ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಲೂಟಿ, ಲೂಟಿ, ಲೂಟಿ. ನಾವು ಮತ್ತೆ ಪುಟಿದೇಳುತ್ತೇವೆ": ಬಂಗಾಳದ ಆಘಾತಕಾರಿ ಸೋಲಿಗೆ ಮಮತಾ ಬ್ಯಾನರ್ಜಿ ಹತಾಶೆ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಮಮತಾ ಬ್ಯಾನರ್ಜಿ, ಫಲಿತಾಂಶವನ್ನು ;ಲೂಟಿʼ ಎಂದು ಕರೆದಿದ್ದಾರೆ. ಬಿಜೆಪಿ ಐತಿಹಾಸಿಕ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಮತ್ತು ಕೇಂದ್ರದ ಮೇಲೆ ತೀವ್ರ ಆರೋಪ ಮಾಡಿರುವ ಮಮತಾ, ತೃಣಮೂಲ ಕಾಂಗ್ರೆಸ್ ಮತ್ತೆ ಬಲವಾಗಿ ಪುನಃ ಏಳುತ್ತದೆ ಎಂದು ಹೇಳಿದ್ದಾರೆ.

ಬಂಗಾಳ ಸೋಲಿನ ಬೆನ್ನಲ್ಲೇ ಮಮತಾ ಹತಾಶೆ ನುಡಿ

ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -

Profile
Sushmitha Jain May 4, 2026 10:57 PM

ಕೋಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಆಘಾತಕಾರಿ ಫಲಿತಾಂಶದಿಂದ ಕೆರಳಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ಈ ಸೋಲಿಗೆ "ಲೂಟಿ, ಲೂಟಿ, ಲೂಟಿ" ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ (Trinamool Congress) ಶೀಘ್ರದಲ್ಲೇ ಮತ್ತೆ ಪುಟಿದೇಳಲಿದೆ ಎಂದು ಅವರು ದೃಢವಾಗಿ ಅಭಿಪ್ರಾಯ ಪಟ್ಟಿದ್ದಾರೆ. ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆ ಹೊಂದಿದ್ದ ಮಮತಾ, ಕೇಂದ್ರ ಚುನಾವಣಾ ಆಯೋಗವನ್ನು "ಬಿಜೆಪಿ ಆಯೋಗ" ಎಂದು ಕರೆಯುವ ಮೂಲಕ ತೀವ್ರವಾಗಿ ಟೀಕಿಸಿಸಿದ್ದಾರೆ. ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆ ಮಮತಾ ಈ ಕಿಡಿ ಕಾರಿದ್ದಾರೆ. ಅಚ್ಚರಿ ಎಂದರೆ ಬಿಜೆಪಿ ನಾಯಕ ಸುವೇಂದು ಅದಿಕಾರಿ ವಿರುದ್ಧ ಭವಾನಿಪುರದಲ್ಲಿ ಮಮತಾ ಸೋಲುಂಡಿದ್ದಾರೆ.

ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಪಶ್ಚಿಮ ಬಂಗಾಳವು ದೀರ್ಘಕಾಲದವರೆಗೆ ಗೆಲ್ಲಲಾಗದ ಅಸಾಧ್ಯವಾದ ಕೋಟೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಬರೋಬ್ಬರಿ 114 ಸ್ಥಾನಗಳನ್ನು ಗೆದ್ದು, ಇನ್ನೂ 92 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಭರ್ಜರಿ ಐತಿಹಾಸಿಕ ಜಯ ದಾಖಲಿಸಿದೆ. "ಬಿಜೆಪಿಯು 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ಕೇಂದ್ರ ಪಡೆಗಳು, ಪ್ರಧಾನಿ ಮತ್ತು ಗೃಹ ಸಚಿವರ ನೆರವಿನೊಂದಿಗೆ ಚುನಾವಣಾ ಆಯೋಗವು ಸಂಪೂರ್ಣವಾಗಿ ಅಕ್ರಮ ಎಸಗಿದೆ. ಇದೊಂದು ಅನೈತಿಕ ಗೆಲುವೇ ಹೊರತು ನೈತಿಕ ಗೆಲುವಲ್ಲ," ಎಂದು ಮಮತಾ ಮಾಧ್ಯಮಗಳ ಮುಂದೆ ಗುಡುಗಿದರು.

ಭವಾನಿಪುರ ಕ್ಷೇತ್ರದಲ್ಲಿ ಮಮತಾ ಅವರನ್ನು ಅವರ ಮಾಜಿ ಬೆಂಬಲಿಗ ಸುವೇಂದು ಅಧಿಕಾರಿ ಸೋಲಿಸಿದ್ದಾರೆ ಈ ಬಾರಿ ಬಂಗಾಳದಲ್ಲಿ ಶೇ. 92ಕ್ಕಿಂತ ಹೆಚ್ಚಿನ ದಾಖಲೆಯ ಮತದಾನವಾಗಿತ್ತು, ಇದು ಇಡೀ ದೇಶದಲ್ಲೇ ಅತ್ಯಂತ ಹೆಚ್ಚಿನ ಮತದಾನದ ಪ್ರಮಾಣವಾಗಿದೆ.

ʼಮೋದಿಮಯ್ ಭಾರತ್ʼ ನಕ್ಷೆ ಬಿಡುಗಡೆ ಮಾಡಿದ ಬಿಜೆಪಿ: ಪಶ್ಚಿಮ ಬಂಗಾಳವನ್ನು ತಲುಪಿದೆ ಕೇಸರಿ ಅಲೆ

ಮತ್ತೊಂದೆಡೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಗಂಗಾ ನದಿಯು ಬಿಹಾರದಿಂದ ಗಂಗಾಸಾಗರದವರೆಗೆ ಹರಿಯುತ್ತದೆ. ಇಂದು ಬಂಗಾಳದ ಗೆಲುವಿನೊಂದಿಗೆ ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಸರ್ವತ್ರವಾಗಿ ಅರಳಿದೆ" ಎಂದು ಹರ್ಷ ವ್ಯಕ್ತಪಡಿಸಿದರು. ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಜಯಗಳಿಸಿದ್ದನ್ನು ಅವರು ಹೆಮ್ಮೆಯಿಂದ ಸ್ಮರಿಸಿದರು.

"ನಾಗರಿಕ ದೇವೋ ಭವ" ಎಂಬ ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವುದೇ ಬಿಜೆಪಿಯ ಸರಣಿ ಗೆಲುವಿನ ರಹಸ್ಯʼʼ ಎಂದು ಮೋದಿ ತಿಳಿಸಿದರು. ಈ ಫಲಿತಾಂಶವು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂದ ಮಹಾನ್ ಜಯವಾಗಿದೆ ಎಂದು ಬಣ್ಣಿಸಿದ ಅವರು, "ಇಂದಿನಿಂದ ಬಂಗಾಳವು ಭಯದಿಂದ ಮುಕ್ತವಾಗಿದೆ ಮತ್ತು ಹೊಸ ಅಭಿವೃದ್ಧಿಯತ್ತ ಸಾಗಿದೆ. ಬಂಗಾಳದಲ್ಲಿ ಈಗ ನಿಜವಾದ ಬದಲಾವಣೆ ಅಥವಾ ಪರಿಬೋರ್ತನ್ ಆಗಿದೆ" ಎಂದು ಘೋಷಿಸಿದರು. ಈ ಚುನಾವಣಾ ಫಲಿತಾಂಶವು ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿದೆ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟರು.