ಅಹಮದಾಬಾದ್, ಮೇ 1: ಗುರುವಾರ ರಾತ್ರಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ 42ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(GT vs RCB) ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ವಿಕೆಟ್ ಸೋಲು ಕಂಡಿತ್ತು. ಪಂದ್ಯ ಸೋತರೂ ಕೂಡ ಆರ್‌ಸಿಬಿಯ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್(Bhuvneshwar Kumar ) ದಾಖಲೆಯೊಂದನ್ನು ಬರೆದಿದ್ದಾರೆ.
ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್ 28 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತರು. ಈ ವಿಕೆಟ್ ಸಾಧನೆಯೊಂದಿಗೆ ಅವರು ಐಪಿಎಲ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಿದ ಮೊದಲ ಬೌಲರ್ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಪರ್ಪಲ್ ಕ್ಯಾಪ್ ರೇಸ್‌ನಲ್ಲಿಯೂ ಭುವನೇಶ್ವರ್ ಮುಂಚೂಣಿಯಲ್ಲಿದ್ದಾರೆ. 9 ಪಂದ್ಯಗಳಿಂದ 17 ವಿಕೆಟ್ ಕಿತ್ತಿದ್ದಾರೆ.
ಭಾರತದಲ್ಲಿ ಅತಿ ಹೆಚ್ಚು ಐಪಿಎಲ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್ ನಂತರ ಯುಜ್ವೇಂದ್ರ ಚಾಹಲ್ ಇದ್ದಾರೆ. ಶ್ರೀಮಂತ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಚಾಹಲ್, 154 ಐಪಿಎಲ್ ಪಂದ್ಯಗಳನ್ನು ಆಡಿ 186 ವಿಕೆಟ್ ಕಿತ್ತಿದ್ದಾರೆ. ಸದ್ಯ ಭುವನೇಶ್ವರ್ ಕುಮಾರ್ 201* ವಿಕೆಟ್ ಕಿತ್ತಿದ್ದಾರೆ.
ಅತ್ಯಧಿಕ ಐಪಿಎಲ್ ವಿಕೆಟ್ ಕಿತ್ತವರು
ಭುವನೇಶ್ವರ್ ಕುಮಾರ್-201
ಯಜುವೇಂದ್ರ ಚಹಲ್-186
ಸುನೀಲ್ ನರೈನ್-172
ಪಿಯೂಷ್ ಚಾವ್ಲಾ-168
ಆರ್.ಅಶ್ವಿನ್-161
ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ ತಂಡವು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಜವಾಬಿತ್ತ ಗುಜರಾತ್, 15. 5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 158 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್ ಟೈಟನ್ಸ್!
ಗುರಿ ಬೆನ್ನಟ್ಟಿದ ಗುಜರಾತ್‌ಗೆ ನಾಯಕ ಗಿಲ್ (43) ಹಾಗೂ ಜೋಸ್ ಬಟ್ಲರ್ (39) ಅವರು ಆಸರೆಯಾದರು. ಒಂದು ಹಂತದಲ್ಲಿ ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಅವರು 3 ವಿಕೆಟ್ ಗಳಿಸಿ ಗುಜರಾತ್ ತಂಡಕ್ಕೆ ಆತಂಕ ಮೂಡಿಸಿದ್ದರು. ಆದರೆ ಕೆಳಕ್ರಮಾಂಕದ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇಂಪ್ಯಾಕ್ಟ್ ಪ್ಲೇಯರ್ ರಾಹುಲ್ ತೆವಾಟಿಯಾ 17 ಎಸೆತಗಳಲ್ಲಿ ಔಟಾಗದೇ 27 ರನ್ ಗಳಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು.