ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Apollo Tyres: ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಸ್ಪಾನ್ಸರ್‌ ಘೋಷಿಸಿದ ಬಿಸಿಸಿಐ!

ಭಾರತೀಯ ಕ್ರಿಕೆಟ್ ತಂಡಕ್ಕೆ ಅಧಿಕೃತ ಪ್ರಾಯೋಜಕತ್ವವನ್ನು ಡ್ರೀಮ್-11 ಬದಲಿಗೆ ಅಪೋಲೋ ಟೈಯರ್ಸ್‌ಗೆ ನೀಡಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಪ್ರಸ್ತುತ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಪುರುಷರ ತಂಡ ಯಾವುದೇ ಸ್ಪಾನ್ಸರ್‌ ಇಲ್ಲದೆ ಆಡುತ್ತಿದೆ. ಬಹುಶಃ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹೊಸ ಸ್ಪಾನ್ಸರ್‌ನೊಂದಿಗೆ ಟೀಮ್‌ ಇಂಡಿಯಾ ಕಣಕ್ಕೆ ಇಳಿಯಬಹುದು.

ಭಾರತ ಕ್ರಿಕೆಟ್‌ ತಂಡಕ್ಕೆ ಅಪೋಲೋ ಟೈಯರ್ಸ್‌ ನ್ಯೂ ಸ್ಪಾನ್ಸರ್‌!

ಭಾರತ ಕ್ರಿಕೆಟ್‌ ತಂಡಕ್ಕೆ ಅಪೋಲೋ ಟೈಯರ್ಸ್‌ ನೂತನ ಸ್ಪಾನ್ಸರ್‌. -

Profile Ramesh Kote Sep 16, 2025 8:28 PM

ದುಬೈ: ಭಾರತ ಕ್ರಿಕೆಟ್‌ ತಂಡದ ಜೆರ್ಸಿಯ ಪ್ರಾಯೋಜಕತ್ವ ಬಿಸಿಸಿಐಗೆ (BCCI) ಪ್ರಮುಖ ಆದಾಯದ ಮೂಲವಾಗಿದೆ. 2023ರಿಂದ ಬೈಜೂಸ್ ಒಪ್ಪಂದ ಮುಗಿದ ನಂತರ ಡ್ರೀಮ್ 11ಗೆ ಪ್ರಾಯೋಜಕತ್ವವನ್ನು ನೀಡಲಾಗಿತ್ತು. ಇದೀಗ ಭಾರತ ಕ್ರಿಕೆಟ್‌ ತಂಡಕ್ಕೆ (Indian Cricket Team) ಅಪೋಲೋ ಟೈಯರ್ಸ್‌ಗೆ (Apollo Tyres) ಪ್ರಾಯೋಜಕತ್ವವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡ ತನ್ನ ಹೊಸ ಜೆರ್ಸಿಯಲ್ಲಿ ಇನ್ನು ಮುಂದೆ ಅಪೋಲೋ ಟೈಯರ್ಸ್‌ ಕಾಣಿಸಿಕೊಳ್ಳಲಿದೆ. ಬಿಸಿಸಿಐ ಅಪೋಲೋ ಟೈಯರ್ಸ್‌ ಜೊತೆಗೆ 2028ರವರೆಗೂ ಒಪ್ಪಂದ ಮಾಡಿಕೊಂಡಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಬೆಟ್ಟಿಂಗ್ ಸಬಂಧಿತ ಆಪ್‌ಗಳನ್ನು ಸರ್ಕಾರ ನಿಷೇಧಿಸಿದ ನಂತರ ಡ್ರೀಮ್ 11 ಜೊತೆಗೆ ಬಿಸಿಸಿಐ ಒಪ್ಪಂದ ಮುರಿದಿದೆ.

