ಇರಾನ್‌ನಲ್ಲಿ ಅಲ್ಲಿನ ಆರ್ಥಿಕ ದುಸ್ಥಿತಿಯ ವಿರುದ್ಧ ಶುರುವಾದ ಆಕ್ರೋಶ, ಮೌಲ್ವಿಗಳೇ ದೇಶ ಬಿಟ್ಟು ತೊಲಗಿ ಎನ್ನುವ ದನಿಯಾಗಿ ಬದಲಾಗಿದೆ. ಬುಧವಾರ ಬೆಳಗ್ಗೆ ಹೊತ್ತಿಗೆ ಸಾವಿನ ಸಂಖ್ಯೆ 2571 ದಾಟಿದೆ ಎಂದು ವರದಿಗಳಾಗಿವೆ. ಈ ಪ್ರತಿಭಟನೆಗೆ ಅಮೆರಿಕದ ನೇರ ಬೆಂಬಲವಿದೆ ಎನ್ನುವುದು ಜಗಜ್ಜಾಹೀರಾಗಿದೆ. ಸ್ವತಃ ಟ್ರಂಪ್ ಹೋರಾಟ ನಿಲ್ಲಿಸಬೇಡಿ ಎಂದು ಜನರಿಗೆ ಕರೆ ನೀಡಿದ್ದಾರೆ.
ಇರಾನ್‌ನಲ್ಲಿ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿಯೇ ಸರ್ವೋಚ್ಚ ನಾಯಕ. ಉಳಿದೆಲ್ಲ ಸರಕಾರಿ ಸ್ಥಾನಗಳೆಲ್ಲ ಹೆಸರಿಗಷ್ಟೇ. ಮತಾಂಧತೆಯನ್ನು ಇಷ್ಟಪಡುವ ವ್ಯಕ್ತಿಗಳಿಗೆ ಅಲ್ಲಿನ ಪರಿಸ್ಥಿತಿ ಒಗ್ಗಬಹುದೇನೋ. ಆದರೆ ಖಮೇನಿಯ ನಾಯಕತ್ವ ಸ್ವಾತಂತ್ರ್ಯ ಪ್ರಿಯ ಧಾರ್ಮಿಕ ಮನಸ್ಸುಗಳಿಗೆ ಬಹಳ ಕಷ್ಟಕರವಾಗಿ ಪರಿಣಮಿಸಿದೆ.
ಇದನ್ನೂ ಓದಿ: Vishwavani Editorial: ಡಿಜಿಟಲ್ ಗುಮ್ಮನ ಕಾಟ
ನನಗೆ ಧರ್ಮ ಬೇಕು, ದೇವರು ಬೇಕು, ಅದರ ಸಂಪ್ರದಾಯದ ಚೌಕಟ್ಟುಗಳು, ಕರ್ಮಠತನ ಬೇಡ ಎನ್ನುವವರಿಗೆ ಬದುಕು ದುಸ್ತರವಾಗಿದೆ. ಇಂತಹ ಹೊತ್ತಿನಲ್ಲಿ ಅಮೆರಿಕ ಇರಾನ್‌ನಲ್ಲಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಈ ಸ್ವಾತಂತ್ರ್ಯಪ್ರಿಯ ಮನಸ್ಸುಗಳಿಗೆ ಸಂತಸವನ್ನು ಒದಗಿಸಿದೆ. ಆದರೆ ಅಮೆರಿಕ ಯಾವುದನ್ನೂ ತನ್ನ ಹಿತಾಸಕ್ತಿ ಇಲ್ಲದೇ ಮಾಡುವುದಿಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿರುವ ಸತ್ಯ.
ಇದುವರೆಗೆ ಇರಾನ್ ಅಮೆರಿಕಕ್ಕೆ ತಲೆಕೆಡಿಸಿಕೊಳ್ಳದೇ ಎಲ್ಲ ವ್ಯಾಪಾರ ವಹಿವಾಟುಗಳನ್ನು ನಡೆಸು ತ್ತಿದೆ. ಇದು ಹಿಂದಿನಿಂದಲೂ ಅಮೆರಿಕಕ್ಕೆ ಬಿಸಿತುಪ್ಪವೇ ಆಗಿದೆ. ಅಮೆರಿಕ ಎಲ್ಲ ರೀತಿಯ ಆರ್ಥಿಕ ನಿರ್ಬಂಧ ಹೇರಿ, ಬದುಕೇ ದುಸ್ತರವಾದರೂ ಇರಾನ್ ನಾಯಕರು ಅಮೆರಿಕಕ್ಕೆ ತಲೆಕೆಡಿಸಿಕೊಂಡಿಲ್ಲ.
ಇಂತಹ ಹೊತ್ತಿನಲ್ಲಿ ಅಮೆರಿಕ ಇರಾನ್ ಮೇಲೆ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಇರಾನ್ ಜನತೆಯ ಹಿತಕ್ಕಾಗಿ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ. ಆದರೆ ಇದರಿಂದ ಪರೋಕ್ಷವಾಗಿ ಅಲ್ಲಿ ಸ್ವಾತಂತ್ರ್ಯಪ್ರಿಯರಿಗೆ ನೆರವಾಗಲಿದೆ ಎಂದು ಮಾತ್ರ ಹೇಳಬಹುದು.