ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಉಭಯ ತಂಡಗಳ ನಡುವಣ ಮೊದಲನೇ ಪಂದ್ಯ ಭಾನುವಾರ ಭಾರತೀಯ ಕಾಲಮಾನ ಬೆಳಿಗ್ಗೆ 09 ಗಂಟೆಗೆ ಆರಂಭವಾಗಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ಇದೇ ಮೊದಲ ಬಾರಿ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸರಣಿಯ ವಿಶೇಷತೆಯಾಗಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ xi (India's Playing XI) ಅನ್ನು ಮಾಜಿ ಆಲ್‌ರೌಂಡರ್ ಇರ್ಫಾನ್ ಫಠಾಣ್ (Irfan Pathan) ಆಯ್ಕೆ ಮಾಡಿದ್ದಾರೆ.
ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಇರ್ಫಾನ್ ಪಠಾಣ್ ಆಯ್ಕೆ ಮಾಡಿದ್ದಾರೆ. ಇನ್ನು ಮಧ್ಯಮ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಮತ್ತು ಅಕ್ಷರ್ ಪಟೇಲ್ ಅವರನ್ನು ಆಲ್‌ರೌಂಡರ್‌ಗಳಾಗಿ ಪಠಾಣ್ ಆಯ್ಕೆ ಮಾಡಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್, ವೇಗದ ಬೌಲರ್‌ಗಳಾಗಿ ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಆರಿಸಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಆಸರೆಯಾಗಬಲ್ಲ ಹರ್ಷಿತ್ ರಾಣಾ ಅವರನ್ನು ಕೂಡ ಪಠಾಣ್ ಆಯ್ಕೆ ಮಾಡಿದ್ದಾರೆ.
IND vs AUS 1st ODI: ತಂಡಗಳ ಪ್ಲೇಯಿಂಗ್ 11, ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ
"ಹರ್ಷಿತ್ ರಾಣಾ ಆಡಬಹುದು ಎಂದು ನಾನು ಭಾವಿಸುತ್ತೇನೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಬೌಲರ್ ಇವರು. ಅವರು ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಮೂರನೇ ವೇಗದ ಬೌಲರ್ ಆಗಿ ಹರ್ಷಿತ್ ಆಡಬಹುದು. ಉತ್ತಮ ಪ್ರದರ್ಶನವನ್ನು ತೋರಲು ಅವರಿಗೆ ಉತ್ತಮ ಅವಕಾಶ ಲಭಿಸುತ್ತಿದ," ಎಂದು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
"ಭಾರತ ತಂಡ ನೂತನ ನಾಯಕನ ಅಡಿಯಲ್ಲಿ ಆಡಲಿದೆ. ಅವರು ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಗೌರವಯುತವಾಗಿ ನಡೆಸಿಕೊಂಡು ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆಂಬುದು ಗಿಲ್‌ಗೆ ಸವಾಲಾಗಿದೆ. ಹಿರಿಯ ಆಟಗಾರರಿಗೆ ಕಿರಿಯ ಆಟಗಾರರು ಎಷ್ಟು ಗೌರವ ನೀಡುತ್ತಾರೆಂದು ನೋಡಬೇಕಾಗಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಗಿಲ್ ಗೌರವಿಸಲಿದ್ದಾರೆಂದು ನನಗೆ ಖಚಿತವಾಗಿದೆ," ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
AUS vs IND 1st ODI: ಭಾರತ-ಆಸೀಸ್ ಮೊದಲ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ಮೊದಲನೇ ಏಕದಿನ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI
ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್