ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND v NZ: ಅರ್ಧಶತಕದ ಬಳಿಕ ಧ್ರುವ್ ಜುರೆಲ್ ಸೆಲ್ಯೂಟ್ ಮಾಡೋದ್ಯಾಕೆ? ಇಲ್ಲಿದೆ ಬಲವಾದ ಕಾರಣ!

ಪ್ರತಿ ಮೈಲುಗಲ್ಲಿನ ಬಳಿಕ ಧ್ರುವ್ ಜುರೆಲ್ ಸೆಲ್ಯೂಟ್ ಮಾಡುವುದರ ಹಿಂದೆ ತಂದೆಯ ತ್ಯಾಗದ ಕಥೆಯಿದೆ. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಪರ ಹೋರಾಡಿದ್ದ ತಂದೆ ನೇಮ್ ಚಂದ್ ಅವರಿಗೆ ಗೌರವ ಸಲ್ಲಿಸಲು ಜುರೆಲ್ ಈ ವಿಶೇಷ ಸಂಭ್ರಮಾಚರಣೆ ಮಾಡುತ್ತಾರೆ. ಮಗನ ಕ್ರಿಕೆಟ್ ಕನಸಿಗೂ ತಂದೆ ಬೆಂಬಲವಾಗಿ ನಿಂತಿದ್ದರು.

ಅರ್ಧಶತಕದ ಬಳಿಕ ಧ್ರುವ್‌ ಜುರೆಲ್‌ ಸೆಲ್ಯೂಟ್‌ ಮಾಡುವುದೇಕೆ?

ಅರ್ಧಶತಕದ ಬಳಿಕ ಧ್ರುವ್‌ ಜುರೆಲ್‌ ಸೆಲ್ಯೂಟ್‌ ಹೊಡೆದಿದ್ದೇಕೆ? -

Profile
Ramesh Kote Nov 29, 2026 5:28 PM

ಕ್ರೈಸ್ಟ್‌ ಚರ್ಚ್‌: ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ (Dhruv Jurel) ಮೈದಾನದಲ್ಲಿ ವಿಶೇಷ ರೀತಿಯಲ್ಲಿ ಸಂಭ್ರಮಿಸುವುದು ಅಭಿಮಾನಿಗಳ ಗಮನ ಸೆಳೆಯುತ್ತದೆ. ಅರ್ಧಶತಕ, ಶತಕ ಸೇರಿದಂತೆ ಪ್ರಮುಖ ಮೈಲುಗಲ್ಲುಗಳನ್ನು ತಲುಪಿದಾಗ ಅವರು ಸೈನಿಕರಂತೆ ಸೆಲ್ಯೂಟ್ ಹೊಡೆಯುತ್ತಾರೆ. ಅದರಂತೆ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಬಳಿಕ ಸೆಲ್ಯೂಟ್‌ ಹೊಡೆದರು. ಆದರೆ ಈ ಸಂಭ್ರಮದ ಹಿಂದೊಂದು ಭಾವನಾತ್ಮಕ ಕಥೆಯಿದೆ. ಅದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಅವರ ತಂದೆ ನೇಮ್ ಚಂದ್ ಜುರೆಲ್ ಅವರ ಸಾಹಸಗಾಥೆ.

ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೂ ಧ್ರುವ್ ಜುರೆಲ್ 88 ರನ್‌ಗಳ ಅಮೋಘ ಇನಿಂಗ್ಸ್ ಆಡಿದರು. ಈ ವೇಳೆ ಅರ್ಧಶತಕ ಪೂರೈಸಿದ ಬಳಿಕ ಎಂದಿನಂತೆ ಸೆಲ್ಯೂಟ್ ಮಾಡುವ ಮೂಲಕ ತಂದೆಗೆ ಗೌರವ ಸಲ್ಲಿಸಿದರು. ಇದೀಗ ಅವರ ಸೆಲ್ಯೂಟ್ ಸಂಭ್ರಮದ ಹಿಂದಿನ ಕಾರಣ ಮತ್ತೆ ಸುದ್ದಿಯಾಗಿದೆ.

