ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಜು ಸ್ಯಾಮ್ಸನ್‌ ಔಟ್‌! ಏಷ್ಯಾ ಕಪ್‌ಗೆ ಭಾರತದ ಪ್ಲೇಯಿಂಗ್‌ XI ಕಟ್ಟಿದ ಅಜಿಂಕ್ಯ ರಹಾನೆ!

ಮುಂಬರುವ ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಆರಿಸಿದ ಹಿರಿಯ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ, ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಅಭಿಷೇಕ್‌ ಶರ್ಮಾ ಜೊತೆಗೆ ಶುಭಮನ್‌ ಗಿಲ್‌ ಅವರನ್ನು ಇನಿಂಗ್ಸ್‌ ಆರಂಭಿಸಲು ಆಯ್ಕೆ ಮಾಡಿದ್ದಾರೆ.

ಏಷ್ಯಾ ಕಪ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಅಜಿಂಕ್ಯ ರಹಾನೆ.

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಹಿರಿಯ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ (Ajinkya Rahane) ಆಯ್ಕೆ ಮಾಡಿದ್ದಾರೆ. ಆದರೆ, ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson) ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಅಭಿಷೇಕ್‌ ಶರ್ಮಾ ಅವರ ಜೊತೆಗೆ ಶುಭಮನ್‌ ಗಿಲ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, ಎ ಗುಂಪಿನಲ್ಲಿ ಸ್ಥಾನವನ್ನು ಪಡೆದಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಒಮಾನ್‌ ಹಾಗೂ ಆತಿಥೇಯ ಯುಎಇ ವಿರುದ್ದ ಕಾದಾಟ ನಡೆಸಲಿದೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ ಅವರು, ಉಪ ನಾಯಕ ಶುಭಮನ್‌ ಗಿಲ್‌ ಅವರನ್ನು ಬೆಂಬಲಿಸಿದ್ದಾರೆ. ಪಂಜಾಬ್‌ ತಂಡದ ಸಹ ಆಟಗಾರ ಅಭಿಷೇಕ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಲು ಅವಕಾಶವನ್ನು ನೀಡಿದ್ದಾರೆ. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಟ್ಟಿದ್ದಾರೆ.

Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರರು

"ಶುಭಮನ್‌ ಗಿಲ್‌ ಭಾರತ ತಂಡಕ್ಕೆ ಮರಳಿದ್ದಾರೆ ಹಾಗೂ ಅವರು ಅಭಿಷೇಕ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಲಿದ್ದಾರೆಂದು ನನಗೆ ಖಚಿತತೆ ಇದೆ. ವೈಯಕ್ತಿಕವಾಗಿ ಸಂಜು ಸ್ಯಾಮ್ಸನ್‌ ತಂಡದಲ್ಲಿ ಇರಬೇಕೆಂದು ಬಯಸುತ್ತೇನೆ, ಏಕೆಂದರೆ ಅವರು ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅವರು ತುಂಬಾ ವಿಶ್ವಾಸದ ಹುಡುಗ ಹಾಗೂ ಅತ್ಯುತ್ತಮ ತಂಡದ ಆಟಗಾರ. ಇದು ತುಂಬಾ ಮುಖ್ಯವಾದ ಸಂಗತಿ ಎಂದು ಭಾವಿಸುತ್ತೇನೆ," ಎಂದು ರಹಾನೆ ತಿಳಿಸಿದ್ದಾರೆ.

"ಸಂಜು ತಂಡದ ಅದ್ಭುತ ಆಟಗಾರ, ಆದರೆ ಇಲ್ಲಿ ಸಮಸ್ಯೆ ಇರುವುದು ಟೀಮ್‌ ಮ್ಯಾನೇಜ್‌ಮೆಂಟ್‌ ಕಡೆಯಿಂದ. ನನ್ನ ಅಭಿಪ್ರಾಯದ ಪ್ರಕಾರ ಸಂಜು ಬೆಂಚ್‌ ಕಾಯಲಿದ್ದಾರೆ, ಆದರೆ ನಾನು ಅವರನ್ನು ಪ್ಲೇಯಿಂಗ್‌ xiನಲ್ಲಿ ಆಡಿಸಲು ಬಯಸುತ್ತೇನೆ. ಆದಾಗ್ಯೂ ಶುಭಮನ್‌ ಗಿಲ್‌ ಹಾಗೂ ಅಭಷೇಕ್‌ ಶರ್ಮಾ ಅವರು ತಂಡದ ಪರ ಇನಿಂಗ್ಸ್‌ ಆರಂಭಿಸಲಿದ್ದಾರೆ," ಎಂದು ಹೇಳಿದ್ದಾರೆ.

