ನವಿ ಮುಂಬೈ: ಇಂದು(ಭಾನುವಾರ) ನಡೆಯುವ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್(icc women cricket world cup)ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ(ind vs sa) ತಂಡಗಳು ಚೊಚ್ಚಲ ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿದ್ದು, ದಶಕಗಳ ನೋವು, ನಿರಾಸೆಗಳನ್ನು ಮರೆಯಲು ಕಾತರಿಸುತ್ತಿವೆ. ಹೀಗಾಗಿ ಫೈನಲ್ ಪಂದ್ಯ ಭಾರೀ ಕುತೂಹಲ ಮೂಡಿದೆ. ಪಂದ್ಯಕ್ಕೂ ಮುನ್ನ ಬಿಸಿಸಿಐ(BCCI) ಭಾರತ ತಂಡಕ್ಕೆ ಬಂಪರ್ ಆಫರ್ ನೀಡಿದೆ. ಏಕದಿನ ವಿಶ್ವಕಪ್ ಗೆದ್ದರೆ ಬರೋಬ್ಬರಿ 125 ಕೋಟಿ ರು. ಬಹುಮಾನ ನೀಡಲು ನಿರ್ಧರಿಸಿದೆ.
2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಪುರುಷರ ತಂಡಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರು. ಬಹುಮಾನ ನೀಡಿತ್ತು. ಇದೀಗ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದರೆ ಪುರುಷರ ತಂಡಕ್ಕೆ ನೀಡಿದಂತೆ 125 ಕೋಟಿ ರು. ಬಹುಮಾನ ನೀಡಲು ನಿರ್ಧರಿಸಿದೆ.
ಫೈನಲ್‌ನಲ್ಲಿ ಇಂದು ಗೆಲ್ಲುವ ತಂಡಕ್ಕೆ ತಂಡಕ್ಕೆ 4.48 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 39.77 ಕೋಟಿ ರು.), ರನ್ನರ್-ಅಪ್ ತಂಡಕ್ಕೆ 2.24 ಮಿಲಿಯನ್ ಯುಎಸ್‌ಡಿ (ಅಂದಾಜು 19.88 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ವಿಶ್ವಕಪ್ ಇತಿಹಾಸದಲ್ಲೇ (ಪುರುಷ, ಮಹಿಳಾ) ಇದು ಗರಿಷ್ಠ ಬಹುಮಾನ ಮೊತ್ತ ಎನಿಸಿದೆ.
ಇದನ್ನೂ ಓದಿ ind vs sa: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ
ಮೂರನೆ ಫೈನಲ್‌ನಲ್ಲಿ ಕೈಹಿಡಿಯುತ್ತಾ ಲಕ್
ಭಾರತ ತಂಡಕ್ಕೆ ಇದು 3ನೇ ಏಕದಿನ ವಿಶ್ವಕಪ್ ಫೈನಲ್. ತಂಡ ಈ ಹಿಂದೆ 2005, 2017ರ ವಿಶ್ವಕಪ್ ಫೈನಲ್‌ಗಳಲ್ಲಿ ಸೋತಿತ್ತು. ಇನ್ನು 2020ರ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಮುಗ್ಗರಿಸಿತ್ತು. ಮತ್ತೊಂದೆಡೆ ದ.ಆಫ್ರಿಕಾ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್‌ಗೇರಿದೆ. ಆದರೆ ತಂಡ ಕಳೆದೆರಡು ಆವೃತ್ತಿಗಳ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಆಗಿತ್ತು. ಆದರೆ ಈ ಬಾರಿ ಒಂದು ತಂಡ ಐಸಿಸಿ ಟ್ರೋಫಿ ಬರ ನೀಗಿಸಲಿದೆ. ಆ ಅದೃಷ್ಟ ಯಾರಿಗೆ ಒಲಿಯಲಿದೆ ಎನ್ನುವುದು ಫೈನಲ್ ಪಂದ್ಯದ ಕೌತುಕ.