ʻಮೊದಲು ನಿಮ್ಮಿಂದ ಆರಂಭವಾಗಿದ್ದು, ಆದರೆ ನಾವು ಮುಗಿಸುತ್ತೇವೆʼ: ಭಾರತಕ್ಕೆ ಕೈಲ್‌ ಜೇಮಿಸನ್‌ ವಾರ್ನಿಂಗ್‌!

ಕಾರ್ಗಿಲ್ ಯುದ್ಧಕ್ಕೆ ತೆರಳುವ ಮುನ್ನ ಪತ್ನಿಗೆ ಪತ್ರ ಬರೆದಿದ್ದ ತಂದೆ!

ಧ್ರುವ್ ಜುರೆಲ್ ಅವರ ತಂದೆ ನೇಮ್ ಚಂದ್ ಭಾರತೀಯ ಸೇನೆಯ 8ನೇ ಜಾಟ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದರು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಅವರು, ಯುದ್ಧಕ್ಕೆ ತೆರಳುವ ಮುನ್ನ ಪತ್ನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದರು.

ಯುದ್ಧದಲ್ಲಿ ತಮಗೆ ಏನಾದರೂ ಸಂಭವಿಸಿದರೆ ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ತಮ್ಮ ಉಳಿತಾಯದ ಹಣ, ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಎಲ್ಲ ಹಣಕಾಸಿನ ವಿವರಗಳನ್ನು ಪತ್ರದಲ್ಲಿ ದಾಖಲಿಸಿದ್ದರು. ಒಂದು ವೇಳೆ ತಾವು ಮರಳಿ ಬರದಿದ್ದರೆ ಹಣವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನೂ ಪತ್ನಿಗೆ ತಿಳಿಸಿದ್ದರು.

ಈ ಕುರಿತು ಪಿಟಿಐ ಜೊತೆ ಮಾತನಾಡಿದ್ದ ನೇಮ್ ಚಂದ್, "ಯುದ್ಧ ಆರಂಭವಾದಾಗ ನನ್ನ ಪತ್ನಿಗೆ ಪತ್ರ ಬರೆದಿದ್ದೆ. ನನ್ನ ಉಳಿತಾಯದ ಹಣ ಮತ್ತು ಫಿಕ್ಸೆಡ್ ಡೆಪಾಸಿಟ್‌ಗಳ ವಿವರಗಳನ್ನು ತಿಳಿಸಿದ್ದೆ. ನನಗೆ ಏನಾದರೂ ಸಂಭವಿಸಿದರೆ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನೂ ಹೇಳಿದ್ದೆ. ಹಣವನ್ನು ಜಾಣ್ಮೆಯಿಂದ ಬಳಸುವಂತೆ ಸಲಹೆ ನೀಡಿದ್ದೆ" ಎಂದು ನೆನಪಿಸಿಕೊಂಡಿದ್ದಾರೆ.



2008ರಲ್ಲಿ ಸೇನೆಯಿಂದ ನಿವೃತ್ತಿ

ಕಾರ್ಗಿಲ್ ಯುದ್ಧದ ನೆನಪುಗಳನ್ನು ಹಂಚಿಕೊಂಡ ನೇಮ್ ಚಂದ್, ಯುದ್ಧ ಮುಗಿದ ಬಳಿಕ ತಮ್ಮ 8ನೇ ಜಾಟ್ ರೆಜಿಮೆಂಟ್ ಬೆಟ್ಟಗಳಿಂದ ಕೆಳಗಿಳಿದ ಮೊದಲ ರೆಜಿಮೆಂಟ್‌ಗಳಲ್ಲಿ ಒಂದಾಗಿತ್ತು ಎಂದು ಹೇಳಿದ್ದಾರೆ. ಜುಲೈ 26ರಂದು ವಿಜಯ್ ದಿವಸ್ ಘೋಷಣೆಯಾದರೆ, ಜುಲೈ 27ರಂದು ತಮ್ಮ ಪಡೆ ಬೆಟ್ಟಗಳಿಂದ ಕೆಳಗಿಳಿದಿತ್ತು ಎಂದು ನೆನಪಿಸಿಕೊಂಡಿದ್ದಾರೆ.

