ʻಮರಳಿನ ಮೇಲೆ ಬೌಲ್ ಮಾಡುತ್ತಿದ್ದರುʼ: ಕುಲ್ದೀಪ್ ಸಕ್ಸಸ್ಗೆ ಕಾರಣ ತಿಳಿಸಿದ ಅಭಿಷೇಕ್ ನಾಯರ್!
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಗಿದ್ದರು. ಈ ಹಿನ್ನೆಲೆ ಅವರ ಬೌಲಿಂಗ್ ಯಶಸ್ಸಿನ ಕುರಿತು ಟೀಮ್ ಇಂಡಿಯಾ ಮಾಜಿ ಸಹಾಯಕ ಕೋಚ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಕುಲ್ದೀಪ್ ಯಾದವ್ ಅವರ ಬೌಲಿಂಗ್ ಸಕ್ಸಸ್ಗೆ ಕಾರಣ ತಿಳಿಸಿದ ಅಭಿಷೇಕ್ ನಾಯರ್ . -

ದುಬೈ: ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ( Asia Cup 2025) ಟೂರ್ನಿಯಲ್ಲಿ ಭಾರತ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಸ್ಪಿನ್ ಮೋಡಿ ಮಾಡುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಚೈನಾಮನ್ ಸ್ಪಿನ್ನರ್ ಪ್ರಮುಖ ಪಾತ್ರ ವಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ನಾಯರ್ (Abhishek Nayar), ಸ್ಪಿನ್ನರ್ ಕುಲ್ದೀಪ್ ಇತ್ತೀಚಿನ ದಿನಗಳಲ್ಲಿ ತನ್ನ ಬೌಲಿಂಗ್ ಮೇಲೆ ತುಂಬಾ ಶ್ರಮ ಹಾಕಿದ್ದಾರೆ ಮತ್ತು ಇದರ ಫಲವನ್ನು ಈಗ ಏಷ್ಯಾ ಕಪ್ ಟೂರ್ನಿಯಲ್ಲಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತ ತಂಡದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್, ಎಡಗೈ ಲೆಗ್ ಸ್ಪಿನ್ನರ್ ಕುಲ್ದೀಪ್ ಮೊದಲು ಮರಳಿನ ಮೇಲೆ ಅಭ್ಯಾಸ ಮಾಡುತ್ತಿದ್ದರು, ಅಲ್ಲಿ ಬೌಲ್ ಮಾಡುವುದರಿಂದ ಹೆಚ್ಚುವರಿ ವೇಗ ದೊರೆಯುತ್ತಿತ್ತು ಎಂದು ಬಹಿರಂಗಪಡಿಸಿದ್ದಾರೆ. ಕುಲ್ದೀಪ್ ಈ ಬಾರಿ ಅದ್ಭುತ ಫಾರ್ಮ್ನಲ್ಲಿದ್ದು, ಭಾರತಕ್ಕೆ ಬಂದ ಎರಡೂ ಗೆಲುವುಗಳಲ್ಲಿ "ಮ್ಯಾನ್ ಆಫ್ ದಿ ಮ್ಯಾಚ್" ಪ್ರಶಸ್ತಿ ಪಡೆದಿದ್ದಾರೆ. ಯುಎಇ ವಿರುದ್ಧ ನಾಲ್ಕು ವಿಕೆಟ್ ಪಡೆದ ಅವರು, ಪಾಕಿಸ್ತಾನ ವಿರುದ್ಧ ಮೂರು ವಿಕೆಟ್ ಪಡೆದು ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.
Asia Cup 2025: ಭಾರತ ಸೂಪರ್-4ಗೆ ಎಂಟ್ರಿ; ಪಾಕ್ ಲೆಕ್ಕಾಚಾರ ಹೇಗಿದೆ?
ಈ ಬಗ್ಗೆ ಸೋನಿ ವಾಹಿನಿಯಲ್ಲಿ ಮಾತನಾಡಿದ ಅಭಿಷೇಕ್ ನಾಯರ್, "ಕುಲ್ದೀಪ್ ಯಾದವ್ ತುಂಬಾ ಕಠಿಣ ಸಮಯಗಳನ್ನು ಎದುರಿಸಿದ್ದರು, ಆದರೆ ಅವರ ಬಾಲ್ಯದ ಕೋಚ್ ಇದನ್ನು ಸುಲಭಗೊಳಿಸಿದ್ದಾರೆ," ಎಂದು ತಿಳಿಸಿದ್ದಾರೆ.
