ವೆಲ್ಲಿಂಗ್ಟನ್: ಇಲ್ಲಿನ ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಮೊದಲ ಇನಿಂಗ್ಸ್ನಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆ ಮೂಲಕ 352 ರನ್ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನಿಂಗ್ಸ್ನಲ್ಲಿ ತಿರುಗೇಟು ನೀಡಿದ ನ್ಯೂಜಿಲೆಂಡ್ ತಂಡ 120 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 239 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇದೀಗ ಸರಣಿಯ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 27ರಿಂದ ಕ್ರೈಸ್ಟ್ಚರ್ಚ್ನಲ್ಲಿ ಆರಂಭವಾಗಲಿದೆ.
ಇದರ ನಡುವೆ ಭಾರತದ ಮಾಜಿ ಬ್ಯಾಟರ್ ಅಜಿಂಕ್ಯ ರಹಾನೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗದ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ಫಲಿತಾಂಶ ಏನೇ ಆಗಿದ್ದರೂ ಭಾರತದ ವೇಗದ ಬೌಲರ್ಗಳ ಸಂಯೋಜನೆ ಸರಿಯಾಗಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋನಿ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ರಹಾನೆ, ಟೆಸ್ಟ್ ಪಂದ್ಯ ಗೆಲ್ಲಲು ಮೊದಲ ಇನಿಂಗ್ಸ್ನಲ್ಲಿ ದೊಡ್ಡ ಮೊತ್ತ ಕಲೆಹಾಕುವುದಷ್ಟೇ ಮುಖ್ಯವಲ್ಲ. ನಾಲ್ಕನೇ ಮತ್ತು ಐದನೇ ದಿನಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿರುವ ಬೌಲರ್ಗಳು ತಂಡದಲ್ಲಿರಬೇಕು ಎಂದು ಹೇಳಿದ್ದಾರೆ.
IND vs NZ 2nd Test: ಕ್ರೈಸ್ಟ್ಚರ್ಚ್ ಪಂದ್ಯಕ್ಕೆ ರವೀಂದ್ರ ಜಡೇಜಾ ಕಮ್ಬ್ಯಾಕ್? ಅನ್ಶುಲ್ ಕಾಂಬೋಜ್ಗೆ ಕೊಕ್?
"ಭಾರತ ಈ ಟೆಸ್ಟ್ ಪಂದ್ಯವನ್ನು ಗೆದ್ದಿದ್ದರೂ ಕೂಡ ತಂಡದ ಆಟಗಾರರ ಸಂಯೋಜನೆ ಸರಿಯಾಗಿಲ್ಲ ಎಂದು ನಾನು ಹೇಳುತ್ತಿದ್ದೆ. ಟೆಸ್ಟ್ ಪಂದ್ಯವನ್ನು ಮೊದಲ ಇನಿಂಗ್ಸ್ನಲ್ಲೇ ಗೆಲ್ಲಲು ಸಾಧ್ಯವಿಲ್ಲ. ನಾಲ್ಕನೇ ಮತ್ತು ಐದನೇ ದಿನಗಳಲ್ಲಿ ಯಾವ ಬೌಲರ್ಗಳು ನಿಮಗೆ ವಿಕೆಟ್ ತಂದುಕೊಡಬಲ್ಲರು ಎಂಬುದನ್ನು ಗಮನಿಸಬೇಕು."
"ವಿದೇಶಿ ಪಿಚ್ಗಳಲ್ಲಿ ಪರಿಸ್ಥಿತಿ ಬೌಲರ್ಗಳಿಗೆ ಅನುಕೂಲಕರವಾಗಿರುವಾಗ ಎರಡೂ ತಂಡಗಳು ಮೊದಲ ಇನಿಂಗ್ಸ್ನಲ್ಲಿ 25-30 ರನ್ ಕಡಿಮೆ ಗಳಿಸಿದರೂ ಸಮಸ್ಯೆಯಿಲ್ಲ. ಆದರೆ ಎರಡನೇ ಇನಿಂಗ್ಸ್ನಲ್ಲಿ ಪಿಚ್ ಬ್ಯಾಟಿಂಗ್ಗೆ ಉತ್ತಮವಾದಾಗ ಯಾವ ಬೌಲರ್ ಹೆಚ್ಚುವರಿ ಪ್ರಯತ್ನ ಮಾಡಿ ವಿಕೆಟ್ ಪಡೆಯಬಲ್ಲರು ಎಂಬುದು ಮುಖ್ಯ," ಎಂದು ರಹಾನೆ ಹೇಳಿದ್ದಾರೆ.
ಭಾರತದ ಬೌಲಿಂಗ್ ಸಂಯೋಜನೆ ಬಗ್ಗೆ ರಹಾನೆ ಪ್ರಶ್ನಿಸಿದ್ದೇಕೆ?
ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬದಲಿಗೆ ಆಕಾಶ್ ದೀಪ್ ಮತ್ತು ಅನ್ಶುಲ್ ಕಾಂಬೋಜ್ ಅವರಿಗೆ ಅವಕಾಶ ನೀಡಿದ್ದೇ ರಹಾನೆ ಅವರ ಪ್ರಮುಖ ಅಸಮಾಧಾನಕ್ಕೆ ಕಾರಣವಾಗಿದೆ. ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಮತ್ತೊಬ್ಬ ಅನುಭವಿ ವೇಗದ ಬೌಲರ್ ತಂಡದಲ್ಲಿರಬೇಕಿತ್ತು ಎಂಬುದು ರಹಾನೆ ಅಭಿಪ್ರಾಯ. ಅದರಲ್ಲೂ ಟೆಸ್ಟ್ ಪಂದ್ಯದ ಕೊನೆಯ ಎರಡು ದಿನಗಳಲ್ಲಿ ಪಿಚ್ ಬ್ಯಾಟರ್ಗಳಿಗೆ ಅನುಕೂಲಕರವಾಗುವ ಸಂದರ್ಭದಲ್ಲಿ ಅನುಭವಿ ಬೌಲರ್ಗಳ ಅಗತ್ಯ ಹೆಚ್ಚಿರುತ್ತದೆ ಎಂದು ಅವರು ಹೇಳಿದ್ದಾರೆ.
ನಾಲ್ಕನೇ ಮತ್ತು ಐದನೇ ದಿನಗಳಲ್ಲಿ ಪಿಚ್ನ ಸ್ವರೂಪ ಬದಲಾಗುವಾಗ ವಿಕೆಟ್ ಪಡೆಯುವ ಸಾಮರ್ಥ್ಯವೇ ಟೆಸ್ಟ್ ಪಂದ್ಯಗಳ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ್ದರೂ, ಅದನ್ನು ಗೆಲುವಾಗಿ ಪರಿವರ್ತಿಸಲು ಭಾರತದ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಅನುಭವ ಇರಲಿಲ್ಲ ಎಂಬುದು ರಹಾನೆ ಅವರ ವಾದವಾಗಿದೆ.
IND vs NZ: ಕುಲ್ದೀಪ್, ಮಾನವ್ ಎಲ್ಲಿ? ಭಾರತದ ಪ್ಲೇಯಿಂಗ್ XI ಅನ್ನು ಪ್ರಶ್ನಿಸಿದ ಸೌರವ್ ಗಂಗೂಲಿ!
ಮೊಹಮ್ಮದ್ ಸಿರಾಜ್ ಕೈಬಿಟ್ಟಿದ್ದಕ್ಕೆ ರಹಾನೆ ಹೇಳಿದ್ದೇನು?
ಮೊದಲ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟ ನಿರ್ಧಾರದ ಬಗ್ಗೆಯೂ ಅಜಿಂಕ್ಯ ರಹಾನೆ ಮಾತನಾಡಿದ್ದಾರೆ. ಆಕಾಶ್ ದೀಪ್ ಮತ್ತು ಅನ್ಶುಲ್ ಕಾಂಬೋಜ್ ಇಬ್ಬರೂ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ಆದರೆ ಬುಮ್ರಾ ಜೊತೆ ಮತ್ತೊಬ್ಬ ಅನುಭವಿ ವೇಗದ ಬೌಲರ್ ಇರಬೇಕಿತ್ತು ಎಂದು ಹೇಳಿದ್ದಾರೆ.
"ಇಲ್ಲಿ ಅವಕಾಶ ಪಡೆದ ಇಬ್ಬರು ವೇಗದ ಬೌಲರ್ಗಳು ಉತ್ತಮವಾಗಿ ಬೌಲ್ ಮಾಡಿದ್ದಾರೆ. ನಾವು ಯಾರ ವಿರುದ್ಧವೂ ಇಲ್ಲ. ಆದರೆ ಜಸ್ಪ್ರೀತ್ ಬುಮ್ರಾ ಜೊತೆ ಮತ್ತೊಬ್ಬ ಅನುಭವಿ ಬೌಲರ್ ಅಗತ್ಯವಿತ್ತು. ಮೊದಲ ದಿನವೇ ನಾವು ಮೊಹಮ್ಮದ್ ಸಿರಾಜ್ ಬಗ್ಗೆ ಮಾತನಾಡಿದ್ದೆವು. ಅವರ ಅನುಭವ ತಂಡಕ್ಕೆ ಖಂಡಿತವಾಗಿಯೂ ನೆರವಾಗುತ್ತಿತ್ತು," ಎಂದು ರಹಾನೆ ತಿಳಿಸಿದ್ದಾರೆ.