ಮುಂಬೈ: ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಮಾರ್ಚ್ 5 ರಂದು ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಸೆಮಿ-ಫೈನಲ್‌ನಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರ ಪ್ರದರ್ಶನವನ್ನು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ (Harry Brook) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬುಮ್ರಾ ʻವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬೌಲರ್ʼಎಂದು ಬಣ್ಣಿಸಿದ್ದಾರೆ. ಪಂದ್ಯದಲ್ಲಿ ಬುಮ್ರಾ ಎಸೆದ ಕಠಿಣ 18ನೇ ಓವರ್, ಇಂಗ್ಲೆಂಡ್ ತಂಡದ ರನ್ ಚೇಸ್‌ಗೆ ಬ್ರೇಕ್ ಹಾಕಿ, ಭಾರತಕ್ಕೆ ಏಳು ರನ್‌ಗಳ ಜಯ ತಂದುಕೊಟ್ಟು ಫೈನಲ್ ಪ್ರವೇಶಿಸಲು ನೆರವಾಯಿತು. ಭಾರತ ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಕಾದಾಟ ನಡೆಸಲಿದೆ.
ಇಲ್ಲಿನ ವಾಂಖೆಡೆ ಪಿಚ್ ಉತ್ತಮ ಬೌನ್ಸ್‌ಗೆ ನೆರವು ನೀಡುತ್ತಿತ್ತು ಮತ್ತು ಬ್ಯಾಟ್‌ಗೆ ಚೆಂಡು ಚೆನ್ನಾಗಿ ಬರುತ್ತಿತ್ತು. ಹಾಗಾಗಿ ಬ್ಯಾಟ್ಸ್‌ಮನ್‌ಗಳಿಗೆ ಶಾಟ್‌ಗಳನ್ನು ಆಡಲು ಹೆಚ್ಚಿನ ಕಷ್ಟವಾಗಲಿಲ್ಲ. ಆದರೆ ಬುಮ್ರಾ ಇಬ್ಬರು ತಂಡಗಳ ನಡುವಿನ ಪ್ರಮುಖ ವ್ಯತ್ಯಾಸವಾಗಿ ಹೊರಹೊಮ್ಮಿದರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 33 ರನ್ ನೀಡಿ, ಹ್ಯಾರಿ ಬ್ರೂಕ್ ಅವರ ವಿಕೆಟ್ ಕಬಳಿಸಿದರು.
ಭಾರತ, ಇಂಗ್ಲೆಂಡ್‌ಗೆ 254 ರನ್‌ಗಳ ಗುರಿ ನೀಡಿದ ಬಳಿಕ, ಪವರ್‌ಪ್ಲೇ ಅವಧಿಯಲ್ಲೇ ಮೂರು ವಿಕೆಟ್ ಕಳೆದುಕೊಂಡಿದ್ದರೂ ಆಂಗ್ಲರು ಉತ್ತಮವಾಗಿ ಪ್ರತಿಕ್ರಿಯಿಸಿದರು. ಜಾಕೋಬ್ ಬೆಥೆಲ್ 48 ಬಾಲ್‌ಗಳಲ್ಲಿ 105 ರನ್‌ಗಳ ದಿಟ್ಟ ಇನಿಂಗ್ಸ್ ಆಡಿದ್ದು, ಇಂಗ್ಲೆಂಡ್ ತಂಡವನ್ನು ಗೆಲುವಿನ ಪೈಪೋಟಿಯಲ್ಲಿ ಉಳಿಸಿತು.
T20 World Cup: ʻನಾನು ನರ್ವಸ್ ಆಗಿದ್ದʼ-ಕೊನೆಯ ಓವರ್‌ನಲ್ಲಿನ ಅನುಭವ ಹಂಚಿಕೊಂಡ ಶಿವಂ ದುಬೆ!
