ನಗೊಯಾ, ಸೆ.18: ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಸೆಮಿಫೈನಲ್ ತಲುಪಿದೆ. ಶುಕ್ರವಾರ ನಡೆದ ಜಪಾನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 8 ವಿಕೆಟ್ ಅಂತರದ ಗೆಲುವು ಸಾಧಿಸುವ ಮೂಲಕ ಈ ಸಾಧನೆಗೈದಿತು. ಭಾನುವಾರ ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ಬಾಂಗ್ಲಾದೇಶ ವಿರುದ್ಧ ಆಡಲಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡ ಭಾರತ ತಂಡ ಬಿಗು ಬೌಲಿಂಗ್ ದಾಳಿಯ ಮೂಲಕ ಜಪಾನ್ ತಂಡವನ್ನು 57 ರನ್‌ಗೆ ಆಲೌಟ್ ಮಾಡಿತು. ಸ್ಪಿನ್ ಜಾದೂ ನಡೆಸಿದ ಶ್ರೀಚರಣಿ ನಾಲ್ಕು ಓವರ್‌ಗೆ 10 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರು. ಇದರಲ್ಲಿ ಎರಡು ಓವರ್‌ಗಳು ಮೇಡನ್ ಆಗಿತ್ತು. ಶಫಾಲಿ ವರ್ಮಾ ಎರಡು ವಿಕೆಟ್ ಪಡೆದರು.
ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಭಾರತ 5 ಓವರ್‌ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 59 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಅಜೇಯ 40 ರನ್ ಬಾರಿಸಿದರು. ಯುವ ಆಟಗಾರ್ತಿಯರಾದ ಗುಣಲನ್ ಕಮಲಿನಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರೆ, ಭಾರತಿ ಫುಲ್ಮಾಲಿ(6) ರನ್ ಗಳಿಸಿ ನಿರಾಸೆ ಮೂಡಿಸಿದರು.
ಗುರುವಾರ ಬಾಂಗ್ಲಾದೇಶ ತಂಡ ಮಳೆಯಿಂದಾಗಿ ಕ್ವಾರ್ಟರ್ಫೈನಲ್ ಪಂದ್ಯ ಆಡದೆಯೇ ಸೆಮಿಫೈನಲ್ ಪ್ರವೇಶಿಸಿದ್ದರೆ, ಪಾಕಿಸ್ತಾನ ತಂಡ ಥಾಯ್ಲೆಂಡ್ ಎದುರು ಪರದಾಡಿದರೂ, ಉಪಾಂತ್ಯಕ್ಕೇರುವಲ್ಲಿ ಯಶಸ್ವಿಯಾಯಿತು. ಬಾಂಗ್ಲಾ-ಚೀನಾ ನಡುವಿನ ಪಂದ್ಯದ ಟಾಸ್ ಕೂಡ ನಡೆಯಲಿಲ್ಲ. ಆದರೆ ಉನ್ನತ ಶ್ರೇಯಾಂಕದ ಆಧಾರದಲ್ಲಿ ಬಾಂಗ್ಲಾ ಉಪಾಂತ್ಯಕ್ಕೇರಿತು.
ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ: ಕೋಚ್ ಗೌತಮ್ ಗಂಭೀರ್ ಹೇಳಿಕೆ
ಮನು ಭಾಕರ್, ತಜಿಂದರ್ ಪಾಲ್ ಭಾರತದ ಧ್ವಜಧಾರಿ
ಶನಿವಾರ ನಡೆಯುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶೂಟರ್ ಮನು ಭಾಕರ್ ಮತ್ತು ಶಾಟ್-ಪುಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಭಾರತದ ಧ್ವಜಧಾರಿ ಆಗಲಿದ್ದಾರೆ. ಈ ಕ್ರೀಡಾಕೂಟವು ಅಧಿಕೃತವಾಗಿ ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದ್ದರೂ, ಭಾರತದ ಸ್ಪರ್ಧಾತ್ಮಕ ಅಭಿಯಾನವು ಈಗಾಗಲೇ ಕೆಲವು ವಿಭಾಗಗಳಲ್ಲಿ ಆರಂಭಗೊಂಡಿದೆ. ಟೆಕ್‌ಬಾಲ್ (teqball) ಕ್ರೀಡೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕವನ್ನು ತಂದುಕೊಡಬಲ್ಲ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಕ್ವಿನ್ಸಿ ಡಿಸೋಜಾ ಅವರಿಗೆ ಇನ್ನು ಕೇವಲ ಒಂದು ಗೆಲುವಿನ ಅಗತ್ಯವಿದೆ.