ನವದೆಹಲಿ: ಅಭಿಷೇಕ್ ಶರ್ಮಾ (Abhishek Sharma) ದಾಖಲೆಯ ಶತಕದ ಬಲದಿಂದ ಭಾರತ ತಂಡ, ಮೂರನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ (IND vs AFG) ಅಫ್ಘಾನಿಸ್ತಾನ ವಿರುದ್ಧ 127 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಇನ್ನೂ ತನ್ನ ಆತಿಥ್ಯದ ಸರಣಿಯಲ್ಲಿ ಕನಿಷ್ಠ ಒಂದೇ ಒಂದು ಪಂದ್ಯವನ್ನು ಗೆಲ್ಲದ ಅಫ್ಘನ್ ತಂಡ, ತನ್ನ ಟಿ20ಐ ಸರಣಿಯ ಅಭಿಯಾನವನ್ನು ನಿರಾಶೆಯೊಂದಿಗೆ ಮುಗಿಸಿತು.
ಗುರುವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 222 ರನ್‌ಗಳ ಕಠಿಣ ಗುರಿಯನ್ನು ಹಿಂಬಾಲಿಸಿದ ಅಫ್ಘಾನಿಸ್ತಾನ ತಂಡ, ತನ್ನ ಬ್ಯಾಟಿಂಗ್ ವೈಫಲ್ಯವನ್ನು ಮೂರನೇ ಪಂದ್ಯದಲ್ಲಿಯೂ ವಿಸ್ತರಿಸಿರು. ನಿತೀಶ್ ರೆಡ್ಡಿ ಹಾಗೂ ರವಿ ಬಿಷ್ಣೋಯ್ ಅವರ ಬೌಲಿಂಗ್ ದಾಳಿಗೆ ನಲುಗಿದ ಇಬ್ರಾಹಿಂ ಝದ್ರಾನ್ ನಾಯಕತ್ವದ ಅಫ್ಘಾನಿಸ್ತಾನ ತಂಡ, 14.1 ಓವರ್‌ಗಳಿಗೆ ಕೇವಲ 94 ರನ್‌ಗಳಿಗೆ ಆಲ್‌ಔಟ್ ಆಯಿತು. 25 ರನ್ ಗಳಿಸಿ ನಾಯಕ ಝದ್ರಾನ್ ಆಫ್ಘನ್ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇನ್ನುಳಿದ ಯಾವುದೇ ಬ್ಯಾಟರ್ ವೈಯಕ್ತಿಕ 20 ರನ್ ಗಡಿಯನ್ನು ದಾಟಲು ಭಾರತೀಯ ಬೌಲರ್‌ಗಳು ಅವಕಾಶ ನೀಡಲಿಲ್ಲ.
30 ಎಸೆತಗಳಲ್ಲಿ ಶತಕ ಸಿಡಿಸಿ ರೋಹಿತ್ ಸೇರಿದಂತೆ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ ಅಭಿಷೇಕ್ ಶರ್ಮಾ!
ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ಮಿಂಚಿದ ನಿತೀಶ್ ರೆಡ್ಡಿ 4 ಓವರ್‌ಗಳಿಗೆ 25 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ಸ್ಪಿನ್ ಮೋಡಿ ಮಾಡಿದ ರವಿ ಬಿಷ್ಣೋಯ್ 3.1 ಓವರ್‌ಗಳಿಗೆ 26 ರನ್ ನೀಡಿ 3 ವಿಕೆಟ್‌ಹಳನ್ನು ತೆಗೆದರು. ಅಕ್ಷರ್ ಪಟೇಲ್ ಎರಡು ವಿಕೆಟ್‌ಗಳನ್ನು ತನ್ನದಾಗಿಸಿಕೊಂಡರು.
221 ರನ್ ಕಲೆ ಹಾಕಿದ ಭಾರತ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ನಿರೀಕ್ಷೆಯಂತೆ ಭರ್ಜರಿ ಪ್ರದರ್ಶನವನ್ನು ತೋರಿತ್ತು. ವಿಶೇಷವಾಗಿ ಅಭಿಷೇಕ್ ಶರ್ಮಾ ಅವರ ದಾಖಲೆಯ ಶತಕ ಹಾಗೂ ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ತಮ್ಮ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ 222 ರನ್‌ಗಳ ದೊಡ್ಡ ಗುರಿಯನ್ನು ನೀಡಿತ್ತು.
ಅಭಿ-ಸಂಜು ದೊಡ್ಡ ಜೊತೆಯಾಟ
ಭಾರತದ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್, ಪವರ್‌ಪ್ಲೇನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಮುರಿಯದ ಮೊದಲನೇ ವಿಕೆಟ್‌ಗೆ 9.5 ಓವರ್‌ಗಳಿಗೆ 142 ರನ್‌ಗಳನ್ನು ಕಲೆ ಹಾಕಿದರು. ಅದರಲ್ಲಿಯೂ ವಿಶೇಷವಾಗಿ ಅಭಿಷೇಕ್ ಶರ್ಮಾಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಆರಂಭಿಕ ಆರು ಓವರ್‌ಗಳಿಗೆ ಟೀಮ್ ಇಂಡಿಯಾ 100 ರನ್‌ಗಳನ್ನು ದಾಖಲಿಸಿತ್ತು.
ದಾಖಲೆಯ ಶತಕ ಬಾರಿಸಿದ ಅಭಿಷೇಕ್ ಶರ್ಮಾ
ಈ ಸರಣಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ, ಮೂರನೇ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನವನ್ನು ತೋರಿದರು. ಮೊದಲನೇ ಓವರ್‌ನಿಂದಲೇ ಆಫ್ಘನ್ ಬೌಲರ್‌ಗಳ ಮೇಲೆ ದಾಳಿ ನಡೆಸಿದ ಅಭಿಷೇಕ್ ಶರ್ಮಾ, ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಕಳುಹಿಸಿದರು. ಅವರು ಆಡಿದ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಟಿ20ಐ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಂತಿಮವಾಗಿ ಇವರು ಆಡಿದ 34 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 108 ರನ್‌ಗಳನ್ನು ಚಚ್ಚಿದರು. ಇವರು 317.65ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದು ವಿಶೇಷ.
ಸಂಜು ಸ್ಯಾಮ್ಸನ್ ಅರ್ಧಶತಕ
ಒಂದು ತುದಿಯಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಸಂಜು ಸ್ಯಾಮ್ಸನ್ ಪರಿಪಕ್ವತೆಯ ಇನಿಂಗ್ಸ್ ಆಡಿದರು. ಅವರು ಕೆಟ್ಟ ಎಸೆತಗಳಲ್ಲಿ ಸಿಕ್ಸರ್, ಬೌಂಡರಿ ಹಾಗೂ ಒಳ್ಳೆಯ ಎಸೆತಗಳಲ್ಲಿ ಸ್ಟ್ರೈಕ್ ರೊಟೇಟ್ ಮಾಡುವ ಮೂಲಕ ಈ ಸರಣಿಯಲ್ಲಿ ಸತತ ಎರಡನೇ ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 35 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 50 ರನ್ ಗಳಿಸಿದರು. ಬಳಿಕ ಅಝಮತ್‌ವುಲ್ಲಾ ಒಮರ್ಜಾಯ್ ಅವರಿಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಅಯ್ಯರ್ 29 ರನ್‌ಗಳ ಕೊಡುಗೆಯನ್ನು ನೀಡಿದರು.