ಇಂಗ್ಲೆಂಡ್ ಗೆಲುವಿಗೆ ಕೊನೆಯ ಮೂರು ಓವರ್‌ಗಳಲ್ಲಿ 45 ರನ್ ಬೇಕಿದ್ದಾಗ, ಭಾರತ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಪ್ರಮುಖ ಆಯುಧವಾದ ಬುಮ್ರಾ ಅವರಿಗೆ 18ನೇ ಓವರ್ ನೀಡುವ ನಿರ್ಧಾರ ಕೈಗೊಂಡರು. ಬುಮ್ರಾ ಅತ್ಯಂತ ಕಟ್ಟುನಿಟ್ಟಾಗಿ ಬೌಲ್ ಮಾಡಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಸೆಟ್ ಆಗಿದ್ದ ಬ್ಯಾಟರ್ ಜಾಕೋಬ್ ಬೆಥೆಲ್ ಕೂಡ ದೊಡ್ಡ ಶಾಟ್‌ಗಳಿಗೆ ಹೋಗಲು ಹೋರಾಡಬೇಕಾಯಿತು. ಬುಮ್ರಾ ಅವರ ನಿಖರ ಯಾರ್ಕರ್‌ಗಳು ಇಂಗ್ಲೆಂಡ್ ತಂಡವನ್ನು ನಿಯಂತ್ರಣದಲ್ಲಿ ಇಡಲು ನೆರವಾಯಿತು ಮತ್ತು ಅವರು ಆ ಓವರ್‌ನಲ್ಲಿ ಕೇವಲ ಆರು ರನ್ ಮಾತ್ರ ನೀಡಿದರು. ಇದರಿಂದ ಒತ್ತಡದ ಕ್ಷಣಗಳಲ್ಲಿ ಅವರು ತಮ್ಮ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಬುಮ್ರಾ ಅವರ ಓವರ್ ನಂತರ ಇಂಗ್ಲೆಂಡ್‌ಗೆ ಕೊನೆಯ 12 ಬಾಲ್‌ಗಳಲ್ಲಿ 39 ರನ್ ಗಳಿಸುವ ಕಠಿಣ ಗುರಿ ಎದುರಾಯಿತು. ನಂತರದ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಕೇವಲ ಒಂಬತ್ತು ರನ್ ಮಾತ್ರ ನೀಡಿದರು. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ 30 ರನ್ ಅಗತ್ಯವಿದ್ದರೂ, ಅವರು ಕೇವಲ 22 ರನ್ ಮಾತ್ರ ಗಳಿಸಿದರು. ಜೋಫ್ರಾ ಆರ್ಚರ್, ಶಿವಂ ದುಬೆ ಎಸೆದ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದರೂ ಅದು ಸಾಕಾಗಲಿಲ್ಲ. ಅಂತಿಮವಾಗಿ ಭಾರತ ತಂಡ ಸತತ ಎರಡನೇ ಆವೃತ್ತಿಗೆ ಫೈನಲ್‌ಗೆ ಸುಲಭವಾಗಿ ಪ್ರವೇಶಿಸಿತು.
T20 World Cup: ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ರವಿ ಶಾಸ್ತ್ರಿ!
ಜಸ್‌ಪ್ರೀತ್ ಬುಮ್ರಾ ಸಾರ್ವಕಾಲಿಕ ಶ್ರೇಷ್ಠ ಬೌಲರ್
“ಜಸ್‌ಪ್ರೀತ್ ಬುಮ್ರಾ ಅತ್ಯಂತ ಉತ್ತಮ ಬೌಲರ್, ಈ ಕ್ಷಣದಲ್ಲಿ ನೋಡಿದರೆ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂದು ಹೇಳಬಹುದು,” ಎಂದು ಪಂದ್ಯದ ನಂತರ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಶ್ಲಾಘಿಸಿದ್ದಾರೆ.
“ಅವರು ಬಹಳ ಕಾಲದಿಂದಲೂ ಉತ್ತಮ ಬೌಲ್ ಮಾಡುತ್ತಿದ್ದಾರೆ. ಭಾರತೀಯರು ಅದ್ಭುತವಾಗಿ ಫೀಲ್ಡಿಂಗ್ ಮಾಡಿದರು. ನನ್ನನ್ನು ಔಟ್ ಮಾಡಲು ಅಕ್ಷರ್ ಪಟೇಲ್ ಪಡೆದ ಆ ಕ್ಯಾಚ್ ನಾನು ಕಂಡ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಆದ್ದರಿಂದ ಅವರಿಗೆ ಅಭಿನಂದನೆಗಳು,” ಎಂದು ಅವರು ತಿಳಿಸಿದ್ದಾರೆ.