ಆಂಡಿ ಫ್ಲವರ್ ಆರ್ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್ಗೆ ಕೋಚ್ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್ ಕಾರ್ತಿಕ್!
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಹೆಡ್ ಕೋಚ್ ಆಗುವ ಸಂಭಾವ್ಯ ವ್ಯಕ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಆಂಡಿ ಫ್ಲವರ್ ಕೂಡ ಒಬ್ಬರು. ಆದರೆ, ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಆಂಡಿ ಫ್ಲವರ್ ಬಗ್ಗೆ ದಿನೇಶ್ ಕಾರ್ತಿಕ್ ಮಹತ್ವದ ಹೇಳಿಕೆ. -
ನವದೆಹಲಿ: ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್ ಕೋಚ್ ಹುದ್ದೆ ಸದ್ಯ ಖಾಲಿ ಇದೆ ಹಾಗೂ ಈ ಹುದ್ದೆಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಅಕಾಡೆಮಿ ಸೂಕ್ತ ವ್ಯಕ್ತಿಯನ್ನು ನೇಮಿಸಲು ಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಹಲವು ಮಾಜಿ ಕ್ರಿಕೆಟಿಗರು ಈ ರೇಸ್ನಲ್ಲಿದ್ದಾರೆ. ಇದರ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಹಾಗೂ ಜಿಂಬಾಬ್ವೆ ದಿಗ್ಗಜ ಆಂಡಿ ಫ್ಲವರ್ (Andy Flower) ಕೂಡ ಇದ್ದಾರೆ. ನಾಸೆರ್ ಹುಸೇನ್ ಅವರು ಕೂಡ, ಆಂಡಿ ಫ್ಲವರ್ಗೆ ಈ ಹುದ್ದೆಯನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅದರಂತೆ ಆರ್ಸಿಬಿಯನ್ನು ಎರಡು ಬಾರಿ ಚಾಂಪಿಯನ್ಸ್ ಮಾಡಿರುವ ಆಂಡಿ ಫ್ಲವರ್ ಇದೀಗ ಬೆಂಗಳೂರು ಫ್ರಾಂಚೈಸಿಯನ್ನು ತೊರೆಯುತ್ತಾರಾ? ಅಥವಾ ಆರ್ಸಿಬಿ ತಂಡದಲ್ಲಿಯೇ ಮುಂದುವರಿಯುತ್ತಾರಾ ಎಂಬ ಬಗ್ಗೆ ಅಭಿಮಾನಿಗಳಿಗೆ ಗೊಂದಲವಾಗಿದೆ. ಈ ಬಗ್ಗೆ ಆರ್ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ (Dinesh Karthik) ಸ್ಪಷ್ಟನೆ ನೀಡಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಂಡಿ ಫ್ಲವರ್ ಅವರು ಹೆಡ್ ಕೋಚ್ ಆಗುವ ಸಾಧ್ಯತೆ ತೀರಾ ವಿರಳ ಎಂದು ಹೇಳಿದ ಭಾರತದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಎರಡು ಬಾರಿ ಚಾಂಪಿಯನ್ಸ್ ಆರ್ಸಿಬಿ ತಂಡವನ್ನು ಫ್ಲವರ್ ತೊರೆಯುವ ಸಂಭವ ಬರುವುದೇ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
"ಈ ವಿಚಾರದ ಬಗ್ಗೆ ನಾವು ಗಂಭೀರವಾಗಿ ಹೇಳುವುದಾದರೆ, ಆ ಜವಾಬ್ದಾರಿಗೆ ಅವರು ಅತ್ಯುತ್ತಮ ಅಭ್ಯರ್ಥಿಯಾಗಲಿದ್ದಾರೆ ಎಂದು ನಾನು ನಂಬುತ್ತೇನೆ," ಎಂದು ದಿನೇಶ್ ಕಾರ್ತಿಕ್ ಸ್ಕೈ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
ಇಂಗ್ಲೆಂಡ್ಗೆ ಕರೆತರಲು ಆರ್ಸಿಬಿ ಹೆಡ್ ಕೋಚ್ ಆಂಡಿ ಫ್ಲವರ್ ಮೇಲೆ ಕಣ್ಣಾಕಿದ ನಾಸೆರ್ ಹುಸೇನ್!
"ಖಂಡಿತವಾಗಿಯೂ ಅವರ ಹೆಸರನ್ನು ಈ ಹುದ್ದೆಗೆ ಪರಿಗಣಿಸಬೇಕು. ಆದರೆ ಇಂಗ್ಲೆಂಡ್ ತಂಡದ ಈಗಿನ ಪರಿಸ್ಥಿತಿ ಹಾಗೂ ಅವರ ಈಗಾಗಲೇ ತುಂಬಾ ಬ್ಯುಸಿ ವೇಳಾಪಟ್ಟಿಯನ್ನು ಗಮನಿಸಿದರೆ, ಅವರು ಈ ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಈ ಹುದ್ದೆಯನ್ನು ಸ್ವೀಕರಿಸಿದರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತದೆ," ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.
Andy Flower to England? DK drops a big hint!
