ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬರುವುದಕ್ಕೆ ಮುಖವೆಲ್ಲಿದೆ?!

ಭಾರತ ಮತ್ತು ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾವೇ ಎಂದು ಟ್ರಂಪ್ ತುತ್ತೂರಿ ಊದಲು ಶುರು ಹಚ್ಚಿಕೊಂಡಾಗಿನಿಂದ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ನಂತರ ಟ್ರಂಪ್ ಅತಿರೇಕದ ಸುಂಕವನ್ನು ಹೇರಿದ್ದರಿಂದಾಗಿ ಈ ಬಿರುಕು ಇನ್ನಷ್ಟು ದೊಡ್ಡದಾಯಿತು.

ಈ ವರ್ಷಾಂತ್ಯದಲ್ಲಿ ಆಯೋಜಿಸಲಾಗಿರುವ ‘ಕ್ವಾಡ್’ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರಬೇಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಿಷಯದಲ್ಲಿ ‘ತಾರಮ್ಮಯ್ಯ’ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಟ್ರಂಪ್ ಅತಿರೇಕದ ಸುಂಕವನ್ನು ಹೇರಿದ ಕಾರಣಕ್ಕೆ ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವುದರಿಂದಲೇ ಟ್ರಂಪ್ ಮಹಾಶಯರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದು ಲಭ್ಯ ಮಾಹಿತಿ.

ಇದೊಂಥರಾ ‘ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡರು’ ಎಂಬ ರೀತಿಯ ಬೆಳವಣಿಗೆ ಎನ್ನಲಡ್ಡಿ ಯಿಲ್ಲ. ಏಕೆಂದರೆ, ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರನ್ನು ಅಮೆರಿಕಕ್ಕೆ ಆಹ್ವಾನಿಸಿ ‘ಹೌಡಿ ಮೋದಿ’ ಎಂಬ ಬೃಹತ್ ಕಾರ್ಯಕ್ರಮವನ್ನು ಟೆಕ್ಸಾಸ್‌ ನ ಹೂಸ್ಟನ್‌ನಲ್ಲಿ ಆಯೋಜಿಸಿ, ದ್ವಿಪಕ್ಷೀಯ ವ್ಯೂಹಾತ್ಮಕ ಭಾಗೀದಾರಿಕೆಯನ್ನು ಜಗತ್ತಿನೆದುರು ಬಿಂಬಿಸಿದ್ದ ಟ್ರಂಪ್, ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಪ್ಲೇಟು ಬದಲಿಸಿ ಅಪಸ್ವರ ಹಾಡಿ ಬಿಟ್ಟರು.

ಇದನ್ನೂ ಓದಿ: Vishwavani Editorial: ಟ್ರಂಪ್ ನಡೆದದ್ದೇ ದಾರಿಯಲ್ಲ!

ಭಾರತ ಮತ್ತು ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾವೇ ಎಂದು ಟ್ರಂಪ್ ತುತ್ತೂರಿ ಊದಲು ಶುರು ಹಚ್ಚಿಕೊಂಡಾಗಿನಿಂದ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲಾ ರಂಭಿಸಿತು. ನಂತರ ಟ್ರಂಪ್ ಅತಿರೇಕದ ಸುಂಕವನ್ನು ಹೇರಿದ್ದರಿಂದಾಗಿ ಈ ಬಿರುಕು ಇನ್ನಷ್ಟು ದೊಡ್ಡದಾಯಿತು.

ಇಷ್ಟೆಲ್ಲಾ ಎಡವಟ್ಟು ತಮ್ಮ ಕಡೆಯಿಂದ ಆಗಿರುವುದನ್ನು ತಡವಾಗಿಯಾದರೂ ಅರ್ಥ ಮಾಡಿ ಕೊಂಡಿರುವ ಟ್ರಂಪ್, ಹಿಂದೊಮ್ಮೆ ಭಾರತ ಭೇಟಿಗೆ ಬಂದಾಗ ಅಹಮದಾಬಾದ್‌ನಲ್ಲಿ ಸಿಕ್ಕ ಭವ್ಯ ಸ್ವಾಗತ ಮತ್ತೆ ಸಿಗುವುದು ದುಸ್ತರ ಎಂಬುದನ್ನು ಅರಿತಂತಿದೆ. ಹೀಗಾಗಿ ಭಾರತಕ್ಕೆ ಬರಲು ಅವರಿಗೆ ಮುಖವಿಲ್ಲ ಎಂಬುದು ಸ್ಪಷ್ಟ.

ಸಾಲದೆಂಬಂತೆ, ರಷ್ಯಾ-ಚೀನಾ-ಭಾರತ ದೇಶಗಳು ಪರಸ್ಪರ ಕೈಕುಲುಕಿರುವುದನ್ನು ಜೀರ್ಣಿಸಿ ಕೊಳ್ಳಲು ಟ್ರಂಪ್ ಮಹಾಶಯರಿಗೆ ಆಗುತ್ತಿಲ್ಲ. ಇಂಥ ಹಲವು ಹತಾಶೆಗಳೇ ಟ್ರಂಪ್‌ರ ಭಾರತ ಭೇಟಿಗೆ ಮುಳ್ಳಾ ಗಿವೆ ಎನ್ನಲಡ್ಡಿಯಿಲ್ಲ. ಕಾರಣವೇನೇ ಇರಲಿ, ಭಾರತಕ್ಕಂತೂ ಇದರಿಂದ ನಷ್ಟವಿಲ್ಲ ಎಂಬುದೂ ಅಷ್ಟೇ ದಿಟ!