ನವದೆಹಲಿ, ಫೆ.10: ಐಸಿಸಿ ಟಿ20 ವಿಶ್ವಕಪ್(T20 World Cup)ನಲ್ಲಿ ಭಾರತ ವಿರುದ್ಧದ ಪಂದ್ಯದ ಬಹಿಷ್ಕರಿಸಿರುವ ಪಾಕಿಸ್ತಾನ(India vs Pakistan) ತನ್ನ ನಿರ್ಧಾರದಿಂದ ಹಿಂದೆ ಸರಿದ ಬೆನ್ನಲ್ಲೇ ಪಂದ್ಯದ ವೇಳೆಯ ಜಾಹೀರಾತು ಬೆಲೆ ಗಗನಕ್ಕೇರಿದೆ. ಪಾಕಿಸ್ತಾನ ಸರ್ಕಾರ ಸೋಮವಾರ ರಾಷ್ಟ್ರೀಯ ತಂಡಕ್ಕೆ ಭಾರತದ ವಿರುದ್ಧ ಟಿ20 ಪಂದ್ಯ ಆಡಲು ಅನುಮತಿ ನೀಡಿದ್ದು, ಪಂದ್ಯ ವೇಳಾಪಟ್ಟಿಯನ್ನು ಗೌರವಿಸುವುದಾಗಿ ಸ್ಪಷ್ಟಪಡಿಸಿದೆ. ಪಂದ್ಯ ಬಹಿಷ್ಕಾರದಿಂದ ಪಾಕಿಸ್ತಾನಕ್ಕೆ ಎದುರಾಗಬಹುದಾದ ಸಂಭಾವ್ಯ ಹಣಕಾಸು ಪರಿಣಾಮಗಳ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಸರ್ಕಾರದ ಸೂಚನೆಯಂತೆ ಪಾಕಿಸ್ತಾನ ತನ್ನ ನಿಲುವು ಬದಲಿಸಿದೆ.
ಪ್ರತಿ 10-ಸೆಕೆಂಡ್ ಸ್ಲಾಟ್‌ಗಳ ಮೌಲ್ಯ ಬರೋಬ್ಬರಿ ₹40 ಲಕ್ಷದವರೆಗೆ ಸಾಗಬಹುದು ಎಂದು ಅಂದಾಜಿಸಲಾಗಿದೆ. ಪಂದ್ಯ ನಡೆಯದಿದ್ದರೆ 250 ಕೋಟಿಯ ಜಾಹೀರಾತು ನಷ್ಟದ ಆತಂಕ ಪ್ರಸಾರಕರಿಗೆ ಎದುರಾಗಿತ್ತು. ಇದೀಗ ಪಂದ್ಯ ನಿಗದಿಯಂತೆ ನಡೆಯಲಿದೆ ಎಂದಾಕ್ಷಣ ಜಾಹೀರಾತು ಬೆಲೆಯೂ ಹೆಚ್ಚಾಗಿದೆ. ಟೂರ್ನಿಯಲ್ಲಿ ಉಭಯ ತಂಡಗಳು ಉತ್ತಮವಾಗಿ ಆಡಿ ಗೆಲುವು ಸಾಧಿಸಿದರೆ ಮೂರು ಬಾರಿ ಮುಖಾಮುಖಿಯಾಗುವ ಅವಕಾಶವಿದೆ.
