ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ 2nd Test: ಕ್ರೈಸ್ಟ್‌ಚರ್ಚ್ ಪಂದ್ಯಕ್ಕೆ ರವೀಂದ್ರ ಜಡೇಜಾ ಕಮ್‌ಬ್ಯಾಕ್? ಅನ್ಶುಲ್ ಕಾಂಬೋಜ್‌ಗೆ ಕೊಕ್?

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಮೊದಲ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಅನ್ಶುಲ್ ಕಾಂಬೋಜ್ ಬದಲಿಗೆ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

IND vs NZ 2ನೇ ಟೆಸ್ಟ್‌ಗೆ ರವೀಂದ್ರ ಜಡೇಜಾ ಕಮ್‌ಬ್ಯಾಕ್‌?

ಎರಡನೇ ಟೆಸ್ಟ್‌ಗೆ ರವೀಂದ್ರ ಜಡೇಜಾಗೆ ಚಾನ್ಸ್‌? -

Profile
Ramesh Kote Nov 25, 2026 12:36 AM

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ (IND vs NZ) ಡ್ರಾದಲ್ಲಿ ಅಂತ್ಯಗೊಂಡ ಬೆನ್ನಲ್ಲೇ ಭಾರತ ತಂಡದ ಆಯ್ಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ನವೆಂಬರ್ 27ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಮೊದಲ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ ವೇಗಿ ಅನ್ಶುಲ್ ಕಾಂಬೋಜ್ ಬದಲಿಗೆ ಜಡೇಜಾ ಅವರನ್ನು ಕಣಕ್ಕಿಳಿಸುವ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಜಸ್‌ಪ್ರೀತ್ ಬುಮ್ರಾ, ಪ್ರಸಿಧ್‌ ಕೃಷ್ಣ, ಆಕಾಶ್ ದೀಪ್ ಮತ್ತು ಅನ್ಶುಲ್ ಕಾಂಬೋಜ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಆದರೆ, ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು ಮೂರು ವಿಕೆಟ್ ಪಡೆದಿದ್ದ ಕಾಂಬೋಜ್ ಬೌಲಿಂಗ್‌ನಲ್ಲಿ ಗಮನಾರ್ಹ ಪರಿಣಾಮ ಬೀರಲು ಸಾಧ್ಯವಾಗಿರಲಿಲ್ಲ. ವೇಗ, ಸ್ವಿಂಗ್ ಹಾಗೂ ಸೀಮ್ ಚಲನೆಯ ಮೂಲಕ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಹೆಚ್ಚಿನ ಒತ್ತಡ ಹೇರಲು ಅವರು ವಿಫಲರಾಗಿದ್ದರು. ಬ್ಯಾಟಿಂಗ್‌ನಲ್ಲಿ 41 ಎಸೆತಗಳಲ್ಲಿ 38 ರನ್ ಗಳಿಸಿದ್ದರೂ, ಬೌಲಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

IND vs NZ: ʻಗೆಲ್ಲಬೇಕೆಂಬ ಮನಸ್ಥಿತಿ ಯಾರಲ್ಲೂ ಕಾಣಲಿಲ್ಲʼ-ಭಾರತ ತಂಡವನ್ನು ಟೀಕಿಸಿದ ಆರ್‌ ಅಶ್ವಿನ್‌!

ಜಡೇಜಾ ಅಥವಾ ಗುರ್ನೂರ್ ಬ್ರಾರ್‌ಗೆ ಅವಕಾಶ?

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಪಿಚ್‌ನಲ್ಲಿ ಹೆಚ್ಚುವರಿ ಬೌನ್ಸ್ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಆಯ್ಕೆಯ ಸವಾಲು ಎದುರಾಗಿದೆ. ಜಡೇಜಾ ಅವರನ್ನು ಕಣಕ್ಕಿಳಿಸುವುದರಿಂದ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಿಗೆ ಬಲ ಸಿಗಲಿದೆ. ಆದರೆ, ನ್ಯೂಜಿಲೆಂಡ್ ತಂಡದಲ್ಲಿ ಹಲವು ಎಡಗೈ ಬ್ಯಾಟರ್‌ಗಳಿರುವುದರಿಂದ ವಾಷಿಂಗ್ಟನ್ ಸುಂದರ್ ಅವರ ಆಫ್‌ಸ್ಪಿನ್‌ಗೆ ಆದ್ಯತೆ ನೀಡುವ ಸಾಧ್ಯತೆಯೂ ಇದೆ.

ಇನ್ನೊಂದೆಡೆ, ಹೆಚ್ಚುವರಿ ವೇಗ ಮತ್ತು ಬೌನ್ಸ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲ ಯುವ ವೇಗಿ ಗುರ್ನೂರ್ ಬ್ರಾರ್ ಅವರನ್ನೂ ಪರಿಗಣಿಸಬಹುದು. ಹೀಗಾಗಿ ಕಾಂಬೋಜ್ ಅವರನ್ನು ಮುಂದುವರಿಸುವುದು ಅಥವಾ ಜಡೇಜಾ ಇಲ್ಲವೇ ಗುರ್ನೂರ್ ಬ್ರಾರ್‌ಗೆ ಅವಕಾಶ ನೀಡುವುದು ಎಂಬ ನಿರ್ಧಾರ ತಂಡದ ಪಿಚ್ ಮೌಲ್ಯಮಾಪನವನ್ನು ಅವಲಂಬಿಸಿದೆ.

IND vs NZ: ʻ ಚೆಂಡಿಗೆ ಎಂಜಲು ಬಳಸಲು ಅನುಮತಿ ನೀಡಿʼ-ಐಸಿಸಿಗೆ ಮನವಿ ಮಾಡಿದ ಶುಭಮನ್‌ ಗಿಲ್‌!

ವೆಲ್ಲಿಂಗ್ಟನ್ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿರುವುದರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಲು ಭಾರತಕ್ಕೆ ಕ್ರೈಸ್ಟ್‌ಚರ್ಚ್ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯ ಮಹತ್ವದ್ದಾಗಿದೆ.