ನವದೆಹಲಿ: ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಭಾರತ ತಂಡ, ಶ್ರೀಲಂಕಾ ವಿರುದ್ಧ ಆರು ಪಂದ್ಯಗಳ ವೈಟ್ಬಾಲ್ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ನಡೆಯಲಿವೆ. ನವೆಂಬರ್ 29ರಂದು ತಂಡದ ಆಯ್ಕೆ ನಡೆಯಬೇಕಿತ್ತಾದರೂ, ಬಿಸಿಸಿಐ ಆಯ್ಕೆ ಸಮಿತಿಯ ಸಭೆ ಮುಂದೂಡಿಕೆಯಾಗಿದೆ. ಹೊಸ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ 11 ತಿಂಗಳಿಗಿಂತ ಕಡಿಮೆ ಸಮಯ ಬಾಕಿಯಿರುವ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಆಟಗಾರರ ಫಿಟ್ನೆಸ್, ಲಭ್ಯತೆ ಹಾಗೂ ಭವಿಷ್ಯದ ಯೋಜನೆಗಳತ್ತ ಗಮನಹರಿಸಲಿದೆ. ಇದರ ನಡುವೆ ಕೆಲವು ಸಮಯದಿಂದ ಏಕದಿನ ತಂಡದಿಂದ ಹೊರಗುಳಿದಿರುವ ಪ್ರಮುಖ ಆಟಗಾರರು ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.
ʻಮೊದಲು ನಿಮ್ಮಿಂದ ಆರಂಭವಾಗಿದ್ದು, ಆದರೆ ನಾವು ಮುಗಿಸುತ್ತೇವೆʼ: ಭಾರತಕ್ಕೆ ಕೈಲ್ ಜೇಮಿಸನ್ ವಾರ್ನಿಂಗ್!
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಬಹುದಾದ ಮೂವರು ಪ್ರಮುಖ ಆಟಗಾರರ ವಿವರ ಇಲ್ಲಿದೆ.
1.ಜಸ್ಪ್ರೀತ್ ಬುಮ್ರಾ
ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಏಕದಿನ ಕ್ರಿಕೆಟ್ಗೆ ಮರಳುವಿಕೆ ಕೂಡ ಕುತೂಹಲ ಮೂಡಿಸಿದೆ. 2026ರ ಜುಲೈ 16ರಂದು ಕಾರ್ಡಿಫ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದೇ ಅವರ ಕೊನೆಯ ಏಕದಿನ ಪಂದ್ಯವಾಗಿದೆ.
ಆ ಪಂದ್ಯದಲ್ಲಿ ಫೀಲ್ಡಿಂಗ್ನಲ್ಲಿ ಗಾಯಗೊಂಡಿದ್ದ ಬುಮ್ರಾ, ಲಾರ್ಡ್ಸ್ನಲ್ಲಿ ನಡೆದಿದ್ದ ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಬಳಿಕ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನೂ ತಪ್ಪಿಸಿಕೊಂಡಿದ್ದರು.
ಇದೀಗ ಅಫ್ಘಾನಿಸ್ತಾನ ವಿರುದ್ಧದ ತವರಿನ ಟಿ20ಐ ಸರಣಿಗೆ ಬುಮ್ರಾ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರ ಲಭ್ಯತೆಯು ಫಿಟ್ನೆಸ್ ಅನ್ನು ಅವಲಂಬಿಸಿದೆ. 2027ರ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬುಮ್ರಾ ಅವರನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಬೇಕೇ ಅಥವಾ ಅವರ ಕೆಲಸದ ಒತ್ತಡವನ್ನು ನಿಯಂತ್ರಿಸಬೇಕೇ ಎಂಬ ಬಗ್ಗೆ ಆಯ್ಕೆ ಸಮಿತಿ ಚರ್ಚಿಸುವ ಸಾಧ್ಯತೆಯಿದೆ.
IND v NZ: ಅರ್ಧಶತಕದ ಬಳಿಕ ಧ್ರುವ್ ಜುರೆಲ್ ಸೆಲ್ಯೂಟ್ ಮಾಡೋದ್ಯಾಕೆ? ಇಲ್ಲಿದೆ ಬಲವಾದ ಕಾರಣ!
2.ಹಾರ್ದಿಕ್ ಪಾಂಡ್ಯ
ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಇದೀಗ ಆಯ್ಕೆ ಸಮಿತಿಯ ಪ್ರಮುಖ ಚಿಂತೆಯಾಗಿದೆ. 2026ರ ಐಪಿಎಲ್ ಸಂದರ್ಭದಲ್ಲಿ ಬೆನ್ನಿನ ಬಿಗಿತದ ಸಮಸ್ಯೆ ಎದುರಿಸಿದ್ದ ಅವರು, ಬಳಿಕ ತೊಡೆಯ ಗಾಯಕ್ಕೂ ತುತ್ತಾಗಿದ್ದರು.
ಇದರಿಂದಾಗಿ ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧದ ವೈಟ್ಬಾಲ್ ಸರಣಿಗಳನ್ನು ತಪ್ಪಿಸಿಕೊಂಡಿದ್ದರು. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕಾಲಿನ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರ ಪುನರಾಗಮನ ಮತ್ತಷ್ಟು ವಿಳಂಬವಾಗಿತ್ತು.
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದೇ ಅವರ ಕೊನೆಯ ಏಕದಿನ ಪಂದ್ಯ. ಅಕ್ಟೋಬರ್ 2026ರ ವರದಿಯ ಪ್ರಕಾರ, ಅವರ ಕಂಬ್ಯಾಕ್ 2027ರ ಐಪಿಎಲ್ ಟೂರ್ನಿಯಲ್ಲಿ ನಡೆಯುವ ಸಾಧ್ಯತೆಯಿದೆ. ಆದರೂ ಶ್ರೀಲಂಕಾ ಸರಣಿಗೂ ಮುನ್ನ ಫಿಟ್ನೆಸ್ ಪರೀಕ್ಷೆ ನಡೆಸಿ ಆಯ್ಕೆ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ತಲೆಗೆ ಚೆಂಡೇಟು; ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಬದಲಿ ಆಟಗಾರ
3.ಹರ್ಷಿತ್ ರಾಣಾ
ಭಾರತದ ಯುವ ವೇಗಿ ಹರ್ಷಿತ್ ರಾಣಾ ಗಾಯದ ಸಮಸ್ಯೆಯಿಂದಾಗಿ 2026ರ ಫೆಬ್ರವರಿಯಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದರು. 2026ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಅವರು ಟೂರ್ನಿಯಿಂದ ಹೊರಬಿದ್ದಿದ್ದರು.
ಬಳಿಕ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪುನಶ್ಚೇತನ ಪ್ರಕ್ರಿಯೆ ಪೂರ್ಣಗೊಳಿಸಿದ ಅವರು, ಜೂನ್ 20ರಂದು ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೂ ಅವರ ಹೆಸರು ಚರ್ಚೆಯಲ್ಲಿದೆ.