ಪ್ಯಾರಿಸ್: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು(PV Sindhu) ಅವರು ವಿಶ್ವ ಚಾಂಪಿಯನ್‌ಶಿಪ್‌ನ(BWF World Championships) ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೇರಿದ ಸಾಧನೆ ಮಾಡಿದರು. 15 ನೇ ಶ್ರೇಯಾಂಕಿತ ಸಿಂಧು, ಅಡಿಡಾಸ್ ಅರೆನಾದಲ್ಲಿ ನಡೆದ 43 ನಿಮಿಷಗಳ ಹೋರಾಟದಲ್ಲಿ ವಿಶ್ವದ 40 ನೇ ಶ್ರೇಯಾಂಕಿತ ಮಲೇಷ್ಯಾದ ಕರುಪತೇವನ್ ಲೆತ್ಶಾನಾ ಅವರನ್ನು 21-19, 21-15 ಗೇಮ್‌ಗಳಿಂದ ಸೋಲಿಸಿದರು.
ಈ ಗೆಲುವಿನೊಂದಿಗೆ, ಸಿಂಧು 2021 ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ನಂತರ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತನ್ನು ತಲುಪಿದರು. 2019 ರ ಚಾಂಪಿಯನ್ 2022 ಮತ್ತು 2023 ಎರಡರಲ್ಲೂ ಎರಡನೇ ಸುತ್ತಿನಲ್ಲೇ ಹೊರನಡೆದಿದ್ದರು.
ಮುಂದಿನ ಸುತ್ತಿನಲ್ಲಿ ಸಿಂಧು ಕಠಿಣ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಅಲ್ಲಿ ಅವರು ವಿಶ್ವದ 2 ನೇ ಶ್ರೇಯಾಂಕಿತ ಮತ್ತು ಚೀನಾ ಓಪನ್ ಚಾಂಪಿಯನ್ ವಾಂಗ್ ಝಿ ಯಿ ಅವರನ್ನು ಎದುರಿಸಲಿದ್ದಾರೆ. ಭಾರತೀಯ ಆಟಗಾರ್ತಿ ಕೊನೆಯ ಬಾರಿಗೆ 2022 ರಲ್ಲಿ ವಾಂಗ್ ಅನ್ನು ಸೋಲಿಸಿದ್ದರು. ಆದರೆ ಇತ್ತೀಚಿನ ಎರಡು ಮುಖಾಮುಖಿಗಳಲ್ಲಿ ಸೋತಿದ್ದಾರೆ.
ಏತನ್ಮಧ್ಯೆ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಲಿಯು ಕುವಾಂಗ್ ಹೆಂಗ್ ಮತ್ತು ಯಾಂಗ್ ಪೊ ಹಾನ್ ಅವರ ಕಠಿಣ ಸವಾಲುಗಳನ್ನು ಮೆಟ್ಟಿನಿಂತು 22-20, 21-13 ಅಂತರದಿಂದ ಗೆದ್ದು 16ನೇ ಸುತ್ತಿಗೆ ತಲುಪಿತು. ಆರಂಭಿಕ ಸುತ್ತಿನಲ್ಲಿ ಬೈ ಪಡೆದಿದ್ದ ಒಂಬತ್ತನೇ ಶ್ರೇಯಾಂಕಿತ ಜೋಡಿಯು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಆರನೇ ಶ್ರೇಯಾಂಕಿತ ಲಿಯಾಂಗ್ ವೀ ಕಾಂಗ್ ಮತ್ತು ವಾಂಗ್ ಚಾಂಗ್ ಅವರನ್ನು ಎದುರಿಸಲಿದೆ.
ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಜೋಡಿಯು ಐರ್ಲೆಂಡ್‌ನ ಜೋಶುವಾ ಮ್ಯಾಗೀ ಮತ್ತು ಮೋಯಾ ರಯಾನ್ ವಿರುದ್ಧ ನೇರ ಗೇಮ್‌ಗಳಿಂದ ಜಯಗಳಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. 16ನೇ ಶ್ರೇಯಾಂಕಿತ ಧ್ರುವ್ ಮತ್ತು ತನಿಶಾ ಜೋಡಿಯು ಕೇವಲ 35 ನಿಮಿಷಗಳಲ್ಲಿ ಐರಿಶ್ ಜೋಡಿಯನ್ನು 21-11, 21-16 ಸೆಟ್‌ಗಳಿಂದ ಸೋಲಿಸಿ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಮೆರೆದರು.
ಇದನ್ನೂ ಓದಿ ʻಪಿಚ್ ಮೇಲೆ ಪ್ರಪೋಸ್ ಮಾಡಿದ್ದೆʼ: ತಮ್ಮ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ ಆರ್ ಅಶ್ವಿನ್!