ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ ರವೀಂದ್ರ ಜಡೇಜಾ!

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಅವರು ಛತ್ತೀಸಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ಪರ ಬ್ಯಾಟ್‌ ಮಾಡಿದ ಜಡೇಜಾ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ಗರ ಮರಳಿದ್ದಾರೆ.

ಛತ್ತೀಸಗಢ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಶತಕ.

ನವದೆಹಲಿ: ಭಾರತದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ರಣಜಿ ಟ್ರೋಫಿ (Ranji Trophy 2026-27) ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ದೇಶಿ ಕ್ರಿಕೆಟ್‌ನಲ್ಲಿ ಆಡುತ್ತಿರುವ ಜಡೇಜಾ ಅವರ ಈ ಪ್ರದರ್ಶನ ಮಹತ್ವ ಪಡೆದಿದೆ. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ 2026–27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೌರಾಷ್ಟ್ರ ಮತ್ತು ಛತ್ತೀಸ್‌ಗಢ ತಂಡಗಳ ನಡುವಣ ಪಂದ್ಯದಲ್ಲಿ ಜಡೇಜಾ 209 ಎಸೆತಗಳಲ್ಲಿ 102 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಏಳು ಬೌಂಡರಿಗಳಿವೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಡೇಜಾ ದಾಖಲಿಸಿದ 16ನೇ ಶತಕವಾಗಿದೆ.

ಸೌರಾಷ್ಟ್ರ ತಂಡ 120 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ಜಡೇಜಾ ಕ್ರೀಸ್‌ಗೆ ಬಂದರು. ನಂತರ ಮತ್ತೊಂದು ವಿಕೆಟ್ ಪತನಗೊಂಡಾಗ ತಂಡದ ಮೊತ್ತ 151 ರನ್‌ಗಳಾಗಿತ್ತು. ಇಂತಹ ಸಂದರ್ಭದಲ್ಲಿ ಜಡೇಜಾ ತಾಳ್ಮೆಯ ಆಟ ಪ್ರದರ್ಶಿಸಿ ತಂಡದ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಿದರು. ಜಡೇಜಾ ಅವರಿಗೆ ಪ್ರೇರಕ್ ಮಾಂಕಡ್ ಉತ್ತಮ ಸಾಥ್ ನೀಡಿದರು. ಇಬ್ಬರೂ ಐದನೇ ವಿಕೆಟ್‌ಗೆ 205 ರನ್‌ಗಳ ಮಹತ್ವದ ಜೊತೆಯಾಟವಾಡಿ ಸೌರಾಷ್ಟ್ರ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

IND vs WI: 2,000 ರನ್‌ ಪೂರ್ಣಗೊಳಿಸಿ ಸೂರ್ಯಕುಮಾರ್‌ ಯಾದವ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಜಡೇಜಾ 102 ರನ್ ಗಳಿಸಿದ್ದಾಗ ಛತ್ತೀಸ್‌ಗಢದ ಧರ್ಮೇಂದ್ರಸಿನ್ಹ್‌ ಜಡೇಜಾ ಅವರ ಬೌಲಿಂಗ್‌ನಲ್ಲಿ ಕ್ಯಾಚ್‌ ಆ್ಯಂಡ್‌ ಬೌಲ್ಡ್ ಆದರು. ಸೌರಾಷ್ಟ್ರ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 392 ರನ್ ಗಳಿಸಿತು. ಛತ್ತೀಸ್‌ಗಢದ ದೇವ ಆದಿತ್ಯ ಸಿಂಗ್ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಸಿದ್ಧತೆ

ನವೆಂಬರ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಜಡೇಜಾ ಅವರಿಗೆ ಈ ಶತಕ ಮಹತ್ವದ ಅಭ್ಯಾಸ ಒದಗಿಸಿದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದ ಅವರು, ಎರಡು ಪಂದ್ಯಗಳಲ್ಲಿ ಎರಡು ವಿಕೆಟ್ ಪಡೆದಿದ್ದರು. ಆದರೆ ಬ್ಯಾಟ್‌ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ರಣಜಿ ಪಂದ್ಯದಲ್ಲಿ ದೀರ್ಘ ಇನಿಂಗ್ಸ್ ಆಡುವ ಮೂಲಕ ಕೆಂಪು ಚೆಂಡಿನ ಕ್ರಿಕೆಟ್‌ಗೆ ಮರಳಿರುವುದು ಅವರಿಗೆ ಉಪಯುಕ್ತವಾಗಿದೆ.



