ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

AUS vs SL: ಪಥುಮ್‌ ನಿಸಾಂಕ ಶತಕ, ಆಸ್ಟ್ರೇಲಿಯಾಗೆ ಶಾಕ್‌ ನೀಡಿ ಸೂಪರ್‌-8ಕ್ಕೆ ಪ್ರವೇಶಿಸಿದ ಶ್ರೀಲಂಕಾ!

AUS vs SL Match Highlights: ಪಥುಮ್‌ ನಿಸಾಂಕ ಅವರ ಚೊಚ್ಚಲ ಶತಕದ ಬಲದಿಂದ ಶ್ರೀಲಂಕಾ ತಂಡ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಹಂತಕ್ಕೆ ಪ್ರವೇಶ ಮಾಡಿದೆ. ಈ ಸೋಲಿನ ಮೂಲಕ ಆಸ್ಟ್ರೇಲಿಯಾ ತಂಡದ ಸೂಪರ್‌-8ರ ಹಾದಿ ಕಠಿಣವಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಶತಕ ಬಾರಿಸಿದ ಪಥುಮ್‌ ನಿಸಾಂಕ.

ಪಲ್ಲೆಕೆಲೆ: ಪಥುಮ್‌ ನಿಸಾಂಕ (Pathum Nissanka) ಚೊಚ್ಚಲ ಶತಕ ಹಾಗೂ ಕುಸಾಲ್‌ ಮೆಂಡಿಸ್‌ ಅರ್ಧಶತಕದ ಬಲದಿಂದ ಶ್ರೀಲಂಕಾ (Sri lanka) ತಂಡ, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನ ಮೂಲಕ ದಸೂನ್‌ ಶಣಕ ಅವರ ನಾಯಕತ್ವದ ಶ್ರೀಲಂಕಾ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೂಪರ್‌-8ರ ಹಂತಕ್ಕೆ ಪ್ರವೇಶ ಮಾಡಿತು. ಆದರೆ, ಸತತ ಎರಡನೇ ಸೋಲು ಅನುಭವಿಸಿದ ಮಾಜಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡದ ಸೂಪರ್‌-8ರ ಹಾದಿ ಅತ್ಯಂತ ಕಠಿಣವಾಗಿದೆ. ಅಲ್ಲದೆ ಆಸೀಸ್‌ ತಂಡದ ಸೂಪರ್‌-8ರ ಭವಿಷ್ಯ ಜಿಂಬಾಬ್ವೆ ತಂಡದ ಕೈಯಲ್ಲಿದೆ. ಪೆಬ್ರವರಿ 17 ರಂದು ಐರ್ಲೆಂಡ್‌ ವಿರುದ್ಧ ಜಿಂಬಾಬ್ವೆ ಗೆಲುವು ಪಡೆದರೆ, ಆಸ್ಟ್ರೇಲಿಯಾ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಸೋಮವಾರ ಇಲ್ಲಿನ ಪಲ್ಲೆಕೆಲೆ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿಆಸ್ಟ್ರೇಲಿಯಾ ನೀಡಿದ್ದ 182 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ಕುಸಾಲ್‌ ಪೆರೆರಾ ಅವರೊಂದಿಗೆ ಮೊದಲನೇ ವಿಕೆಟ್‌ ಬಹುಬೇಗ ಕಳೆದುಕೊಂಡಿತು. ಆದರೂ ಪಥುಮ್‌ ನಿಸಾಂಕ (100 ರನ್‌) ಅವರ ಚೊಚ್ಚಲ ಶತಕ ಹಾಗೂ ಕುಸಾಲ್‌ ಮೆಂಡಿಸ್‌ ( 51 ರನ್‌) ಅವರ ಅರ್ಧಶತಕದ ಬಲದಿಂದ ಆತಿಥೇಯ ಶ್ರೀಲಂಕಾ 18 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 184 ರನ್‌ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಶ್ರೀಲಂಕಾ, ಅಂತಿಮ ಎಂಟರ ಘಟ್ಟಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿತು.

ENG vs ITA: ಇಟಲಿ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ ಸೂಪರ್‌-4ಕ್ಕೆ ಲಗ್ಗೆಯಿಟ್ಟ ಇಂಗ್ಲೆಂಡ್‌!

