ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amol Muzumdar: ಚೊಚ್ಚಲ ಮಹಿಳಾ ವಿಶ್ವಕಪ್ ಗೆಲುವಿನ ಸೂತ್ರಧಾರ ಮಹಾಗುರು ಮುಜುಂದಾರ್

ವಿಶ್ವಕಪ್ ಮುಡಿಗೇರಿಸಿ ಇಡೀ ದೇಶಕ್ಕೇ ಹೆಮ್ಮೆ ತಂದ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಫೈನಲ್‌ ಪಂದ್ಯದಲ್ಲಿ ಭಾರತೀಯ ತಂಡದ ಆಟವು ಅತ್ಯದ್ಭುತ ಕೌಶಲ ಹಾಗೂ ಆತ್ಮವಿಶ್ವಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ತಂಡವಾಗಿ ತೋರಿದ ಸಾಹಸ ಮತ್ತು ವರ್ಲ್ಡ್‌ಕಪ್‌ ಉದ್ದಕ್ಕೂ ತೋರಿದ ದೃಢತೆಗೆ ಅವರಿಗೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು, ಭವಿಷ್ಯದಲ್ಲಿ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇನ್ನಷ್ಟು ಸ್ಫೂರ್ತಿಯನ್ನು ತರಲಿದೆ’ ಎಂದಿದ್ದಾರೆ.

ಅಮೋಲ್ ಮುಜುಂದಾರ್

ನವಿ ಮುಂಬೈ: ಭಾರತ ಮಹಿಳಾ ತಂಡ(team india women) ಚೊಚ್ಚಲ ಏಕದಿನ ವಿಶ್ವಕಪ್‌(women's world cup) ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ತಂಡದ ನಾಯಕಿ, ಆಟಗಾರ್ತಿಯರು ಎಲ್ಲರ ಕಣ್ಣಿಗೆ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಮಹಿಳಾ ಟೀಮ್‌ ಇಂಡಿಯಾದ ವಿಶ್ವಕಪ್‌ ಗೆಲುವಿನ ಹಿಂದಿನ ಸೂತ್ರದಾರ ಕೋಚ್‌ ಅಮೋಲ್ ಮುಜುಂದಾರ್(Amol Muzumdar). ಭಾರತ ತಂಡದ ಪರ ಆಡದಿದ್ದರೂ ಅವರು ಕೋಚ್‌ ಆಗಿ ವಿಶ್ವಕಪ್‌ ಗೆದ್ದದ್ದು ಇತಿಹಾಸ. ಜಾಗತಿಕ ಮಟ್ಟದ ಟೂರ್ನಿಗೆ ಯಾವ ರೀತಿ ತಂಡವನ್ನು ಸಿದ್ಧಗೊಳಿಸಿದರು? ಏನೆಲ್ಲಾ ರಣತಂತ್ರ ಅನುಸರಿಸಿದರು? ತಂಡದ ಗೆಲುವಿನ ಹಿಂದಿನ ಸೀಕ್ರೆಟ್‌ ಏನು? ಎಂಬುದರ ಬಗ್ಗೆ ವಿವರಣೆ, ವಿಶ್ಲೇಷಣೆ ಇಲ್ಲಿದೆ.

ಕೋಚಿಂಗ್‌ ಹಾದಿ ಸುಲಭವಿರಲಿಲ್ಲ!

ವಿಶ್ವಕಪ್‌ ಗೆಲುವಿನ ಹಿಂದೆ ಮುಜುಂದಾರ್ ಪಾತ್ರ ಪ್ರಮುಖವಾದದ್ದು. 2023ರ ಅಕ್ಟೋಬರ್‌ನಲ್ಲಿ ಅವರು ತಂಡಕ್ಕೆ ಮುಖ್ಯ ಕೋಚ್ ಆಗಿ ಬಂದಾಗ ಎಲ್ಲವೂ ಸರಿಯಿರಲಿಲ್ಲ. ಹರ್ಮನ್‌ಪ್ರೀತ್ ಕೌರ್ ಅವರು ನಾಯಕತ್ವ ವಹಿಸಿಕೊಂಡು ಸ್ವಲ್ಪ ಸಮಯವಾಗಿತ್ತು. ಇದಕ್ಕೂ ಮುನ್ನ ಕೋಚ್‌ ಆಗಿದ್ದ ರಮೇಶ್ ಪವಾರ್ ಜತೆ ಆಟಗಾರ್ತಿಯರು ಭಿನ್ನಾಭಿಪ್ರಾಯ ಹೊಂದಿದ್ದರು. ಹೀಗಾಗಿ ತಂಡದ ಪ್ರದರ್ಶನ ಅತ್ಯಂತ ಕಳಪೆ ಮಟ್ಟದಿಂದ ಕೂಡಿತ್ತು. ಆಟಗಾರ್ತಿಯರಲ್ಲಿ ಸಮನ್ವಯತೆ ಸಾಧಿಸುವುದು ಸವಾಲಾಗಿತ್ತು.

