ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅತಿರೇಕಗಳಿಗೆ ಲಗಾಮು ಹಾಕಿ

ಸಾಲ ಮರು ಪಾವತಿ ಗೆ ಇರುವ ಮಾರ್ಗಸೂಚಿಯನ್ನು ಬಿಟ್ಟು ಬೇರೆ ರೀತಿಯಲ್ಲಿ ವಸೂಲಿಗೆ ಮುಂದಾ ದರೆ ಕಠಿಣಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವುದು ಶ್ಲಾಘನೀಯ

ಸಚಿವರು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆ ಗಳ ಮುಖ್ಯಸ್ಥರ ತುರ್ತುಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದ ಹಿನ್ನೆಲೆಯಲ್ಲಿ, ಸಚಿವರು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆ ಗಳ ಮುಖ್ಯಸ್ಥರ ತುರ್ತುಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಾಲ ಮರು ಪಾವತಿ ಗೆ ಇರುವ ಮಾರ್ಗಸೂಚಿಯನ್ನು ಬಿಟ್ಟು ಬೇರೆ ರೀತಿಯಲ್ಲಿ ವಸೂಲಿಗೆ ಮುಂದಾದರೆ ಕಠಿಣಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವುದು ಶ್ಲಾಘನೀಯ. ಜತೆಗೆ, ಇಂಥ ಸಂಸ್ಥೆಗಳ ದಾಂಧಲೆ ತಗ್ಗಿಸಲು ಮತ್ತು ಸಾರ್ವಜನಿಕರಿಗೆ ರಕ್ಷಣೆ ನೀಡಲು ಸುಗ್ರೀವಾಜ್ಞೆ ಹೊರಡಿಸಲೂ ಸರಕಾರ ತೀರ್ಮಾನಿಸಿರು ವುದು ಸಮಾಜದ ವಿವಿಧ ವರ್ಗಗಳಲ್ಲಿ ಸಮಾಧಾನ ತಂದಿದೆ ಎನ್ನಬೇಕು. ಮೈಕ್ರೋಫೈನಾನ್ಸ್ ವಲಯದ ಕಿರಿಕಿರಿಯನ್ನು ನಿವಾರಿಸುವುದರ ಜತೆ ಜತೆಗೆ, ಮತ್ತೊಂದು ಅಪಸವ್ಯದ ನಿವಾರಣೆಗೂ ಸರಕಾರ ಕಟಿಬದ್ಧವಾಗಬೇಕಿದೆ.

ಅದುವೇ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ. ಇದು ರಾಜ್ಯದಲ್ಲಿ ಬಹಳ ಕಾಲದಿಂದ ಅವ್ಯಾ ಹತವಾಗಿ ನಡೆಯುತ್ತಾ ಬಂದಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಮೊನ್ನೆ ಗದಗ್‌ನ ಬೆಟಗೇರಿಯಲ್ಲಿ ಇಂಥದೊಂದು ಅತಿರೇಕದ ಕಿರುಕುಳದ ಘಟನೆ ನಡೆದಿದೆ. ಒಂದು ಲಕ್ಷ ರುಪಾಯಿ ಮೊತ್ತದ ಸಾಲಕ್ಕೆ ಬಡ್ಡಿ ನೀಡಲಿಲ್ಲವೆಂದು ಮೀಟರ್ ಬಡ್ಡಿ ದಂಧೆಕೋರರು ವ್ಯಕ್ತಿಯೊಬ್ಬನನ್ನು ಮನೆಯೊಂದರಲ್ಲಿ ಕೂಡಿಹಾಕಿ, ಆತನ ಬಟ್ಟೆ ಬಿಚ್ಚಿ, ಬಾಯಿಗೆ ಬಟ್ಟೆ ತುರುಕಿ ಚಿತ್ರಹಿಂಸೆ ನೀಡಿರುವ ಪ್ರಸಂಗವಿದು.

ಇದನ್ನೂ ಓದಿ: Vishwavani Editorial: ಮೆಟ್ರೋ; ಗಾಯದ ಮೇಲೆ ಬರೆ

ಮತ್ತೊಂದೆಡೆ, ಇಂಥವರ ಕಿರುಕುಳವನ್ನು ಸಹಿಸಲಾಗದ ಯುವಕನೊಬ್ಬ ನೇಣಿಗೆ ಕೊರಳೊಡ್ಡಿದ ದುರಂತವು ಕೆ.ಆರ್.ಪೇಟೆಯ ಗ್ರಾಮವೊಂದರಲ್ಲಿ ಜರುಗಿದೆ. ಮೀಟರ್ ಬಡ್ಡಿ ದಂಧೆಯವರ ಕರಾಳತೆ ಯಾವ ಮಟ್ಟಿಗಿದೆ, ಅವರ ಕಬಂಧಬಾಹು ಎಲ್ಲಿಯವರೆಗೆ ಚಾಚಿದೆ ಎಂಬುದಕ್ಕೆ ಈ ಎರಡು ಉದಾಹರಣೆ ಗಳು ಸಾಕು.

ನೀತಿ-ನಿಯಮಗಳ ಭಯವಿಲ್ಲದಿದ್ದರೆ, ಕಾನೂನಿನ ಕಟ್ಟುಪಾಡಿನ ಬಿಗಿಯಿಲ್ಲದಿದ್ದರೆ ಜರುಗು ವಂಥ ಅಪಸವ್ಯಗಳಿವು ಎಂಬುದು ಸ್ಪಷ್ಟಗೋಚರ. ಈ ಅನಾಗರಿಕ ಪ್ರವೃತ್ತಿಗೆ ಸರಕಾರ ಇನ್ನಾದರೂ ಪರಿ ಣಾಮಕಾರಿಯಾಗಿ ಮದ್ದು ಅರೆಯಬೇಕಿದೆ. ಇಲ್ಲವಾದಲ್ಲಿ, ರಾಜ್ಯದ ಉದ್ದಗಲಕ್ಕೂ ಇಂಥ ಮತ್ತಷ್ಟು ಘಟನೆಗಳು ಪುನರಾವರ್ತನೆಯಾದರೆ ಅದೇನೂ ಅಚ್ಚರಿಯ ಸಂಗತಿಯಲ್ಲ. ಸುಖೀ ಸಮಾಜದ ನಿರ್ಮಾಣ ಸರಕಾರದ ಸಂಕಲ್ಪವಾಗಲಿ.