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಬಿಸಿಸಿಐ,"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ಜಾಗತಿಕ ಟೈಯರ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಅಪೋಲೋ ಟೈಯರ್‌ ಸಂಸ್ಥೆಗೆ ಭಾರತ ಕ್ರಿಕೆಟ್‌ ತಂಡದ ನೂತನ ಪ್ರಾಯೋಜಕತ್ವವನ್ನು ನೀಡಲಾಗಿದೆ. ಆ ಮೂಲಕ ಅಪೋಲೋ ಟೈಯರ್ಸ್‌ ಭಾರತೀಯ ಕ್ರಿಕೆಟ್‌ಗೆ ಇದೇ ಮೊದಲ ಬಾರಿ ಪ್ರವೇಶ ಮಾಡುತ್ತಿದೆ, ಇದು ರಾಷ್ಟ್ರದೊಂದಿಗೆ ಆಳವಾಗಿ ಪ್ರತಿಧ್ವನಿಸುವ ಕ್ರೀಡೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಾರ್ಯತಂತ್ರದ ಕ್ರಮವಾಗಿದೆ," ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ವಿರಾಟ್‌ ಕೊಹ್ಲಿ-ಎಂಎಸ್‌ ಧೋನಿ ನಡುವೆ ಉತ್ತಮ ಟಿ20ಐ ಬ್ಯಾಟರ್‌ ಆರಿಸಿದ ದಿನೇಶ್‌ ಕಾರ್ತಿಕ್‌!

ಈ ಒಪ್ಪಂದವು ಎರಡೂವರೆ ವರ್ಷಗಳ ಅವಧಿಯದ್ದಾಗಿದ್ದು, 2028ರ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳುತ್ತದೆ. ಒಪ್ಪಂದದ ನಿಯಮಗಳ ಅಡಿಯಲ್ಲಿ ಡ್ರೀಮ್ 11 ಹೊಂದಿದ್ದ ಹಿಂದಿನ ಪ್ರಾಯೋಜಕತ್ವದ ನಂತರ, ಅಪೋಲೋ ಟೈಯರ್ಸ್‌ ಲೋಗೋವನ್ನು ಎಲ್ಲಾ ಸ್ವರೂಪಗಳಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳ ಜೆರ್ಸಿಗಳಲ್ಲಿ ಮುದ್ರಿಸಲಾಗುತ್ತದೆ. ಅಪೋಲೋ ಟೈಯರ್ಸ್‌ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 4.5 ಕೋಟಿ ರೂ.ಗಳನ್ನು ಪಾವತಿಸಲಿದ್ದು, ಡ್ರೀಮ್ 11 ಈ ಹಿಂದೆ ಪ್ರತಿ ಪಂದ್ಯಕ್ಕೆ 4 ಕೋಟಿ ರೂ. ಗಳನ್ನು ನೀಡುತ್ತಿತ್ತು. ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ನೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಲಾಭದಾಯಕ ಪ್ರಾಯೋಜಕತ್ವದ ಒಪ್ಪಂದಗಳಲ್ಲಿ ಒಂದಾಗಿದೆ.



ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆ

"ನಮ್ಮ ಹೊಸ ಪ್ರಾಯೋಜಕರಾಗಿ ಅಪೋಲೋ ಟೈಯರ್ಸ್ ಆಗಮನವು ನಮ್ಮ ತಂಡಗಳ ಕಠಿಣ ಪರಿಶ್ರಮ ಮತ್ತು ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಇದು ಕೇವಲ ವಾಣಿಜ್ಯ ಒಪ್ಪಂದಕ್ಕಿಂತ ಹೆಚ್ಚಿನದಾಗಿದೆ ಮತ್ತು ಲಕ್ಷಾಂತರ ಜನರ ನಂಬಿಕೆ ಮತ್ತು ಗೌರವವನ್ನು ಗಳಿಸಿರುವ ಎರಡು ಸಂಸ್ಥೆಗಳ ನಡುವಿನ ಪಾಲುದಾರಿಕೆಯಾಗಿದೆ," ಎಂದು ಹೇಳಿದ್ದಾರೆ.

ʻಪಾಕ್‌ ಎದುರು ಭಾರತ ಸೋಲಲಿದೆʼ: ನಕಲಿ ಕಾಮೆಂಟ್ಸ್‌ ವಿರುದ್ಧ ರಿಕಿ ಪಾಂಟಿಂಗ್‌ ಆಕ್ರೋಶ!