Asia Cup 2025: ಸಂಜು ಸ್ಯಾಮ್ಸನ್‌ಗೆ ಎದುರಾಗಿರುವ ಅಪಾಯವನ್ನು ತಿಳಿಸಿದ ಮೊಹಮ್ಮದ್‌ ಕೈಫ್‌!

ಇನ್ನು ಮೂರನೇ ಕ್ರಮಾಂಕಕ್ಕೆ ತಿಲಕ್‌ ವರ್ಮಾ ಅವರನ್ನು ಅಜಿಂಕ್ಯ ರಹಾನೆ ಆರಿಸಿದ್ದಾರೆ. ತಿಲಕ್‌ 24 ಇನಿಂಗ್ಸ್‌ಗಳಿಂದ ಎರಡು ಶತಕಗಳು ಹಾಗೂ ಮೂರು ಅರ್ಧಶತಕಗಳ ಮೂಲಕ 749 ರನ್‌ಗಳನ್ನು ಗಳಿಸಿದ್ದಾರೆ. ನಾಯಕ ಸೂರ್ಯಕುಮಾರ್‌ ಯಾದವ್‌ ನಾಲ್ಕನೇ ಕ್ರಮಾಂಕದಲ್ಲಿ ಹಾಗೂ ಹಾರ್ದಿಕ್‌ ಪಾಂಡ್ಯಗೆ ಐದನೇ ಕ್ರಮಾಂಕದಲ್ಲಿ ಆಡಿಸಲು ರಹಾನೆ ಚಾನ್ಸ್‌ ನೀಡಿದ್ದಾರೆ.

ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ಜಿತೇಶ್‌ ಶರ್ಮಾ ಹಾಗೂ ಅಕ್ಷರ್‌ ಪಟೇಲ್‌ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಲು ರಹಾನೆ ನಿರ್ಧರಿಸಿದ್ದಾರೆ. "ಏಷ್ಯಾ ಕಪ್‌ ಟೂರ್ನಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಅರ್ಷದೀಪ್‌ ಸಿಂಗ್‌ ಅವರ ಬೌಲಿಂಗ್‌ ಪ್ರದರ್ಶನವನ್ನು ನೋಡಲು ಎದುರು ನೋಡುತ್ತಿದ್ದೇನೆ. ಬುಮ್ರಾ ಎಷ್ಟು ಅಪಾಯಕಾರಿ ಎಂದು ನಮ್ಮೆಲ್ಲರಿಗೂ ಗೊತ್ತಿದೆ. ಅರ್ಷದೀಪ್‌ ಸಿಂಗ್‌ ಅತ್ಯಂತ ವಿಶ್ವಾಸದ ಆಟಗಾರ ಹಾಗೂ ಅವರು ಎರಡೂ ಹಾದಿಯಲ್ಲಿ ಚೆಂಡನ್ನು ಸ್ವಿಂಗ್‌ ಮಾಡಬಲ್ಲರು. ಅವರು ನೇರವಾಗಿ ಹಾಗೂ ವೈಡ್‌ ಯಾರ್ಕರ್‌ಗಳನ್ನು ಹಾಕಬಲ್ಲರು," ಎಂದು ಹೇಳಿದ್ದಾರೆ.

Asia Cup 2025: ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ಸುನೀಲ್‌ ಗವಾಸ್ಕರ್‌!

"11ನೇ ಆಟಗಾರನನ್ನು ಕಂಡೀಷನ್ಸ್‌ ನೋಡಿಕೊಂಡು ಆಯ್ಕೆ ಮಾಡಲಾಗುವುದು. ಏಕೆಂದರೆ ನಾವು ಆಡುತ್ತಿರವುದು ದುಬೈನಲ್ಲಿ. ಪಿಚ್‌ ಕಂಡೀಷನ್ಸ್‌ ನೋಡಿಕೊಂಡು ವರುಣ್‌ ಚಕ್ರವರ್ತಿ ಅಥವಾ ಹರ್ಷಿತ್‌ ರಾಣಾ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತೇನೆ," ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.

ಏಷ್ಯಾ ಕಪ್‌ ಟೂರ್ನಿಗೆ ಅಜಿಂಕ್ಯ ರಹಾನೆ ಆರಿಸಿದ ಭಾರತದ ಪ್ಲೇಯಿಂಗ್‌ XI

ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್/ಹರ್ಷಿತ್ ರಾಣಾ.