನೆಗಳಷ್ಟೇ ಅಲ್ಲದೆ, ಮಾಹಿತಿ ತಂತ್ರಜ್ಞಾನ ಸಂಬಂಧಿತ ತಂತ್ರಾಂಶಗಳ ತಯಾರಿ ಹಾಗೂ ಹೊರಗುತ್ತಿಗೆ ಕಾರ್ಯದಲ್ಲಿ ನಮ್ಮವರು ಮೆರೆಯುತ್ತಿರುವ ಪಾರಮ್ಯ ಇದಕ್ಕೆ ಒಂದೆರಡು ಉದಾಹರಣೆಗಳೆನ್ನಬಹುದು.
ಆದರೆ, ಹಲವು ಹನ್ನೊಂದು ಭಯ ಮತ್ತು ಆತಂಕಗಳ ನಡುವೆಯೂ ‘ಕೃತಕ ಬುದ್ಧಿಮತ್ತೆ’ (ಆರ್ಟಿಫಿ ಷಿಯಲ್ ಇಂಟೆಲಿಜೆನ್ಸ್- ಎಐ) ಎಂಬ ವಿನೂತನ ಕಾರ್ಯಸಾಧ್ಯತೆಯ ಕಡೆಗೆ ಇಡೀ ವಿಶ್ವವೇ ಹೊರಳಬೇಕಾಗಿ ಬಂದಿದೆ, ಭಾರತವೂ ಇದಕ್ಕೆ ಹೊರತಲ್ಲ. ‘ಎಐ’ ಕ್ಷೇತ್ರದಲ್ಲಿ ತನ್ನದೇ ಆದ ಪ್ರಬಲ ತಂತ್ರಾಂಶವನ್ನು ಹೊಂದಲು ಭಾರತ ಸಂಕಲ್ಪಿಸಿರುವುದು ‘ಬದಲಾವಣೆಯೇ ಜಗದ ನಿಯಮ’ ಎಂಬ ಗ್ರಹಿಕೆಯ ಪುನರುಚ್ಚರಣೆಯೇ ಆಗಿದೆ ಎನ್ನಲಡ್ಡಿಯಲ್ಲ.
ಅಮೆರಿಕ, ಬ್ರಿಟನ್ ಮತ್ತು ಚೀನಾ ದೇಶಗಳು ಈಗಾಗಲೇ ಪ್ರಾಬಲ್ಯ ಮೆರೆದಿರುವ ‘ಎಐ ಮಾದರಿ’ ವಲಯದಲ್ಲಿ ಭಾರತವೂ ಅಡಿಯಿಡಲಿರುವುದು, ಕೃತಕ ಬುದ್ಧಿಮತ್ತೆ ಆಧರಿಸಿದ ಹೊಸಬಗೆಯ ತಂತ್ರಾಂಶ ಮಾದರಿಯ ತಯಾರಿ ಮತ್ತು ಅನಾವರಣಕ್ಕೆ ಸಜ್ಜುಗೊಂಡಿರುವುದು ಹೆಮ್ಮೆಯ ಸಂಗತಿ ಯೇ. ಈಗಾಗಲೇ ಅಮೆರಿಕದ ‘ಚಾಟ್ ಜಿಪಿಟಿ’ ಮತ್ತು ಚೀನಾದ ‘ಡೀಪ್ ಸೀಕ್’ ತಂತ್ರಾಂಶಗಳು ಈ ವಲಯದಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಭಾರತವು ಈ ಪೈಪೋಟಿಯನ್ನು ಎದುರಿಸಿ ಹೇಗೆ ತನ್ನ ದೇ ಆದ ಗುರುತನ್ನು ಸ್ಥಾಪಿಸಲಿದೆ ಎಂಬುದು ಕುತೂಹಲವನ್ನು ಹುಟ್ಟುಹಾಕಿದೆ.
ಯಾಕೆಂದರೆ, ತಾಂತ್ರಿಕ ಕ್ಷೇತ್ರದಲ್ಲಿ ಇಂದು ‘ಹೊಸತು’ ಎನಿಸಿಕೊಂಡಿದ್ದು ಕೆಲ ದಿನಗಳಲ್ಲೇ ‘ಹಳತರ’ ಲೇಪವನ್ನು ಮೆತ್ತಿಕೊಳ್ಳುತ್ತದೆ; ಹೀಗಾಗಿ ಯಾವುದೇ ಉತ್ಪನ್ನ ಅಥವಾ ಸೇವೆಯು ದೀರ್ಘ ಕಾಲದವರೆಗೆ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿದ್ದು ಪಾರಮ್ಯವನ್ನು ಸಾಧಿಸಬೇಕೆಂದರೆ, ಅದು ಹಲವು ಅನನ್ಯ ಅಂಶಗಳನ್ನು ಒಳಗೊಂಡಿರಬೇಕಾಗುತ್ತದೆ. ಭಾರತದಲ್ಲಿರುವ ಕುಶಲಿ ತಂತ್ರಜ್ಞರು ಹಾಗೂ ಅವರ ಉತ್ಸಾಹವನ್ನು ಗಮನಿಸಿದರೆ ಇದು ಈಡೇರುವುದೇನೂ ಕಷ್ಟವಾಗದು.