ಸಂತಸ ವ್ಯಕ್ತಪಡಿಸಿದ ಬಿಸಿಸಿಐ ಉಪಾಧ್ಯಕ್ಷ

ಈ ಕುರಿತು ಮಾತನಾಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, "ನಮ್ಮ ಹೊಸ ಪ್ರಮುಖ ಪ್ರಾಯೋಜಕರಾಗಿ ಅಪೋಲೋ ಟೈಯರ್ಸ್ ಅನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಇದು ಭಾರತದ ಎರಡು ಅತ್ಯಂತ ಶಕ್ತಿಶಾಲಿ ಮತ್ತು ಶಾಶ್ವತ ಪರಂಪರೆಗಳಾದ ಭಾರತೀಯ ಕ್ರಿಕೆಟ್‌ನ ಅಚಲ ಚೈತನ್ಯ ಮತ್ತು ಅಪೋಲೋ ಟೈಯರ್ಸ್‌ನ ಪ್ರವರ್ತಕ ಪರಂಪರೆಯನ್ನು ಒಟ್ಟುಗೂಡಿಸುವ ಒಂದು ಸ್ಮರಣೀಯ ಸಂದರ್ಭವಾಗಿದೆ. ಬಿಡ್ಡಿಂಗ್ ಪ್ರಕ್ರಿಯೆಯ ಸ್ಪರ್ಧಾತ್ಮಕ ಸ್ವರೂಪವು ಬಿಸಿಸಿಐ ಮತ್ತು ಟೀಮ್ ಇಂಡಿಯಾದ ಜಾಗತಿಕ ಬ್ರ್ಯಾಂಡ್‌ನಲ್ಲಿ ಬಲವಾದ ಮಾರುಕಟ್ಟೆ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಈ ಪಾಲುದಾರಿಕೆಯು ಪರಸ್ಪರ ಬೆಳವಣಿಗೆ ಮತ್ತು ಯಶಸ್ಸಿಗೆ ಶಕ್ತಿಯಾಗಲಿದೆ ಎಂದು ನಮಗೆ ವಿಶ್ವಾಸವಿದೆ," ಎಂದು ತಿಳಿಸಿದ್ದಾರೆ.

Asia Cup 2025: ಭಾರತ ಸೂಪರ್‌-4ಗೆ ಎಂಟ್ರಿ; ಪಾಕ್‌ ಲೆಕ್ಕಾಚಾರ ಹೇಗಿದೆ?

'ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025'ರ ಅಡಿಯಲ್ಲಿ ಸರ್ಕಾರವು ಡ್ರೀಮ್ 11 ಸೇರಿದಂತೆ ನೈಜ-ಹಣದ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದ ನಂತರ ಬಿಸಿಸಿಐ ಜೆರ್ಸಿ ಪ್ರಾಯೋಜಕತ್ವವನ್ನು ಕಳೆದುಕೊಂಡಿತು.

"ಯಾವುದೇ ವ್ಯಕ್ತಿಯು ಆನ್‌ಲೈನ್ ಹಣದ ಗೇಮಿಂಗ್ ಸೇವೆಗಳನ್ನು ನೀಡಬಾರದು, ಸಹಾಯ ಮಾಡಬಾರದು, ಪ್ರೋತ್ಸಾಹಿಸಬಾರದು, ಪ್ರೇರೇಪಿಸಬಾರದು, ತೊಡಗಿಸಿಕೊಳ್ಳಬಾರದು ಅಥವಾ ಯಾವುದೇ ವ್ಯಕ್ತಿಯನ್ನು ಯಾವುದೇ ಆನ್‌ಲೈನ್ ಹಣದ ಆಟವನ್ನು ಆಡಲು ನೇರವಾಗಿ ಅಥವಾ ಪರೋಕ್ಷವಾಗಿ ಉತ್ತೇಜಿಸುವ ಯಾವುದೇ ಜಾಹೀರಾತಿನಲ್ಲಿ ಭಾಗಿಯಾಗಬಾರದು," ಎಂದು ಕಾನೂನು ಹೇಳುತ್ತದೆ.