ಮುಂಬಯಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ಭಾರತ ತಂಡದ ಅನುಭವಿ ಆಟಗಾರ ಚೇತೇಶ್ವರ ಪೂಜಾರ(Cheteshwar Pujara) ಅವರ ಅಪಾರ ಕ್ರಿಕೆಟ್ ಸಾಧನೆಯನ್ನು ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್(Sachin Tendulkar), ಯುವರಾಜ್ ಸಿಂಗ್(Yuvraj Singh), ವಿವಿಎಸ್ ಲಕ್ಷ್ಮಣ್ ಸೇರಿ ಅನೇಕರು ಕೊಂಡಾಡುವ ಜತೆಗೆ ಅವರ ಮುಂದಿನ ವೃತ್ತಿ ಜೀವನಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದ ಪೂಜಾರ, 103 ಪಂದ್ಯಗಳಲ್ಲಿ 19 ಶತಕಗಳು ಸೇರಿದಂತೆ 43.60 ಸರಾಸರಿಯಲ್ಲಿ 7,195 ರನ್ ಗಳಿಸಿದ್ದಾರೆ.
"ಪೂಜಾರ, ನೀವು 3ನೇ ಸ್ಥಾನದಲ್ಲಿ ಹೊರನಡೆಯುವುದನ್ನು ನೋಡುವುದು ಯಾವಾಗಲೂ ಧೈರ್ಯ ತುಂಬುತ್ತಿತ್ತು. ನೀವು ಪ್ರತಿ ಬಾರಿ ಆಡಿದಾಗಲೂ ಶಾಂತತೆ, ಧೈರ್ಯ ಮತ್ತು ಟೆಸ್ಟ್ ಕ್ರಿಕೆಟ್‌ನ ಬಗ್ಗೆ ಆಳವಾದ ಪ್ರೀತಿಯನ್ನು ತಂದಿದ್ದೀರಿ. ಒತ್ತಡದಲ್ಲಿ ನಿಮ್ಮ ಘನ ತಂತ್ರ, ತಾಳ್ಮೆ ಮತ್ತು ಶಾಂತತೆಯು ತಂಡಕ್ಕೆ ಆಧಾರಸ್ತಂಭವಾಗಿದೆ. ಅನೇಕವುಗಳಲ್ಲಿ, ಆಸ್ಟ್ರೇಲಿಯಾದಲ್ಲಿ 2018 ರ ಸರಣಿ ಗೆಲುವು ಎದ್ದು ಕಾಣುತ್ತದೆ. ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ಮುಂದಿನ ಅಧ್ಯಾಯಕ್ಕೆ ಶುಭವಾಗಲಿ. ನಿಮ್ಮ ಎರಡನೇ ಇನ್ನಿಂಗ್ಸ್ ಅನ್ನು ಆನಂದಿಸಿ!" ಎಂದು ತೆಂಡೂಲ್ಕರ್ ಎಕ್ಸ್‌ನಲ್ಲಿ ಬರೆದಿದ್ದಾರೆ.
'ಬಿರುಗಾಳಿ ಬೀಸಿದಾಗ ಅವರು ಎದ್ದು ನಿಂತು ದಿಟ್ಟವಾಗಿ ಎದುರಿಸಿದರು. ಭರವಸೆ ಮಂಕಾದಾಗ ಅವರು ಹೋರಾಡಿದರು. ಅಭಿನಂದನೆಗಳು ಪೂಜಿ (ಪೂಜಾರ)' ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾರೈಸಿದ್ದಾರೆ.
'ದೇಶಕ್ಕಾಗಿ ಸದಾ ತನ್ನ ಮನಸ್ಸು, ದೇಹ ಹಾಗೂ ಆತ್ಮವನ್ನು ಸಮರ್ಪಿಸಿದ ಪೂಜಾರ ಅವರ ಅತ್ಯುತ್ತಮ ವೃತ್ತಿ ಜೀವನಕ್ಕಾಗಿ ಅಭಿನಂದನೆಗಳು' ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
'2021ರ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಸರಣಿಯ ನಿರ್ಣಾಯಕ ಗಾಬಾ ಟೆಸ್ಟ್ ಪಂದ್ಯದಲ್ಲಿ ಸತತ ಗಾಯದ ಹೊರತಾಗಿಯೂ ದಿಟ್ಟ ಹೋರಾಟದ ಮೂಲಕ ಸರಣಿ ಗೆಲುವಿಗೆ ಕಾರಣವಾದ ಪೂಜಾರ ಅವರ ಮನೋಬಲ ಮುಂದಿನ ಪೀಳಿಗೆಯ ಆಟಗಾರರಿಗೆ ಸ್ಫೂರ್ತಿಯಾಗಲಿ' ಎಂದು ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಪೂಜಾರ ಸಾಧನೆಯನ್ನು ಕೊಂಡಾಡಿದ್ದಾರೆ.