ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BAN vs SL: ಸೂಪರ್‌-4ರ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಸೋಲಿನ ರುಚಿ ತೋರಿಸಿದ ಬಾಂಗ್ಲಾದೇಶ!

BAN vs SL Match Highlights: 2025ರ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4ರ ಹಂತದಲ್ಲಿ ಬಾಂಗ್ಲಾದೇಶ ತಂಡ ಶುಭಾರಂಭ ಕಂಡಿದೆ. ಶನಿವಾರ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಶ್ರೀಲಂಕಾ ನೀಡಿದ್ದ 169 ರನ್‌ಗಳ ಗುರಿಯನ್ನು ಬಾಂಗ್ಲಾ 19.5 ಓವರ್‌ಗಳಿಗೆ ಚೇಸ್‌ ಮಾಡಿತು.

ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡಕ್ಕೆ 4 ವಿಕೆಟ್‌ ಜಯ!

ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡಕ್ಕೆ 4 ವಿಕೆಟ್‌ ಜಯ. -

Profile Ramesh Kote Sep 21, 2025 12:10 AM

ದುಬೈ: ಸೈಫ್‌ ಹಸನ್‌ (61‌ ರನ್‌) ಹಾಗೂ ತೌಹಿದ್‌ ಹೃದಾಯ್‌ (58 ರನ್) ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾದೇಶ ತಂಡ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ (BAN vs SL) 4 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಸೂಪರ್‌ 4ರ ಹಂತದಲ್ಲಿ ಬಾಂಗ್ಲಾದೇಶ ತಂಡ ಶುಭಾರಂಭ ಕಂಡಿದೆ. ಆದರೆ, ಲೀಗ್‌ ಹಂತದಲ್ಲಿ ಸೋಲಿಸಿದ್ದ ವಿಶ್ವಾಸದಲ್ಲಿ ಕಣಕ್ಕೆ ಇಳಿದಿದ್ದ ಶ್ರೀಲಂಕಾ, ಬಾಂಗ್ಲಾದೇಶ ತಂಡದ ಯೋಜನೆಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಯಿತು. ಆದರೆ, ಬಾಂಗ್ಲಾದೇಶ ತಂಡ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರಿದ ಬಳಿಕ ಬ್ಯಾಟಿಂಗ್‌ನಲ್ಲಿ ಬಹಳ ಎಚ್ಚರಿಕೆಯಿಂದ ಆಡಿ ಪಂದ್ಯವನ್ನು ಗೆದ್ದುಕೊಂಡಿತು. ಸ್ಪೋಟಕ ಅರ್ಧಶತಕ ಸಿಡಿಸಿ ಬಾಂಗ್ಲಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಸೈಫ್‌ ಹಸನ್‌ (Saif Hassan) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಶನಿವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಸೂಪರ್‌-4ರ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 169 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾದೇಶ ತಂಡ, ಸೈಫ್‌ ಹಸನ್‌ ಹಾಗೂ ತೌಹಿದ್‌ ಹೃದಾಯ್‌ ಅವರ ಅರ್ಧಶತಕಗಳ ಬಲದಿಂದ 19.5 ಓವರ್‌ಗಳಿಗೆ 169 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಬಾಂಗ್ಲಾದೇಶ ತಂಡದ ಪರ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಸೈಪ್‌ ಹಸನ್‌, ಕೇವಲ 45 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 2 ಬೌಂಡರಿಯೊಂದಿಗೆ 61 ರನ್‌ಗಳನ್ನು ಸಿಡಿಸಿ ಬಾಂಗ್ಲಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರದ ತೌಹಿದ್‌ ಹೃದಾಯ್‌ 37 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ 58 ರನ್‌ಗಳನ್ನು ಬಾರಿಸಿದರು. ಶ್ರೀಲಂಕಾ ತಂಡದ ಪರ ದಸೂನ್‌ ಶಾನಕ ