ನವದೆಹಲಿ, ಸೆ. 18: ಜಪಾನ್‌ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿರುವ 2026ರ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶೂಟರ್ ಮನು ಭಾಕರ್ ಮತ್ತು ಶಾಟ್-ಪುಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಭಾರತದ ಧ್ವಜಧಾರಿ ಆಗಲಿದ್ದಾರೆ.
ಭಕರ್ ಅವರ ಆಯ್ಕೆಯನ್ನು ಭಾರತದ 'ಶೆಫ್ ಡಿ ಮಿಷನ್' ಸಹದೇವ್ ಯಾದವ್ ಘೋಷಿಸಿದರು; ಅದೇ ವೇಳೆ, ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾವು ಪಾಲ್ ಸಿಂಗ್ ತೂರ್ ಅವರನ್ನು ಎರಡನೇ ಧ್ವಜಧಾರಿಯನ್ನಾಗಿ ಖಚಿತಪಡಿಸಿತು. ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ನಂತರ ಭಾಕರ್ ಏಷ್ಯನ್ ಕ್ರೀಡಾಕೂಟಕ್ಕೆ ಪ್ರವೇಶಿಸುತ್ತಿದ್ದಾರೆ. ಅಲ್ಲಿ ಅವರು ಭಾರತದ ಪರವಾಗಿ ಒಂದೇ ಆವೃತ್ತಿಯ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಕ್ರೀಡಾಪಟುವಾಗಿದ್ದರು.
ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ: ಕೋಚ್ ಗೌತಮ್ ಗಂಭೀರ್ ಹೇಳಿಕೆ
ಪಾಲ್ ಸಿಂಗ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದ ಸಾಧಕರಾಗಿದ್ದಾರೆ. ಅವರು 2018ರ ಜಕಾರ್ತಾ ಕ್ರೀಡಾಕೂಟದಲ್ಲಿ ಪುರುಷರ ಶಾಟ್ ಪುಟ್ ಪ್ರಶಸ್ತಿಯನ್ನು ಗೆದ್ದುಕೊಂಡರು ಮತ್ತು 2022ರ ಹ್ಯಾಂಗ್‌ಝೌ ಆವೃತ್ತಿಯಲ್ಲಿ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡರು.
ಈ ಕ್ರೀಡಾಕೂಟವು ಅಧಿಕೃತವಾಗಿ ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದ್ದರೂ, ಭಾರತದ ಸ್ಪರ್ಧಾತ್ಮಕ ಅಭಿಯಾನವು ಈಗಾಗಲೇ ಕೆಲವು ವಿಭಾಗಗಳಲ್ಲಿ ಆರಂಭಗೊಂಡಿದೆ. ಟೆಕ್‌ಬಾಲ್ (teqball) ಕ್ರೀಡೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕವನ್ನು ತಂದುಕೊಡಬಲ್ಲ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಕ್ವಿನ್ಸಿ ಡಿಸೋಜಾ ಅವರಿಗೆ ಇನ್ನು ಕೇವಲ ಒಂದು ಗೆಲುವಿನ ಅಗತ್ಯವಿದೆ.
ಉದ್ಘಾಟನಾ ಸಮಾರಂಭದಲ್ಲಿ ಭಾಕರ್ ಮತ್ತು ತೂರ್ ಅವರು ಭಾರತೀಯ ತಂಡವನ್ನು ಮುನ್ನಡೆಸಲಿದ್ದು, ಹ್ಯಾಂಗ್‌ಝೌನಲ್ಲಿ ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲೇ ಅತ್ಯಧಿಕ ಪದಕಗಳನ್ನು ಗೆದ್ದ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸುವ ಗುರಿಯನ್ನು ಭಾರತ ಹೊಂದಿದೆ.
ಭಾರತವು ಕಳೆದ ಬಾರಿಯ 106 ಪದಕಗಳ ದಾಖಲೆಯನ್ನು ಮೀರುವ ಅಥವಾ ಅದಕ್ಕೆ ಸನಿಹ ತಲುಪುವ ಬಲವಾದ ಗುರಿಯನ್ನು ಹೊಂದಿದೆ. ಕಳೆದ ಚೀನಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 28 ಚಿನ್ನ, 38 ಬೆಳ್ಳಿ ಮತ್ತು 40 ಕಂಚು ಸೇರಿದಂತೆ ಒಟ್ಟು 106 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿ ಆ ದಾಖಲೆಯನ್ನು ಮತ್ತೊಮ್ಮೆ ಮೀರಿಸಲು ಭಾರತೀಯ ಕ್ರೀಡಾಪಟುಗಳು ಸಜ್ಜಾಗಿದ್ದಾರೆ.