— Cricket Updates (@arman7590) July 13, 2026
Dinesh Karthik says while Flower is a top candidate for England's Test coach role, his long-term commitment and packed schedule with RCB make it highly unlikely. Availability remains the biggest hurdle! 💥#RCB #Cricket #dineshkarthik pic.twitter.com/e5Ojyz91nH
ಇತ್ತೀಚಿನ ವರ್ಷಗಳಲ್ಲಿ ಆಂಡಿ ಫ್ಲವರ್ ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಮುಖ್ಯವಾಗಿ ಫ್ರಾಂಚೈಸಿ ಕ್ರಿಕೆಟ್ಗೆ ಮೀಸಲಿಟ್ಟಿರುವುದನ್ನು ಉಲ್ಲೇಖಿಸಿದ ದಿನೇಶ್ ಕಾರ್ತಿಕ್, ಅವರ ಈಗಿನ ಬದ್ಧತೆಗಳಿಗೆ ಹೊಂದಿಕೊಳ್ಳುವಂತೆ ಇಂಗ್ಲೆಂಡ್ ಕ್ರಿಕೆಟ್ ವ್ಯವಸ್ಥೆ ಅವಕಾಶ ಕಲ್ಪಿಸುವುದು ವಾಸ್ತವಿಕವಾಗಿ ಸಾಧ್ಯವೇ ಎಂಬ ಪ್ರಶ್ನೆ ಎತ್ತಿದರು. ವಿಶೇಷವಾಗಿ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಗಳು ಕೆಲವೊಮ್ಮೆ ಒಂದಕ್ಕೊಂದು ಹೊಂದಿಕೆಯಾಗುವ ಹಿನ್ನೆಲೆಯಲ್ಲಿ ಇದು ಸವಾಲಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬ್ರೆಂಡನ್ ಮೆಕಲಮ್
"ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಐಪಿಎಲ್ಗೆ ಆದ್ಯತೆ ನೀಡಲು ಹಾಗೂ ಅದರ ಬಳಿಕ ಟೆಸ್ಟ್ ಕ್ರಿಕೆಟ್ಗೆ ಹೊಂದಿಕೊಳ್ಳಲು ಸಿದ್ಧವಾಗಿದೆ ಎಂಬ ಲೇಖನವೊಂದನ್ನು ನಾನು ಓದಿದ್ದೆ. ಆದರೆ ಈಗಿನ ಕ್ರಿಕೆಟ್ ವೇಳಾಪಟ್ಟಿಯನ್ನು ನೋಡಿದರೆ ಅದು ಅಷ್ಟು ಸುಲಭದ ವಿಷಯವಲ್ಲ. ಜೇಕಬ್ ಬೆಥೆಲ್ ಮೊದಲ ಟೆಸ್ಟ್ಗೆ ಲಭ್ಯವಾಗದಿದ್ದಾಗ ಅಥವಾ ಜೋಫ್ರಾ ಆರ್ಚರ್ ತಂಡದಲ್ಲಿರದಿದ್ದಾಗ ಸಾಕಷ್ಟು ಚರ್ಚೆ ನಡೆಯಿತು. 'ಏಕೆ? ಪ್ರಮುಖ ಆಟಗಾರ ತಂಡದಲ್ಲಿಲ್ಲವೇ?' ಎಂಬ ಪ್ರಶ್ನೆಗಳನ್ನು ಅನೇಕರು ಎತ್ತಿದ್ದರು," ಎಂದು ಕಾರ್ತಿಕ್ ಹೇಳಿದ್ದಾರೆ.
ಆರ್ಸಿಬಿ ತಂಡವನ್ನು ಆಂಡಿ ಫ್ಲವರ್ ಏಕೆ ತೊರೆಯಬೇಕು?
"ಆಂಡಿ ಫ್ಲವರ್ ಈಗಾಗಲೇ ಆರ್ಸಿಬಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರ ಪರಿಣಾಮವಾಗಿ ಅವರು ಕೆಲವು ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗದೇ ಇರಬಹುದು. ಆಶಸ್ ಸರಣಿಯಂತಹ ಮಹತ್ವದ ಟೂರ್ನಿಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಒಂದು ಅಥವಾ ಎರಡು ಟೆಸ್ಟ್ ಪಂದ್ಯಗಳಿಗೆ ಮುಖ್ಯ ಕೋಚ್ ತಂಡದೊಂದಿಗೆ ಇಲ್ಲದಿದ್ದರೆ, ಅದನ್ನು ಇಂಗ್ಲೆಂಡ್ ಒಪ್ಪಿಕೊಳ್ಳುತ್ತದೆಯೇ?" ಎಂದು ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ.
"ಮುಂದಿನ ವರ್ಷದ ಮೇ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಪಂದ್ಯವಿದೆ ಎಂದು ಕೇಳಿದ್ದೇನೆ. ಅದೇ ಸಮಯದಲ್ಲಿ ಆಂಡಿ ಫ್ಲವರ್ ಆರ್ಸಿಬಿಯೊಂದಿಗೆ ಐಪಿಎಲ್ನಲ್ಲಿ ನಿರತರಾಗಿದ್ದರೆ, ಅದು ಕೂಡ ಇಂಗ್ಲೆಂಡ್ಗೆ ಒಂದು ದೊಡ್ಡ ಸವಾಲಾಗಬಹುದು," ಎಂದು ಆರ್ಸಿಬಿ ಮೆಂಟರ್ ತಿಳಿಸಿದ್ದಾರೆ.