ಅಹಮದಾಬಾದ್, ಮಾ.9: ಭಾನುವಾರ ರಾತ್ರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ‘ನೀಲಿ ಸಾಗರ‘ದಂತೆ ಕಂಗೊಳಿಸಿದ ಪ್ರೇಕ್ಷಕರ ಮುಂದೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ಎದುರು 96 ರನ್‌ಗಳಿಂದ ಜಯಿಸುವುದರೊಂದಿಗೆ ಟಿ20 ವಿಶ್ವಕಪ್(T20 world cup final 2026) ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಭಾರತ ಫೈನಲ್ ಗೆಲುವಿನೊಂದಿಗೆ ಹಲವು ವಿಶ್ವ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆಗಳ ವಿವರ ಇಲ್ಲಿದೆ.
ತವರಿನಲ್ಲಿ ಏಕದಿನ, ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ
ಭಾರತ ತಂಡ ತವರಿನಲ್ಲೇ ಏಕದಿನ ಹಾಗೂ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿತು. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆದ್ದು, ತವರಿನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಸಾಧನೆ ಮಾಡಿತ್ತು. ಈ ಬಾರಿ ಟಿ20 ವಿಶ್ವಕಪ್‌ನಲ್ಲೂ ಅದೇ ಸಾಧನೆ ಪುನರಾವರ್ತಿಸಿದೆ. ಈವರೆಗೂ ಯಾವುದೇ ತಂಡ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿರಲಿಲ್ಲ.
ಸತತ 2, ಒಟ್ಟಾರೆ 3ನೇ ವಿಶ್ವಕಪ್ ಗೆಲುವು
ಇದುವರೆಗಿನ ಟಿ20 ವಿಶ್ವಕಪ್ ಇತಿಹಾಸದಲ್ಲಿ ಈವರೆಗೆ ಯಾವ ತಂಡವೂ ಸತತ 2 ಹಾಗೂ ಒಟ್ಟಾರೆ 3 ಬಾರಿ ಟಿ20 ವಿಶ್ವಕಪ್ ಜಯಿಸಿರಲಿಲ್ಲ. ಇದೀಗ ಈ ದಾಖಲೆಯನ್ನು ಭಾರತ ತಂಡ ಬರೆದಿದೆ. ತಂಡ ಈ ಹಿಂದೆ 2007, 2024ರಲ್ಲಿ ಚಾಂಪಿಯನ್ ಆಗಿತ್ತು. ಈ ಬಾರಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡಿದೆ.
ಟಿ20 ಚಾಂಪಿಯನ್ ಟೀಮ್ ಇಂಡಿಯಾಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
ಸತತ 2 ಪಂದ್ಯದಲ್ಲಿ 250+ ರನ್
ಭಾರತ ತಂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ 2 ಪಂದ್ಯಗಳಲ್ಲಿ 250ಕ್ಕೂ ಹೆಚ್ಚು ಮೊತ್ತ ದಾಖಲಿಸಿದ ಮೊದಲ ತಂಡ ಎನಿಸಿತು. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಮಾತ್ರ ಈ ಸಾಧನೆ ಮಾಡಿದೆ. 2024ರ ಐಪಿಎಲ್‌ನಲ್ಲಿ ಸತತ 2 ಪಂದ್ಯದಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿತ್ತು.
ಫೈನಲ್‌ನಲ್ಲಿ ಗರಿಷ್ಠ ರನ್ ಗೆಲುವು
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗರಿಷ್ಠ ರನ್ ಅಂತರದ ಗೆಲುವು ಸಾಧಿಸಿದ ಮೊದಲ ತಂಡ ಎನಿಸಿತು. 2012ರ ಫೈನಲ್‌ನಲ್ಲಿ ಲಂಕಾ ವಿರುದ್ಧ ವಿಂಡೀಸ್ 36 ರನ್‌ಗಳಿಂದ ಗೆದ್ದಿದ್ದು ಈವರೆಗಿನ ಅತಿ ದೊಡ್ಡ ಗೆಲುವಾಗಿತ್ತು. ಈ ಬಾರಿ ಭಾರತ 96 ರನ್‌ಗಳಿಂದ ಗೆದ್ದಿತು.
100+ ಸಿಕ್ಸರ್ ಸಿಡಿಸಿದ ಮೊದಲ ತಂಡ ಭಾರತ!
ಭಾರತ ತಂಡ ಈ ಬಾರಿ ಟೂರ್ನಿಯಲ್ಲಿ 106 ಸಿಕ್ಸರ್ ಸಿಡಿಸುವ ಮೂಲಕ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ತಂಡ ಎನಿಸಿಕೊಂಡಿತು. ವೆಸ್ಟ್‌ಇಂಡೀಸ್ ಈ ಬಾರಿ 76 ಸಿಕ್ಸರ್ ಬಾರಿಸಿದ್ದು, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪೈಕಿ 2ನ ಸ್ಥಾನದಲ್ಲಿದೆ.