ಭಾರತ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ನವೆಂಬರ್ 19ರಿಂದ 23ರವರೆಗೆ ವೆಲ್ಲಿಂಗ್ಟನ್‌ನಲ್ಲಿ ಹಾಗೂ ಎರಡನೇ ಟೆಸ್ಟ್ ಪಂದ್ಯವನ್ನು ನವೆಂಬರ್ 27ರಿಂದ ಡಿಸೆಂಬರ್ 1ರವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ಆಡಲಿದೆ. ಜಡೇಜಾ ಅವರ ವಿಶೇಷತೆ ಎಂದರೆ ಅವರು ಬ್ಯಾಟಿಂಗ್‌ನಲ್ಲಿ ರನ್ ಗಳಿಸುವುದರ ಜೊತೆಗೆ ಎಡಗೈ ಸ್ಪಿನ್ ಬೌಲಿಂಗ್ ಮೂಲಕವೂ ತಂಡಕ್ಕೆ ಕೊಡುಗೆ ನೀಡಬಲ್ಲರು. ನ್ಯೂಜಿಲೆಂಡ್ ಪ್ರವಾಸದಲ್ಲಿ ಪಿಚ್ ಮತ್ತು ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಅವರ ಈ ಆಲ್‌ರೌಂಡ್ ಸಾಮರ್ಥ್ಯ ಭಾರತದ ಪಾಲಿಗೆ ಮಹತ್ವ ಪಡೆಯಬಹುದು.

ಒಟ್ಟಿನಲ್ಲಿ, ರಣಜಿ ಟ್ರೋಫಿಯಲ್ಲಿ ದಾಖಲಿಸಿದ ಶತಕದ ಮೂಲಕ ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್ ಲಯವನ್ನು ಮರಳಿ ಕಂಡುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ದೊರೆತಿರುವ ಈ ಪಂದ್ಯಾಭ್ಯಾಸ ಅವರ ಸಿದ್ಧತೆಗೆ ನೆರವಾಗಲಿದೆ.

IND vs WI: ಮೂರನೇ ಟಿ20ಐ ಗೆಲುವಿನ ಬಳಿಕ ಬೌಲರ್‌ಗಳ ಬಗ್ಗೆ ಶ್ರೇಯಸ್‌ ಅಯ್ಯರ್‌ ಹೇಳಿದ್ದಿದು!

ಸ್ಕೋರ್‌ ವಿವರ (ಎರಡನೇ ದಿನದಾಟದ ಅಂತ್ಯಕ್ಕೆ)

ಸೌರಾಷ್ಟ್ರ: ಪ್ರಥಮ ಇನಿಂಗ್ಸ್‌ನಲ್ಲಿ 110.4 ಓವರ್‌ಗಳಿಗೆ 392-10(ರವೀಂದ್ರ ಜಡೇಜಾ 102 ರನ್‌, ಪ್ರೇರಕ್‌ ಮಂಕಡ್‌ 129 ರನ್‌, ಚಿರಾಗ್‌ ಜಾನಿ 83 ರನ್‌; ದೇವ್‌ ಆದಿತ್ಯ ಸಿಂಗ್‌ 67 ಕ್ಕೆ 5)

ಛತ್ತೀಸ್‌ಗಢ: ಪ್ರಥಮ ಇನಿಂಗ್ಸ್‌ನಲ್ಲಿ 55 ಓವರ್‌ಗಳಿಗೆ 122-3 (ಅನುಜ್‌ ತಿವಾರಿ 72* ರನ್‌, ಮಯಾಂಕ್‌ ವರ್ಮಾ 32* ರನ್‌; ಜಯದೇವ್‌ ಉನಾದ್ಕಟ್‌ 22 ಕ್ಕೆ 1, ಚಿರಾಗ್‌ ಜಾನಿ 25 ಕ್ಕೆ 1)