ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ʻಬೆಂಗಳೂರಿನಲ್ಲಿ ಮಿಂಚಲಿದ್ದಾರೆʼ-ಸಂಜು ಸ್ಯಾಮ್ಸನ್‌ ಬಗ್ಗೆ ಅಭಿಷೇಕ್‌ ನಾಯರ್‌ ದೊಡ್ಡ ಭವಿಷ್ಯ!

ಭಾರತದ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಇತ್ತೀಚಿನ ಫಾರ್ಮ್ ಕುರಿತು ಮಾತನಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಸಂಜು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ ಪರ ಅಭಿಷೇಕ್‌ ನಾಯರ್‌ ಬ್ಯಾಟಿಂಗ್‌.

ಬೆಂಗಳೂರು: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯ (IND vs WI) ಐದನೇ ಹಾಗೂ ಅಂತಿಮ ಪಂದ್ಯ ಅಕ್ಟೋಬರ್ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸದ್ಯ ಸರಣಿ 2-2 ಅಂತರದಲ್ಲಿ ಸಮಬಲಗೊಂಡಿದ್ದು, ಅಂತಿಮ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಐದನೇ ಪಂದ್ಯದ ನಿಮಿತ್ತ ಮಾತನಾಡಿದ ಅಭಿಷೇಕ್‌ ನಾಯರ್‌ (Abhishek Nayar), ಆರಂಭಿಕ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson) ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವೆಸ್ಟ್ ಇಂಡೀಸ್ 247 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 223 ರನ್‌ಗಳಿಗೆ ಸೀಮಿತವಾಗಿ ಸೋಲನುಭವಿಸಿತು. ಭಾರತದ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಕೇವಲ 23 ಎಸೆತಗಳಲ್ಲಿ 56 ರನ್ ಗಳಿಸಿ ಗಮನ ಸೆಳೆದಿದ್ದರು.

ಸಂಜು ಅವರ ಈ ಪ್ರದರ್ಶನದ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್, ಬೆಂಗಳೂರಿನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲೂ ಸಂಜು ಉತ್ತಮವಾಗಿ ಆಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IND vs WI: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿನಲ್ಲಿ ಕಣಕ್ಕೆ ಇಳಿಯಲಿರುವ ಭುವನೇಶ್ವರ್‌ ಕುಮಾರ್‌!

“ಪಂದ್ಯದ ಆರಂಭದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಟ್ರೈಕ್ ನೀಡುವ ತಂತ್ರಗಾರಿಕೆಯ ನಿರ್ಧಾರ ಉತ್ತಮವಾಗಿತ್ತು. ನಂತರ ಅವರು ಬ್ಯಾಟ್ ಮಾಡಿದ ರೀತಿ ಗಮನಿಸಿದಾಗ, ದೊಡ್ಡ ಇನಿಂಗ್ಸ್ ಕಟ್ಟುವತ್ತ ಸಾಗುತ್ತಿದ್ದಾರೆ ಎಂದೆನಿಸಿತು. ಅವರು ಉತ್ತಮ ನಿಯಂತ್ರಣದೊಂದಿಗೆ ಆಡುತ್ತಿದ್ದರು. ಅವರ ಬ್ಯಾಟಿಂಗ್‌ನ ಅಡಿಪಾಯ ಚೆನ್ನಾಗಿತ್ತು, ತಲೆ ಸ್ಥಿರವಾಗಿತ್ತು. ಅಪಾಯಕಾರಿ ಆಟಗಾರನಾಗಿರುವ ಸಂಜು ತಮ್ಮ ಲಯಕ್ಕೆ ಮರಳಿದಂತೆ ಕಾಣುತ್ತಿದ್ದರು,” ಎಂದು ಅಭಿಷೇಕ್ ನಾಯರ್ ಜಿಯೋಸ್ಟಾರ್‌ಗೆ ತಿಳಿಸಿದ್ದಾರೆ.

“ದುರದೃಷ್ಟವಶಾತ್ ಅವರು ಔಟಾದರು. ಆದರೆ, ಈ ಪ್ರದರ್ಶನದಿಂದ ಸಿಕ್ಕ ಆತ್ಮವಿಶ್ವಾಸವನ್ನು ಅವರು ಬೆಂಗಳೂರಿಗೆ ಕೊಂಡೊಯ್ಯಲಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಟ್‌ ಮಾಡುವಾಗ ಭಾರತ ತಂಡ ಉತ್ತಮ ಸ್ಥಿತಿಯಲ್ಲಿರಲಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ತಂಡದ ಹಲವು ಬ್ಯಾಟರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಎಲ್ಲರೂ ಒಟ್ಟಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದಷ್ಟೇ ಬಾಕಿ,” ಎಂದು ನಾಯರ್ ಅಭಿಪ್ರಾಯಪಟ್ಟಿದ್ದಾರೆ.

ನಾಳೆ ಚಿನ್ನಸ್ವಾಮಿಯಲ್ಲಿ ಭಾರತ-ವೆಸ್ಟ್‌ ಇಂಡೀಸ್‌ ಟಿ20 ಸರಣಿ ಕ್ಲೈಮ್ಯಾಕ್ಸ್‌

ಬೆಂಗಳೂರಿನಲ್ಲಿ ಸರಣಿ ಗೆಲ್ಲುವ ಗುರಿ

ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದಿವೆ. ಹೀಗಾಗಿ ಐದನೇ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ವೆಸ್ಟ್ ಇಂಡೀಸ್ ತನ್ನ ಹಿಂದಿನ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದರೆ, ಭಾರತ ತವರಿನಲ್ಲಿ ಸರಣಿ ಗೆಲ್ಲುವ ಗುರಿ ಹೊಂದಿದೆ.

ಸಂಜು ಸ್ಯಾಮ್ಸನ್ ಸೇರಿದಂತೆ ಭಾರತದ ಬ್ಯಾಟರ್‌ಗಳು ತಮ್ಮ ಉತ್ತಮ ಫಾರ್ಮ್‌ ಅನ್ನು ನಿರ್ಣಾಯಕ ಪಂದ್ಯದಲ್ಲೂ ಮುಂದುವರಿಸಿದರೆ, ತಂಡಕ್ಕೆ ಸರಣಿ ಗೆಲ್ಲುವ ಅವಕಾಶ ಹೆಚ್ಚಲಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ಕೂಡ ತನ್ನ ಬ್ಯಾಟಿಂಗ್ ಬಲದೊಂದಿಗೆ ಭಾರತಕ್ಕೆ ಸವಾಲೊಡ್ಡಲು ಸಜ್ಜಾಗಿದೆ. ಅಕ್ಟೋಬರ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಸರಣಿ ಗೆಲ್ಲಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.