ನಗೋಯಾ, ಸೆ.27: ಭಾರತದ ಆನ್ಸಿ ಸೋಜನ್ ಏಷ್ಯನ್ ಗೇಮ್ಸ್ ಮಹಿಳೆಯರ ಲಾಂಗ್‌ಜಂಪ್ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸೋಜನ್ 6.53 ಮೀಟರ್‌ಗಳ ಜಿಗಿತದೊಂದಿಗೆ ಸ್ಪರ್ಧೆಯನ್ನು ಪೂರ್ಣಗೊಳಿಸಿದರು. 6.55 ಮೀಟರ್‌ಗಳೊಂದಿಗೆ ಚಿನ್ನದ ಪದಕ ಗೆದ್ದ ಚೀನಾದ ಹುವಾಂಗ್ ಯಿಂಗ್‌ಯಿಂಗ್‌ಗಿಂತ ಅವರು ಕೇವಲ 2 ಸೆಂಟಿಮೀಟರ್‌ಗಳಷ್ಟು ಹಿಂದಿದ್ದರು.
ಚೀನಾದ ಟಾನ್ ಮೆಂಗ್‌ಯಿ 6.46 ಮೀಟರ್‌ಗಳೊಂದಿಗೆ ಕಂಚಿನ ಪದಕ ಪಡೆದರೆ, ಭಾರತದ ಶೈಲಿ ಸಿಂಗ್ 6.42 ಮೀಟರ್ ಜಿಗಿದು ನಾಲ್ಕನೇ ಸ್ಥಾನ ಪಡೆದರು. ಇದಕ್ಕೂ ಮುನ್ನ ನಡೆದಿದ್ದ ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ, ಭಾರತದ ಹರಿತಾ ಭದ್ರಾ ಅವರು ಕಂಚಿನ ಪದಕ ಗೆದ್ದರು. ಹರಿತಾ 23.20 ಸೆಕೆಂಡುಗಳಲ್ಲಿ ಓಟ ಪೂರೈಸಿ ಮೂರನೇ ಸ್ಥಾನ ಪಡೆದರು.
ಭಾರತದ ಬಾಕ್ಸಿಂಗ್ ಅಭಿಯಾನಕ್ಕೆ ಭಾನುವಾರ ದೊಡ್ಡ ಯಶಸ್ಸು ಲಭಿಸಿತು. ಅಂಕುಶ್ ಪಂಘಾಲ್ ಮತ್ತು ಪರ್ವೀನ್ ಹೂಡಾ ಸೆಮಿಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸುವ ಮೂಲಕ ದೇಶಕ್ಕೆ ಎರಡು ಪದಕಗಳನ್ನು ಖಚಿತಪಡಿಸಿದ್ದಾರೆ.
ಪುರುಷರ 80 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ತಜಕಿಸ್ತಾನದ ನೆಕ್ರುಜ್ ಸಲಿಮೊವ್ ವಿರುದ್ಧ 5-0 ಅಂತರದ ಅಧಿಕಾರಯುತ ಜಯ ಸಾಧಿಸುವ ಮೂಲಕ ಅಂಕುಶ್ ಪದಕ ಖಚಿತಪಡಿಸಿಕೊಂಡ ಮೊದಲ ಭಾರತೀಯ ಬಾಕ್ಸರ್ ಎನಿಸಿಕೊಂಡರು.
ಏಷ್ಯನ್ ಗೇಮ್ಸ್; 0.01 ಸೆಕೆಂಡ್ ಅಂತರದಲ್ಲಿ ಕಂಚು ಗೆದ್ದ ಹರಿತಾ ಭದ್ರ
ಮಹಿಳೆಯರ 65 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ನವ್ಬಖೋರ್ ಖಮಿಡೋವಾ ವಿರುದ್ಧ ಪರ್ವೀನ್ 5-0 ಅಂತರದ ಪ್ರಭಾವಶಾಲಿ ಜಯವನ್ನು ದಾಖಲಿಸಿದರು. ಉಭಯ ಬಾಕ್ಸರ್‌ಗಳ ಸೆಮಿಫೈನಲ್ ಪ್ರವೇಶವು ಭಾರತಕ್ಕೆ ಕನಿಷ್ಠ ಎರಡು ಕಂಚಿನ ಪದಕಗಳನ್ನು ಖಚಿತಪಡಿಸಿದೆ. ಇದೀಗ ಇಬ್ಬರೂ ಬಾಕ್ಸರ್‌ಗಳು ತಮ್ಮ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕಕ್ಕಾಗಿ ನಡೆಯುವ ಹಣಾಹಣಿಗೆ ಅರ್ಹತೆ ಪಡೆಯಲು ಇನ್ನೊಂದು ಗೆಲುವಿನ ಅಂತರದಲ್ಲಿದ್ದಾರೆ.
ಇದಕ್ಕೂ ಮುನ್ನ ನಡೆದಿದ್ದ ಏಷ್ಯಾಡ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಅನಾಹತ್ ಸಿಂಗ್ ಮತ್ತು ಅನುಭವಿ ಆಟಗಾರ ಅಭಯ್ ಸಿಂಗ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.