ಬೆಂಗಳೂರು, ಡಿ.7: ಮುಂಬರುವ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಗಳನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರಿಸಲಾಗುವುದಿಲ್ಲ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜೂ.4ರಂದು ಸಂಭವಿಸಿದ ಭೀಕರ ಕಾಲ್ತುಳಿತದ ಬಳಿಕ ಹಲವು ಮಹತ್ವದ ಟೂರ್ನಿಗಳ ಆತಿಥ್ಯ ತಪ್ಪಿಸಿಕೊಂಡಿರುವ ಬೆಂಗಳೂರಿನ ಚಿನ್ನಸ್ವಾಮಿ(Chinnaswamy) ಕ್ರೀಡಾಂಗಣದಿಂದ ಮುಂದಿನ ಐಪಿಎಲ್(IPL 2026) ಪಂದ್ಯಗಳೂ ಎತ್ತಂಗಡಿಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಇದೀಗ ಡಿ.ಕೆ. ಶಿವಕುಮಾರ್(D.K. Shivakumar) ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟಿದ್ದರು. ಆ ಬಳಿಕ ಇಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಮಹಿಳಾ ಏಕದಿನ ವಿಶ್ವಕಪ್ ಬೇರೆಡೆ ಸ್ಥಳಾಂತರಗೊಂಡಿದ್ದರೆ, ಮುಂದಿನ ಪುರುಷರ ಟಿ20 ವಿಶ್ವಕಪ್ ಪಂದ್ಯಗಳೂ ಇಲ್ಲಿ ನಡೆಯುವುದಿಲ್ಲ. 2026ರ ಐಪಿಎಲ್ ಆತಿಥ್ಯವೂ ಬೆಂಗಳೂರಿನ ಕೈತಪ್ಪುವ ಸಾಧ್ಯತೆಯಿದೆ. ಪಂದ್ಯ ಆಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಗುತ್ತಿಲ್ಲ. ಹೀಗಾಗಿ ಆರ್‌ಸಿಬಿ ತನ್ನ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ ಎಂದು ಹೇಳಲಾಗಿತ್ತು.
ಇತ್ತೀಚೆಗೆ ರಾಜ್ಯ ಸರ್ಕಾರವು ಪಂದ್ಯಗಳನ್ನು ಆಯೋಜಿಸಲು ಅನುಮೋದನೆ ನೀಡುವ ಮೊದಲು ಕ್ರೀಡಾಂಗಣದ ಸಮಗ್ರ ರಚನಾತ್ಮಕ ಫಿಟ್‌ನೆಸ್ ಪರೀಕ್ಷೆಗೆ ನಿರ್ದೇಶನ ನೀಡಿತ್ತು. ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘಕ್ಕೆ (ಕೆಎಸ್‌ಸಿಎ) ಔಪಚಾರಿಕ ನೋಟಿಸ್ ನೀಡಿದ್ದು, ಕ್ರೀಡಾಂಗಣದ ವಿವರವಾದ ರಚನಾತ್ಮಕ ಸುರಕ್ಷತಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ಕ್ರೀಡಾಂಗಣದ ಸುರಕ್ಷತೆಯ ಕುರಿತು ಚರ್ಚೆಗಳ ನಡುವೆ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಜನಸಂದಣಿ ನಿರ್ವಹಣೆಗೆ ಸರಿಯಾದ ಗಮನ ನೀಡಲಾಗುವುದು ಎಂದು ಡಿಕೆ ಶಿವಕುಮಾರ್ ಭಾನುವಾರ ಖಚಿತಪಡಿಸಿದ್ದಾರೆ.
"ಭವಿಷ್ಯದಲ್ಲಿ, ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಯಾವುದೇ ಅನಾಹುತಗಳು ಮರುಕಳಿಸದಂತೆ ನಾವು ಎಚ್ಚರವಹಿಸುತ್ತೇವೆ. ಬೆಂಗಳೂರಿನ ಹೆಮ್ಮೆಯನ್ನು ಎತ್ತಿಹಿಡಿಯುವ ರೀತಿಯಲ್ಲಿ ನಾವು ಈ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಆದರೆ ನಾವು ಅದನ್ನು ಸರಿಯಾಗಿ, ಕಾನೂನು ಚೌಕಟ್ಟಿನೊಳಗೆ ಮತ್ತು ಈ ಕ್ರೀಡಾಂಗಣವನ್ನು ಬಳಸುವಾಗ ಜನಸಂದಣಿಯ ನಿರ್ವಹಣೆಗೆ ಉತ್ತಮ ಗಮನ ಹರಿಸುತ್ತೇವೆ" ಎಂದು ಡಿಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ IPL 2026: ರಾಜಸ್ಥಾನ್ ರಾಯಲ್ಸ್‌ಗೆ ಮತ್ತೆ ಹೆಡ್ ಕೋಚ್ ಆಗಿ ಕುಮಾರ ಸಂಗಕ್ಕಾರ ನೇಮಕ!
ಇದೇ ವೇಳೆ ಪರ್ಯಾಯವಾಗಿ ದೊಡ್ಡ ಕ್ರೀಡಾಂಗಣವನ್ನು ನಿರ್ಮಿಸುವ ಸರ್ಕಾರದ ಯೋಜನೆಯನ್ನು ಅವರು ಬಹಿರಂಗಪಡಿಸಿದರು. ಮತ್ತು ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸಲಾಗುವುದಿಲ್ಲ ಎಂದು ಒತ್ತಿ ಹೇಳಿದರು. ಚಿನ್ನಸ್ವಾಮಿ ಕರ್ನಾಟಕ ಮತ್ತು ಬೆಂಗಳೂರಿನ ಹೆಮ್ಮೆ ಎಂದು ಹೇಳಿದರು.
'ಯಾವುದೇ ಐಪಿಎಲ್ ಪಂದ್ಯ ಸ್ಥಳಾಂತರಿಸಲಾಗುವುದಿಲ್ಲ. ನಾವು ಅದನ್ನು ಇಲ್ಲಿಯೇ ನಡೆಸುತ್ತೇವೆ. ಇದು ಕರ್ನಾಟಕ ಮತ್ತು ಬೆಂಗಳೂರಿನ ಹೆಮ್ಮೆ, ಮತ್ತು ನಾವು ಅದನ್ನು ರಕ್ಷಿಸುತ್ತೇವೆ. ಏನು ಮಾಡಬೇಕೋ, ಅದನ್ನು ಮುಂದೆ ಹೋಗುವಂತೆ ನೋಡಿಕೊಳ್ಳುತ್ತೇವೆ' ಎಂದು ಅವರು ಹೇಳಿದರು.