ಪಥುಮ್‌ ನಿಸಾಂಕ ಚೊಚ್ಚಲ ಶತಕ

ಶ್ರೀಲಂಕಾ ತಂಡದ ಗಲುವಿನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಪಥುಮ್‌ ನಿಸಾಂಕ ಬಹು ಮುಖ್ಯ ಪಾತ್ರವನ್ನು ವಹಿಸಿದರು. ಕುಸಾಲ್‌ ಪೆರೆರಾ ಬೇಗ ನಿರ್ಗಮಿಸಿದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಪಥುಮ್‌ ನಿಸಾಂಕ ಆಸೀಸ್‌ ಬೌಲಿಂಗ್‌ ದಾಳಿಯನ್ನು ಛಿದ್ರಗೊಳಿಸಿದರು. ಕೊನೆಯವರೆಗೂ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದ ಅವರು, ಆಡಿದ 52 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 100 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ ಕುಸಾಲ್‌ ಮೆಂಡಿಸ್‌ ಅವರ ಜೊತೆಗೆ ಎರಡನೇ ವಿಕೆಟ್‌ಗೆ ನಿಸಾಂಕ 66 ಎಸೆತಗಳಲ್ಲಿ 97 ರನ್‌ಗಳನ್ನು ಕಲೆ ಹಾಕಿದರು. ನಂತರ ಮೂರನೇ ವಿಕೆಟ್‌ಗೆ ಪವನ್‌ ರತ್ನ ನಾಯಕೆ ಜೊತೆಗೆ 34 ಎಸೆತಗಳಲ್ಲಿ 79 ರನ್‌ಗಳ ಸ್ಪೋಟಕ ಜೊತೆಯಾಟವನ್ನು ಆಡಿದರು.



ಕುಸಾಲ್‌ ಮೆಂಡಿಸ್‌ ಅರ್ಧಶತಕ

ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಕುಸಾಲ್‌ ಮೆಂಡಿಸ್‌, 38 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಆರು ಬೌಂಡರಿಗಳೊಂದಿಗೆ 51 ರನ್‌ ಸಿಡಿಸಿ ಶ್ರೀಲಂಕಾ ಗೆಲುವಿಗೆ ಕೈ ಜೋಡಿಸಿದರು. ಇನ್ನು ಕೊನೆಯಲ್ಲಿ ಅಬ್ಬರಿಸಿದ ಪವನ್‌ ರತ್ನನಾಯಕೆ ಕೇವಲ 15 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ ಅಜೇಯ 28 ರನ್‌ಗಳನ್ನು ಚಚ್ಚಿದರು. ಆಸ್ಟ್ರೇಲಿಯಾ ಪರ ಮಾರ್ಕಸ್‌ ಸ್ಟೋಯ್ನಿಸ್‌ 46 ರನ್‌ಗಳನ್ನು ನೀಡಿದರೂ ಎರಡು ವಿಕೆಟ್‌ ಪಡೆದರು.

181 ರನ್‌ ಕಲೆ ಹಾಕಿದ ಆಸೀಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಮಿಚೆಲ್‌ ಮಾರ್ಷ್‌ ಹಾಗೂ ಟ್ರಾವಿಸ್‌ ಹೆಡ್‌ ಮೊದಲನೇ ವಿಕೆಟ್‌ಗೆ 8.3 ಓವರ್‌ಗಳಿಗೆ 104 ರನ್‌ಗಳನ್ನು ಕಲೆ ಹಾಕಿ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಸ್ಪೋಟಕ ಬ್ಯಾಟ್‌ ಮಾಡಿದ ಟ್ರಾವಿಸ್‌ ಹೆಡ್‌ ಕೇವಲ 29 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 56 ರನ್‌ ಗಳಿಸಿ ದುಷನ್‌ ಹೇಮಂತಾಗೆ ಔಟ್‌ ಆದರು.



ಮಾರ್ಷ್‌-ಹೆಡ್‌ ಅರ್ಧಶತಕ

ಕ್ಯಾಮೆರಾನ್‌ ಗ್ರೀನ್‌ ಹಾಗೂ ಟಿಮ್‌ ಡೇವಿಡ್‌ ಬಹುಬೇಗ ಔಟ್‌ ಆದರು. ಹೆಡ್‌ ವಿಕೆಟ್‌ ಒಪ್ಪಿಸಿದ ಬಳಿಕ ಮಿಚೆಲ್‌ ಮಾರ್ಷ್‌, 27 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 54 ರನ್‌ ಗಳಿಸಿ ಔಟ್‌ ಆದರು. ಜಾಶ್‌ ಇಂಗ್ಲಿಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕ್ರಮವಾಗಿ 27 ಮತ್ತು 22 ರನ್‌ ಗಳಿಸಿ ಔಟ್‌ ಆದರು. ಡೆತ್‌ ಓವರ್‌ಗಳಲ್ಲಿ ಶ್ರೀಲಂಕಾ ಬೌಲರ್‌ಗಳು ಆಸೀಸ್‌ ಬ್ಯಾಟರ್‌ಗಳನ್ನು ಕಡಿವಾಣ ಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್‌ಗಳಿಗೆ 181 ರನ್‌ಗಳಿಗೆ ಆಲ್‌ಔಟ್‌ ಆಯಿತು. ಶ್ರೀಲಂಕಾ ಪರ ದುಶನ್ ಹೇಮಂತ ಮೂರು ವಿಕೆಟ್‌ ಪಡೆದರೆ, ದುಷ್ಮಾಂತ ಚಮೀರಾ ಎರಡು ವಿಕೆಟ್‌ ಪಡೆದರು.