ನೋಡ ನೋಡುತ್ತಲೇ 2025ರ ವರ್ಷವು ಮುಗಿಯುತ್ತಾ ಬಂದಿದೆ. ಈ 12 ತಿಂಗಳ ಅವಧಿಯಲ್ಲಿ ವಾಣಿಜ್ಯಿಕವಾಗಿ ಗೆದ್ದ ಚಲನಚಿತ್ರಗಳೆಷ್ಟು? ಅವುಗಳ ಪೈಕಿ ಜನರಿಗೆ ನಿಜಾರ್ಥದ ಮನರಂಜನೆಯ ರಸಕವಳವನ್ನು ಉಣಬಡಿಸಿದ್ದು ಎಷ್ಟು? ಎಂದು ಪ್ರಶ್ನಿಸಿಕೊಂಡರೆ, ಬಹುತೇಕ ಹೊಮ್ಮುವುದು ನಿರಾಶೆಯ ಉತ್ತರವೇ.
ಏಕೆಂದರೆ, ‘ಕಾಂತಾರ-1’, ‘ಸು ಫ್ರಮ್ ಸೋ’ ಹೀಗೆ ಕೈಬೆರಳೆಣಿಕೆಯ ನಿದರ್ಶನಗಳನ್ನು ಹೊರತು ಪಡಿಸಿದರೆ ಮಿಕ್ಕ ಹೆಚ್ಚಿನವು ಚಿತ್ರಮಂದಿರಕ್ಕೆ ಬಂದಿದ್ದೂ ಗೊತ್ತಿಲ್ಲ, ಅಲ್ಲಿಂದ ನಿರ್ಗಮಿಸಿದ್ದೂ ಗೊತ್ತಿಲ್ಲ ಬಹುತೇಕರಿಗೆ. ‘ಚಲನಚಿತ್ರಗಳ ಮಾರುಕಟ್ಟೆ ಲೆಕ್ಕಾಚಾರ ಈಗ ಮೊದಲಿನಂತಿಲ್ಲ, ಈಗಿನ ಉಪಗ್ರಹ ಆಧಾರಿತ ಪ್ರದರ್ಶನ ವ್ಯವಸ್ಥೆಯಲ್ಲಿ ಏಕಕಾಲಿಕವಾಗಿ 300-400 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ, ಒಂದೇ ವಾರಕ್ಕೆ ಹಣದ ಕೊಯಿಲು ಮಾಡಬಹುದು.
ಇದನ್ನೂ ಓದಿ: Vishwavani Editorial: ಇಸ್ಲಾಮ್ ಮೂಲಭೂತವಾದ ನಿಲ್ಲಲಿ
ಬಹುದಿನಗಳವರೆಗೆ ಚಿತ್ರಮಂದಿರಗಳಲ್ಲಿ ಠಿಕಾಣಿ ಹೂಡಿದ್ದರೆ ಮಾತ್ರವೇ ಅದು ಯಶಸ್ವಿ ಚಿತ್ರ ಎಂದೇನಲ್ಲ’ ಎಂಬ ಚಿತ್ರಪಂಡಿತರ ಮಾತುಗಳನ್ನು ಒಪ್ಪಬಹುದಾದರೂ, ಆ ಮಾತಿನ ಮಧ್ಯೆ ‘ಮಾಯವಾಗಿರುವ ಸಂಭ್ರಮ’ದ ಕಟುವಾಸ್ತವವೂ ಇಣುಕುವುದು ಖರೆ!
ನಿಜ, ಚಲನಚಿತ್ರಗಳು ಹಿಂದಿಗಿಂತ ಈಗ ಹೆಚ್ಚು ತಾಂತ್ರಿಕ ಶ್ರೀಮಂತಿಕೆಯೊಂದಿಗೆ ಬೆಳ್ಳಿತೆರೆಯಲ್ಲಿ ರಾರಾಜಿಸುತ್ತಿರಬಹುದು. ಆದರೆ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಕೆ.ಎಸ್.ಅಶ್ವಥ್, ಟಿ.ಎನ್. ಬಾಲಕೃಷ್ಣ, ನರಸಿಂಹರಾಜು ಮುಂತಾದವರು ಅಭಿನಯಿಸುತ್ತಿದ್ದಾಗ ಚಿತ್ರರಸಿಕರಲ್ಲಿ ಕಾಣ ಬರುತ್ತಿದ್ದ ಸಂಭ್ರಮೋತ್ಸಾಹಗಳು ಈಗಲೂ ಇವೆಯೇ? ಎಂದು ಪ್ರಶ್ನಿಸಿದರೆ, ಹೊಮ್ಮುವುದು ನಿರಾಶೆಯ ಉತ್ತರವೇ.
ಮನಕ್ಕೆ ಸಂತೃಪ್ತಿ ನೀಡುವ ಚಿತ್ರಗಳು ಬರುತ್ತಿಲ್ಲ ಎಂಬುದಂತೂ ನಿಜ. ಚಿತ್ರೋದ್ಯಮಿಗಳು ಇನ್ನಾ ದರೂ ಆತ್ಮಾವಲೋಕನಕ್ಕೆ ಮುಂದಾಗಲಿ, ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿ ಕನ್ನಡ ಚಿತ್ರರಂಗದ ಗತವೈಭವ ಮರಳುವಂತೆ ಮಾಡಲಿ.