ಪ್ರತಿಭೆಗೆ ತಕ್ಕ ಹೊಣೆಗಾರಿಕೆ

ಅಮೋಲ್ ತಮ್ಮ ಸಭ್ಯ ನಡವಳಿಕೆ ಮತ್ತು ಚಾಣಾಕ್ಷತೆಯಿಂದ ಪ್ರತಿಯೊಬ್ಬ ಆಟಗಾರ್ತಿಯ ಸಾಮರ್ಥ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ಹೊಣೆಗಳನ್ನು ನೀಡಿದರು. ಹರ್ಮನ್, ಸ್ಮೃತಿ ಮಂದಾನ, ಜೆಮಿಮಾ, ರೇಣುಕಾ ಸಿಂಗ್, ಶಫಾಲಿ ವರ್ಮಾ ಅವರಂತಹ ಅನುಭವವುಳ್ಳ ಆಟಗಾರ್ತಿಯರ ವಿಶ್ವಾಸ ಗಳಿಸಿದರು. ಕ್ರಾಂತಿ ಗೌಡ್, ಅರುಂಧತಿ, ಪ್ರತಿಕಾ ರಾವಲ್, ರಿಚಾ ಘೋಷ್ ಮತ್ತು ಅನ್ಮೋಲ್ ಜೋತ್ ಕೌರ್ ಅವರಂತಹ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ಕೊಟ್ಟರು. ಇದು ಫಲ ನೀಡಿತು. ಭಾರತ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡಿತು.



ಕೋಚ್‌ ಆಗಿ ಎಲ್ಲವನ್ನು ಸಾಧಿಸಿದರು!

ಅಮೋಲ್ ಮುಜುಂದಾರ್ ಕ್ರಿಕೆಟ್‌ ಬದುಕಿನ ಬಗ್ಗೆ ಹೇಳುವುದಾದರೆ ಅದೃಷ್ಟವಂತನಾಗಿರಲಿಲ್ಲ. ಏಕೆಂದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ಸಾವಿರಕ್ಕೂ ಹೆಚ್ಚು ರನ್ ಹೊಡೆದ ಕಲಾತ್ಮಕ ಬ್ಯಾಟರ್ ಅಮೋಲ್‌ಗೆ ಭಾರತ ತಂಡದಲ್ಲಿ ಕನಿಷ್ಠ ಒಂದೇ ಒಂದು ಪಂದ್ಯ ಆಡುವ ಅವಕಾಶವೂ ಸಿಗಲಿಲ್ಲ. ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಅವರ ಜತೆ ಮುಂಬೈ ತಂಡದ ಪರ ಅನೇಕ ಸಾಧನೆ ಮಾಡಿದರೂ ಕೂಡ ಅವರಿಗೆ ಭಾರತ ತಂಡದ ಬಾಗಿಲು ತೆರೆಯಲೇ ಇಲ್ಲ. ಭಾರತ ಪರ ಆಡುವ ಯೋಗ್ಯತೆ ಇದ್ದರೂ ಅವರಿಗೆ ಅದೃಷ್ಟ ಕೈಕೊಡುತ್ತಿತ್ತು. ಆದರೆ ಕೋಚ್‌ ಆಗಿ 1978ರಿಂದ ವಿಶ್ವಕಪ್‌ ಆಡುತ್ತಿರುವ ಭಾರತ ಮಹಿಳಾ ತಂಡಕ್ಕೆ ಬರೋಬ್ಬರಿ 47 ವರ್ಷಗಳ ಬಳಿಕ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದಾರೆ. ಆಟಗಾರನಾಗಿ ಸಾಧಿಸಲಾಗದ್ದನ್ನು ಕೋಚ್ ಆಗಿ ಸಾಧಿಸಿದ ಮುಜುಂದಾರ್ ಈಗ ನಿರಾಳರಾಗಬಹುದು.



ತಂಡ ಫೈನಲ್‌ ಗೆಲ್ಲುತ್ತಿದ್ದಂತೆ ಡಗ್‌ಔಟ್‌ನಿಂದ ಮೈದಾನಕ್ಕೆ ಓಡಿ ಬಂದ ಮುಜುಂದಾರ್, ತಂಡದ ಆಟಗಾರರನ್ನು ಅಭಿನಂದಿಸಿ, ಅಪ್ಪಿದರು. ಅವರ ಕಂಗಳಲ್ಲಿ ಸಂತಸದ ಧಾರೆ ಹರಿಯುತ್ತಿತ್ತು. ಆ ಕಣ್ಣೀರಿನ ಒಂದೊಂದು ಹನಿಯಲ್ಲಿಯೂ ನೂರಾರು ಭಾವಗಳು ತುಳುಕುತ್ತಿದ್ದವು.