"ನಾನು ಅವರ ಜೊತೆ ಮಾತನಾಡಿದ್ದೇನೆ. ಇದು ತುಂಬಾ ಆಸಕ್ತಿದಾಯಕ. ಅವರು ಮರಳಿನ ಮೇಲೆ ಬೌಲ್ ಮಾಡುತ್ತಿದ್ದರು, ಅಲ್ಲಿ ಚೆಂಡು ನಿಂತು ಬರುತ್ತದೆ. ಅಲ್ಲಿ ವೇಗದಿಂದ ಬೌಲ್ ಮಾಡಿದರೆ ಚೆಂಡು ಹೆಚ್ಚು ಕಚ್ಚಿಕೊಳ್ಳುತ್ತದೆ. ಅದು ಒಂದು ಕಾರಣ. ಅವರು ತನ್ನ ರನ್ಅಪ್ನಲ್ಲೂ ಬದಲಾವಣೆ ಮಾಡಿದ್ದಾರೆ. ಮೊದಲು ಒಂದು ಆಂಗಲ್ನಲ್ಲಿ ಓಡುತ್ತಿದ್ದರು, ಅದನ್ನು ನೇರ ಮಾಡಿದ್ದಾರೆ. ಜೊತೆಗೆ ಹೆಚ್ಚು ಜಿಗಿಯುತ್ತಿದ್ದರು, ಅದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಅವರು ಸಾಕಷ್ಟು ಬದಲಾವಣೆಯನ್ನು ಕಂಡಿದ್ದಾರೆ. ಹೀಗಾಗಿ ಕೆಲವು ಬದಲಾವಣೆಗಳೊಂದಿಗೆ ಅವರು ತುಂಬಾ ಪರಿಶ್ರಮ ಪಟ್ಟಿದ್ದಾರೆ, ಏಕೆಂದರೆ ಅವರಿಗೆ ಇದು ಕಷ್ಟದ ಪರಿಸ್ಥಿತಿಯಾಗಿತ್ತು," ಎಂದು ಹೇಳಿದ್ದಾರೆ.
Asia Cup: ಒಮಾನ್ ವಿರುದ್ಧ ಯುಎಇಗೆ 42 ರನ್, ಸೂಪರ್ 4ಕ್ಕೆ ಅರ್ಹತೆ ಪಡೆದ ಭಾರತ!
ಮುಂದುವರಿದು ಮಾತನಾಡಿದ ಅವರು, "ಅನೇಕರು ಅನೇಕ ಮಾತುಗಳನ್ನು ಆಡುತ್ತಿದ್ದರು. ಆದರೆ ಬಾಲ್ಯದಿಂದ ಪರಿಚಯವಿರುವ ಕೋಚ್ ಇದ್ದರೆ ಅದು ಸುಲಭ. ಅವರ ಸಹಾಯದಿಂದ ಕುಲ್ದೀಪ್ ಪರಿಶ್ರಮಪಟ್ಟರು. ಈಗ ನಾವು ಕಾಣುತ್ತಿರುವುದು ಅವರ ಶ್ರಮದ ಫಲ ಎಂದು ಕುಲ್ದೀಪ್ ಯಾದವ್ ಅವರನ್ನು ಹಾಡಿ ಹೊಗಳಿದ್ದಾರೆ.
30 ವರ್ಷದ ಕುಲ್ದೀಪ್ ಈ ವರ್ಷದ ಆರಂಭದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತದ ಪರ ಪ್ರಮುಖ ಪಾತ್ರ ವಹಿಸಿದ್ದರು. ಐದು ಪಂದ್ಯಗಳಲ್ಲಿ ಏಳು ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಕಿರೀಟ ತಂದುಕೊಟ್ಟಿದ್ದರು. ಸೆಪ್ಟೆಂಬರ್ 15 ರಂದು ಯುಎಇ, ಒಮಾನ್ ವಿರುದ್ಧ ಗೆದ್ದ ಪರಿಣಾಮ ಏಷ್ಯಾ ಕಪ್ ಟೂರ್ನಿಯ ಸೂಪರ್-4ಕ್ಕೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಅರ್ಹತೆ ಪಡೆದಿದೆ.
Asia Cup 2025: ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್!
ಮುಂದಿನ ಪಂದ್ಯ ಯಾವಾಗ? ಎಲ್ಲಿ?
ಭಾರತ ತಂಡದ ಮುಂದಿನ ಪಂದ್ಯದಲ್ಲಿ ಒಮಾನ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ಸೆಪ್ಟೆಂಬರ್ 19 ಶುಕ್ರವಾರದಂದು ನಡೆಯಲಿದೆ. ಈ ಪಂದ್ಯ ರಾತ್ರಿ 8:00 ಗಂಟೆಗೆ ಆರಂಭವಾಗಲಿದ್ದು, ಅಬುದಾಬಿಯ ಶೇಖ್ ಝಾಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.