IPL 2026: ರಾಜಸ್ಥಾನ್ ರಾಯಲ್ಸ್‌ಗೆ ಮತ್ತೆ ಹೆಡ್ ಕೋಚ್ ಆಗಿ ಕುಮಾರ ಸಂಗಕ್ಕಾರ ನೇಮಕ!
Kumara Sangakkar Head Coach: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಹೆಡ್ ಕೋಚ್ ಆಗಿ ಪುನಃ ನೇಮಕಗೊಂಡಿದ್ದಾರೆ. ಆ ಮೂಲಕ ಅವರು ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ತುಂಬಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕುಮಾರ ಸಂಗಕ್ಕಾರ ಹೆಡ್ ಕೋಚ್ ಆಗಿ ನೇಮಕ. -
ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ನಿಮಿತ್ತ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ಹೆಡ್ ಕೋಚ್ ಆಗಿ ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ (Kumara Sangakkara) ನೇಮಕಗೊಂಡಿದ್ದಾರೆ. ಆ ಮೂಲಕ ಈ ವರ್ಷದ ಆರಂಭದಲ್ಲಿ ಈ ಹುದ್ದೆಯನ್ನು ತೊರೆದಿದ್ದ ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ತುಂಬಿದ್ದಾರೆ. 2021 ರಿಂದ 2024ರ ವರೆಗೆ ಆರ್‌ಆರ್ ತಂಡದಲ್ಲಿ ಹೆಡ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ತದ ನಂತರ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಸಂಗಕ್ಕಾರ ಮಾರ್ಗದರ್ಶನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, 2022ರಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತ್ತು. ನಂತರ ಕಳೆದ ಸೀಸನ್‌ನಲ್ಲಿ ದ್ರಾವಿಡ್ ಕೋಚಿಂಗ್‌ಗೆ ಬಂದ ಬಳಿಕ ರಾಜಸ್ಥಾನ್ ತಂಡದ ಕ್ರಿಕೆಟ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದರು. ಇದೀಗ ಅವರು ಈ ಎರಡೂ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.
ಕುಮಾರ ಸಂಗಕ್ಕಾರ ಅವರ ಹೆಡ್ ಕೋಚ್ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ 2022ರಲ್ಲಿ ರನ್ನರ್ ಅಪ್ ಆಗಿತ್ತು. ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸಂಜು ಸ್ಯಾಮ್ಸನ್ ನಾಯಕತ್ವದ ಆರ್‌ಆರ್ ಸೋಲು ಅನುಭವಿಸಿತ್ತು. ನಂತರ 2024ರಲ್ಲಿಯೂ ಆರ್‌ಆರ್ ತಂಡ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆದಿತ್ತು.
IPL 2026: ಆರ್‌ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿದ ಆಟಗಾರರ ಪಟ್ಟಿ!
ಇನ್ನು ರಾಹುಲ್ ದ್ರಾವಿಡ್ ಅವರು 2024ರಲ್ಲಿ ಭಾರತ ತಂಡದ ಹೆಡ್ ಕೋಚ್ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಇದಾದ ಬಳಿಕ ಅವರು 2025ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ, ಇವರ ನಾಯಕತ್ವದಲ್ಲಿ ಆರ್‌ಆರ್, ಆಡಿದ್ದ 14 ಪಂದ್ಯಗಳಿಂದ ಕೇವಲ 8 ಅಂಕಗಳನ್ನು ಕಲೆ ಹಾಕಿತ್ತು. ಸಂಜು ಹಾಗೂ ದ್ರಾವಿಡ್ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಕಾರಣದಿಂದಲೇ ದ್ರಾವಿಡ್ ಆರ್‌ಆರ್ ಕೋಚಿಂಗ್ ಜವಾಬ್ದಾರಿಯನ್ನು ತೊರೆದಿದ್ದರು ಎಂಬ ಬಗ್ಗೆ ವರದಿಯಾಗಿತ್ತು.
🚨 Official: Director of Cricket Kumar Sangakkara will also take charge as Head Coach for IPL 2026 pic.twitter.com/4IRWoQM3mj
— Rajasthan Royals (@rajasthanroyals) November 17, 2025
ಆದರೆ, ಇತ್ತೀಚೆಗೆ ಸಂಜು ಸ್ಯಾಮ್ಸನ್ ಅವರು ಟ್ರೇಡ್ ಡೀಲ್ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ತೆರಳಿದ್ದಾರೆ. ಇದೀಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಲಿಷ್ಠವಾಗಿ ಕಟ್ಟುವ ದೊಡ್ಡ ಜವಾಬ್ದಾರಿ ಇದೀಗ ಕುಮಾರ ಸಂಗಕ್ಕಾರ ಅವರ ಹೆಗಲಿಗೆ ಬಿದ್ದಿದೆ. ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ಅವರು ಇದೀಗ ಆರ್‌ಆರ್‌ಗೆ ಕೀ ಆಟಗಾರರಾಗಿದ್ದಾರೆ.
IPL 2026: ಮಿನಿ ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು?
ಕುಮಾರ ಸಂಗಕ್ಕಾರ ಪ್ರತಿಕ್ರಿಯೆ
"ರಾಜಸ್ಥಾನ್ ರಾಯಲ್ಸ್ ತಂಡದ ಹೆಡ್ ಕೋಚ್ ಹುದ್ದೆಗೆ ಮರಳಲು ಹಾಗೂ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿರುವ ಗುಂಪಿನಲ್ಲಿ ಕಾರ್ಯನಿರ್ವಹಿಸುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. ನನ್ನೊಂದಿಗೆ ಶಕ್ತಿಯುತ ಕೋಚಿಂಗ್ ಬಳಗವನ್ನು ಹೊಂದಿರುವುದು ನಿಜಕ್ಕೂ ಸಂತಸ ತಂದಿದೆ. ವಿಕ್ರಮ್ ಟ್ರೆವೋರ್, ಶೇನ್ ವ್ಯಾಟ್ಸನ್ ಹಾಗೂ ಸಿದ್ ಅವರು ತಮ್ಮ ಮೌಲ್ಯಯುತ ಅನುಭವವನ್ನು ತಂದುಕೊಡಲಿದ್ದಾರೆ. ಸಾಧ್ಯವಾದಷ್ಟು ಆಟಗಾರರನ್ನು ಬಲಿಷ್ಠವಾಗಿ ಸಜ್ಜುಗೊಳಿಸಲು ನಾವು ತಯಾರಿ ನಡೆಸುತ್ತೇವೆ," ಎಂದು ಕುಮಾರ ಸಂಗಕ್ಕಾರ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.