ಇನ್ನೊಂದೆಡೆ ಪಂದ್ಯದ ಟಿಕೆಟ್ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಐಸಿಸಿ ಮಾಧ್ಯಮ ಹಕ್ಕುಗಳ ಬೆಲೆ 27,000 ರೂ. ಕೋಟಿ ಮೌಲ್ಯದ್ದಾಗಿದ್ದು, ಭಾರತೀಯ ಮಾರುಕಟ್ಟೆಯು ಒಟ್ಟಾರೆ ಗಾತ್ರದ 70–80% ರಷ್ಟಿದೆ . ಅದರಲ್ಲಿಯೂ ಭಾರತ ಮತ್ತು ಪಾಕ್ ಪಂದ್ಯದಿಂದಲೇ ಇದರ ಬಹುತೇಕ ಹಣ ಹರಿದು ಬರುತ್ತದೆ. ವರದಿ ಪ್ರಕಾರ, ಪಾಕಿಸ್ತಾನ ಭಾರತ ಒಂದೇ ಪಂದ್ಯವು ಪ್ರಸಾರ, ಪ್ರಾಯೋಜಕತ್ವಗಳು ಮತ್ತು ಟಿಕೆಟ್‌ಗಳ ಮೂಲಕ ಒಟ್ಟು ವಾಣಿಜ್ಯ ಮೌಲ್ಯದಲ್ಲಿ ₹2,200–4,500 ಕೋಟಿ ಗಳಿಸುತ್ತದೆ ಎಂದು ಅಂದಾಜಿಸಲಾಗಿದೆ.
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್; ಮುಂಬೈನಿಂದ ಶ್ರೀಲಂಕಾಗೆ ವಿಮಾನದ ಟಿಕೆಟ್ ದರ ಕೇಳಿದ್ರೆ ಶಾಕ್ ಆಗೋದು ಪಕ್ಕಾ!
ಒಂದು ಅಂದಾಜಿನ ವರದಿ ಪ್ರಕಾರ, ಪ್ರಸಾರಕ ಜಿಯೋಸ್ಟಾರ್, ಭಾರತ ಮತ್ತು ಪಾಕ್ ಒಂದೇ ಪಂದ್ಯದಿಂದ ಜಾಹೀರಾತು ಆದಾಯದಲ್ಲಿ ಬರೋಬ್ಬರಿ ₹250 ಕೋಟಿಯವರೆಗೆ ಗಳಿಸಬಹುದು ಎನ್ನಲಾಗಿದೆ.
ಭದ್ರತೆ ಕಾರಣ ನೀಡಿ ಬಾಂಗ್ಲಾ ತಂಡ ಭಾರತದಲ್ಲಿ ವಿಶ್ವಕಪ್ ಪಂದ್ಯ ಆಡಲ್ಲ ಎಂದು ಪಟ್ಟುಹಿಡಿದಿತ್ತು. ಹೀಗಾಗಿ ಬಾಂಗ್ಲಾವನ್ನು ಐಸಿಸಿ ವಿಶ್ವಕಪ್‌ನಿಂದಲೇ ಹೊರಗಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಸರ್ಕಾರ, ಭಾರತ ವಿರುದ್ಧ ಫೆ.15ರ ಪಂದ್ಯ ಆಡಲ್ಲ ಎಂದು ಹೇಳಿತ್ತು. ಬಳಿಕ ಇದನ್ನು ಪುನರುಚ್ಚರಿಸಿದ್ದ ಪ್ರಧಾನಿ ಶೆಹಬಾಜ್ ಶರೀಫ್, ಪಂದ್ಯ ಆಡಲ್ಲ ಎಂದಿದ್ದರು. ಇದೀಗ ಪಂದ್ಯ ಆಡಲು ಅವರು ಅನುಮತಿ ನೀಡಿದ್ದಾರೆ.
ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಿದರೆ ಪಾಕಿಸ್ತಾನದ ಮೇಲೆ ನೇರ ಪರಿಣಾಮ ಬೀರುತ್ತಿತ್ತು. ಐಸಿಸಿ ಭಾರೀ ದಂಡ ಹೇರಬಹುದಿತ್ತು. ಪ್ರಸಾರಕರು, ಪ್ರಾಯೋಜಕರಿಗೆ ಉಂಟಾಗುವ ನಷ್ಟವನ್ನು ಪಾಕಿಸ್ತಾನದಿಂದಲೇ ವಸೂಲಿ ಮಾಡಬಹುದಿತ್ತು.