ಕೋಲ್ಕತಾ, ಮೇ 5: 50 ವರ್ಷಗಳ ಬಳಿಕ ಪಶ್ಚಿಮ ಬಂಗಾಳ(Assembly Elections Results 2026)ದಲ್ಲಿ ಕಮಲ ಅರಳಿದೆ. ವಿಧಾನಸಭೆ ಚುನಾವಣೆಯಲ್ಲಿ 200ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿಯಂತಹ ದೈತ್ಯ ಶಕ್ತಿಯನ್ನು ಮಣಿಸಿ ಬಿಜೆಪಿ ಅಧಿಕಾರಕ್ಕೆ ಏರಿದೆ. ಭಾರತ ಕ್ರಿಕೆಟ್ ತಂಡದ ಪರ ಆಡಿದ್ದ ಅಶೋಕ್ ದಿಂಡಾ(Ashoke Dinda) ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.
ಪೂರ್ವ ಮಿಡ್ನಾಪುರ ಜಿಲ್ಲೆಯ ಮೊಯ್ನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಶೋಕ್ ದಿಂಡಾ, ತಮ್ಮ ಹತ್ತಿರದ ಪ್ರತಿಸ್ಪರ್ಧಿ ಟಿಎಂಸಿ ಅಭ್ಯರ್ಥಿ ಚಂದನ್ ಮಂಡಲ್ ವಿರುದ್ಧ 16,241 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿಯೂ ಅವರು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 42 ವರ್ಷದ ಅಶೋಕ್ ದಿಂಡಾ 2021ರಲ್ಲಿ ಮೊಯ್ನಾ ಕ್ಷೇತ್ರದಿಂದ ಸ್ಪರ್ಧಿಸಿ ಟಿಎಂಸಿಯ ಸಂಗ್ರಾಮ್ ಕುಮಾರ್ ದೋಲೈ ಅವರನ್ನು 1,260ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದರು.
2009ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅಶೋಕ್ ದಿಂಡಾ, 13 ಏಕದಿನ ಮತ್ತು9 ಟಿ20ಐ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿವಿಧ ಫ್ರಾಂಚೈಸಿ ಪರ ಆಡಿರುವ ಅವರು 68 ವಿಕೆಟ್ ಪಡೆದಿದ್ದಾರೆ. ಕನ್ನಡಿಗರ ನೆಚ್ಚಿನ ತಂಡ ಆರ್‌ಸಿಬಿ ಪರವೂ ಆಡಿದ್ದಾರೆ. ಜೊತೆಗೆ 116 ಪ್ರಥಮ ದರ್ಜೆ ಪಂದ್ಯಗಳು ಮತ್ತು 98 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಅಶೋಕ್ ದಿಂಡಾ ಕ್ರಮವಾಗಿ 420 ಮತ್ತು 151 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
"ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ
ಬಂಗಾಳದಲ್ಲಿ 2014ರ ನಂತರ ಬಿಜೆಪಿ ತಳಮಟ್ಟದಿಂದ ನೆಲೆ ಕಾಣಲು ಆರಂಭಿಸಿತು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅದು ಗೋಚರವಾಯಿತು. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವಂತಹ ವಾತಾವರಣ ಕಂಡುಬಂತಾದರೂ ಅಲ್ಪಮತಗಳ ಅಂತರದ ಸೋಲುಗಳು ಮಮತಾ ದೀದಿಯನ್ನು ಅಧಿಕಾರಕ್ಕೇರಿಸಿದ್ದವು.
'ಬಿಜೆಪಿಯಿಂದ ರಾಜ್ಯದಲ್ಲಿ 100 ಸ್ಥಾನ ಲೂಟಿ, ಇದು ಅಕ್ರಮ. ಇದರ ವಿರುದ್ಧ ನಾವು ಪುಟಿದೇಳುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ‘ಬಿಜೆಪಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ಚುನಾವಣಾ ಆಯೋಗವು ಬಿಜೆಪಿಯ ಆಯೋಗ. ಇದು ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ’ ಎಂದು ಕಿಡಿಕಾರಿದರು.