2008ರಲ್ಲಿ ಭಾರತೀಯ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದ ಅವರು, ಇದೀಗ ತಮ್ಮ ಮಗ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ಹೆಮ್ಮೆಯಿಂದ ನೋಡುತ್ತಿದ್ದಾರೆ.

ಮಗನ ಕ್ರಿಕೆಟ್ ಕನಸಿಗೆ ತಂದೆಯ ಬೆಂಬಲ

ಧ್ರುವ್ ಆರಂಭದಲ್ಲಿ ಓದಿನಲ್ಲೂ ಉತ್ತಮವಾಗಿದ್ದರು. ಆದರೆ ಕ್ರಿಕೆಟ್ ಮೇಲಿನ ಆಸಕ್ತಿ ಹೆಚ್ಚಾದಂತೆ ಓದಿಗಿಂತ ಆಟಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಆದರೂ ಮಗನ ಕ್ರಿಕೆಟ್ ಕನಸಿಗೆ ತಂದೆ ಸಂಪೂರ್ಣ ಬೆಂಬಲ ನೀಡಿದ್ದರು.

"ಧ್ರುವ್ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಳ್ಳಲು ನಾನು ಬಿಡಲಿಲ್ಲ. ಬ್ಯಾಟ್, ಶೂ ಅಥವಾ ಇತರ ಕ್ರಿಕೆಟ್ ಪರಿಕರಗಳ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದೆ," ಎಂದು ನೇಮ್ ಚಂದ್ ಹೇಳಿದ್ದಾರೆ.

ತಲೆಗೆ ಚೆಂಡೇಟು; ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಆಕಾಶ್ ದೀಪ್, ಪ್ರಸಿದ್ಧ್‌ ಕೃಷ್ಣ ಬದಲಿ ಆಟಗಾರ

ಇತ್ತೀಚೆಗೆ ಪತ್ನಿಯೊಂದಿಗೆ ಮೊದಲ ಬಾರಿ ವಿದೇಶ ಪ್ರವಾಸ ಕೈಗೊಂಡಿರುವ ನೇಮ್ ಚಂದ್, ಮಗನ ಆಟವನ್ನು ಕಣ್ತುಂಬಿಕೊಳ್ಳಲು ನ್ಯೂಜಿಲೆಂಡ್‌ಗೆ ತೆರಳಿದ್ದಾರೆ. ಧ್ರುವ್ ಜುರೆಲ್ ಅವರೇ ತಂದೆಯನ್ನು ಪಂದ್ಯ ವೀಕ್ಷಿಸಲು ಆಹ್ವಾನಿಸಿದ್ದರು. ಹೀಗೆ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ ತಂದೆಯ ತ್ಯಾಗ ಮತ್ತು ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಧ್ರುವ್ ಜುರೆಲ್ ಪ್ರತಿ ಮೈಲುಗಲ್ಲಿನ ಬಳಿಕ ಸೆಲ್ಯೂಟ್ ಮಾಡುತ್ತಾರೆ. ಮೈದಾನದಲ್ಲಿ ಅವರು ಮಾಡುವ ಆ ಒಂದು ಸೆಲ್ಯೂಟ್ ಕೇವಲ ಸಂಭ್ರಮವಲ್ಲ, ದೇಶಕ್ಕಾಗಿ ಹೋರಾಡಿದ ತಂದೆಗೆ ಅರ್ಪಿಸುವ ಗೌರವದ ಸಂಕೇತವಾಗಿದೆ.