ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ವೈಟ್ಬಾಲ್ ಸರಣಿಗಳಿಗೂ (AUS vs ENG) ಮುನ್ನ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ಜೇಕಬ್ ಬೆಥೆಲ್ (Jakob Bethel) ಗಾಯದ ಸಮಸ್ಯೆಯಿಂದಾಗಿ ಮುಂಬರುವ ಏಕದಿನ ಹಾಗೂ ಟಿ20ಐ ಸರಣಿಗಳಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20ಐ ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಏಕದಿನ ಪಂದ್ಯಗಳು ನವೆಂಬರ್ 13, 15 ಹಾಗೂ 28ರಂದು ನಡೆಯಲಿವೆ. ಇನ್ನು ಟಿ20ಐ ಸರಣಿಯ ಪಂದ್ಯಗಳು ನವೆಂಬರ್ 21, 24, 27, 29 ಹಾಗೂ ಡಿಸೆಂಬರ್ 2ರಂದು ಜರುಗಲಿವೆ.
ಜೇಕಬ್ ಬೆಥೆಲ್ ಅನುಪಸ್ಥಿತಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ನೀಡಿದೆ. ಪ್ರಮುಖ ಆಟಗಾರನ ಸೇವೆ ಇಲ್ಲದೆ ಸರಣಿಯಲ್ಲಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ.
ಬಲಗಾಲಿನ ಮೊಣಕಾಲಿನ ನೋವಿನ ಸಮಸ್ಯೆಯಿಂದಾಗಿ ಬೆಥೆಲ್ ಕಳೆದ ಜುಲೈ ತಿಂಗಳಿನಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಸೆಪ್ಟೆಂಬರ್ನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವಾರ ಅಭ್ಯಾಸದ ವೇಳೆ ಮತ್ತೊಮ್ಮೆ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿಯುವಂತಾಗಿದೆ.
ʻಆ ದಿನಗಳು ತುಂಬಾ ಕಠಿಣವಾಗಿದ್ದವುʼ: ತಮ್ಮ ಕಷ್ಟದ ಅವಧಿಯನ್ನು ನೆನೆದ ಸೂರ್ಯಕುಮಾರ್ ಯಾದವ್!
ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಕ್ತಾಯಗೊಂಡ ಬಳಿಕ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲೂ ಆಡಲಿದೆ. ಆದರೆ ಬೆಥೆಲ್ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ. ಇದು ಇಂಗ್ಲೆಂಡ್ ತಂಡದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇಂಗ್ಲೆಂಡ್ ತಂಡದ ಭವಿಷ್ಯದ ಬಗ್ಗೆ ಜೋ ರೂಟ್ ಹೇಳಿಕೆ
ಇನ್ನೊಂದೆಡೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಿದ್ಧತೆ ನಡೆಸುತ್ತಿರುವ ಅನುಭವಿ ಬ್ಯಾಟರ್ ಜೋ ರೂಟ್, ತಂಡದ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಇಂಗ್ಲೆಂಡ್ ತಂಡ ಬೆಳೆಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಮೇಲೆ ತಂಡದ ಚಿತ್ತ ನೆಟ್ಟಿದ್ದು, ವಿಭಿನ್ನ ಪಿಚ್ಗಳಲ್ಲಿ ಬ್ಯಾಟ್ ಮಾಡುವ ಅನುಭವ ಆಟಗಾರರಿಗೆ ನೆರವಾಗಲಿದೆ ಎಂದು ರೂಟ್ ಹೇಳಿದ್ದಾರೆ.
IND vs NZ: ಗಾಯಕ್ವಾಡ್, ಇಶಾನ್ ಇನ್; 4ನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
"ನಾವು ಹೆಚ್ಚು ಹೊಂದಾಣಿಕೆಯ ಸಾಮರ್ಥ್ಯ ಹೊಂದಿರುವ ತಂಡವಾಗಿ ಬೆಳೆಯಲು ಬಯಸುತ್ತೇವೆ. ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಸವಾಲೊಡ್ಡಬೇಕಾದರೆ ನಮ್ಮ ಆಟದ ಶೈಲಿಯನ್ನು ವಿಭಿನ್ನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ನಮ್ಮ ತಂಡ ಹಲವು ರೀತಿಯಲ್ಲಿ ಯುವ ಆಟಗಾರರನ್ನು ಒಳಗೊಂಡಿದ್ದು, ಅನುಭವದ ಕೊರತೆಯೂ ಇದೆ. ಹೀಗಾಗಿ ವಿಭಿನ್ನ ಪಿಚ್ಗಳು ಹಾಗೂ ಪಂದ್ಯದ ವಿಭಿನ್ನ ಸನ್ನಿವೇಶಗಳಲ್ಲಿ ಆಡುವ ಹೆಚ್ಚಿನ ಅನುಭವ ಪಡೆದಷ್ಟೂ ನಾವು ಕಲಿಯಲು, ಅಭಿವೃದ್ಧಿ ಹೊಂದಲು ಮತ್ತು ಸಮಗ್ರ ಸಾಮರ್ಥ್ಯ ಹೊಂದಿರುವ ತಂಡವಾಗಿ ಬೆಳೆಯಲು ಸಾಧ್ಯವಾಗುತ್ತದೆ," ಎಂದು ಜೋ ರೂಟ್ ತಿಳಿಸಿದ್ದಾರೆ.
"ನಾವು ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಮುಗಿಸಿ ಬಂದಿದ್ದೇವೆ. ಅಲ್ಲಿನ ಅನುಭವದಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯ ಮೂರು ಪಂದ್ಯಗಳಲ್ಲೂ ನಮ್ಮ ಸಾಮರ್ಥ್ಯವನ್ನು ಹೇಗೆ ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ಅದೇ ನಮ್ಮ ಮುಂದಿರುವ ಸವಾಲು," ಎಂದು ರೂಟ್ ಹೇಳಿದ್ದಾರೆ.