ಟಿ20 ಏಷ್ಯಾಕಪ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ 5 ಆಟಗಾರರು
ಈ ಬಾರಿ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲಿರುವ ಕಾರಣ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಆಟ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಯುವ ಆಟಗಾರರು ಈ ಬಾರಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಬೆಂಗಳೂರು: ಮುಂಬರುವ ಬಹುನಿರೀಕ್ಷಿತ ಏಷ್ಯಾಕಪ್ ಟಿ20(Asia Cup 2025) ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳು ಅಂತಿಮ ಹಂತದ ಸಿದ್ಧತೆಯೊಂದಿಗೆ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಸೆಪ್ಟಂಬರ್ 9ರಂದು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಹಾಂಕಾಂಗ್ ತಂಡವನ್ನು ಎದುರಿಸಲಿದೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತೀ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ಪ್ರತೀ ತಂಡಗಳು ಮೂರು ಪಂದ್ಯಗಳನ್ನು ಆಡಲಿವೆ. ಈ ಬಾರಿ ಟಿ20 ಮಾದರಿಯಲ್ಲಿ ಟೂರ್ನಿ ನಡೆಯುತ್ತಿದ್ದು, ಇದುವರೆಗೆ ನಡೆದ ಟಿ20 ಮಾದರಿಯ ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರ ಯಾರು ಎಂಬ ಇಣುಕು ನೋಟ ಇಲ್ಲಿದೆ.
ವಿರಾಟ್ ಕೊಹ್ಲಿ
ಕಳೆದ ವರ್ಷ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಈ ಮಾದರಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟಿ20ಯಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಎರಡು ಟಿ20 ಏಷ್ಯಾಕಪ್‌ಗಳಲ್ಲಿ ಒಟ್ಟಾರೆ 10 ಪಂದ್ಯಗಳನ್ನು ಆಡಿದ್ದು 429 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮ
ರೋಹಿತ್ ಶರ್ಮ ಅವರು ಈ ಯಾದಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. ರೋಹಿತ್ 9 ಟಿ20 ಏಷ್ಯಾಕಪ್ ಪಂದ್ಯಗಳಲ್ಲಿ 30.11 ರ ಸರಾಸರಿಯಲ್ಲಿ 271 ರನ್ ಗಳಿಸಿದ್ದಾರೆ. ರೋಹಿತ್ ಈಗಾಗಲೇ ಟಿ20ಗೆ ನಿವೃತ್ತಿ ಹೇಳಿದ್ದಾರೆ. ಹಾಗಾಗಿ ಅವರು ಈ ಬಾರಿ ಆಡುತ್ತಿಲ್ಲ.
ಸೂರ್ಯಕುಮಾರ್ ಯಾದವ್
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅವರು 2022 ರ ಏಷ್ಯಾಕಪ್‌ನಲ್ಲಿ 5 ಪಂದ್ಯಗಳನ್ನು ಆಡಿ 34.75 ರ ಸರಾಸರಿಯಲ್ಲಿ 139 ರನ್ ಗಳಿಸಿದ್ದಾರೆ.
ಕೆ.ಎಲ್ ರಾಹುಲ್
ಕನ್ನಡಿಗ ಕೆ.ಎಲ್ ರಾಹುಲ್ ಏಷ್ಯಾಕಪ್‌ನಲ್ಲಿ ಟಿ20 ಸ್ವರೂಪದಲ್ಲಿ ಇದುವರೆಗೆ 5 ಪಂದ್ಯಗಳಲ್ಲಿ 26.40 ಸರಾಸರಿಯಲ್ಲಿ 132 ರನ್ ಗಳಿಸಿದ್ದಾರೆ. ರಾಹುಲ್ 2022 ರ ವಿಶ್ವಕಪ್ ನಂತರ ಭಾರತೀಯ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ತಂಡದಲ್ಲಿ ಅವಕಾಶ ಸಿಗಲಿದೆಯಾ ಎಂದು ಕಾದು ನೋಡಬೇಕು.
ಯುವರಾಜ್ ಸಿಂಗ್
ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು 2016ರ ಟಿ 20 ಏಷ್ಯಾ ಕಪ್‌ನಲ್ಲಿ ಆಡಿದರು. ಒಟ್ಟು 5 ಪಂದ್ಯಗಳಲ್ಲಿ 44.50 ಸರಾಸರಿಯಲ್ಲಿ 89 ರನ್ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.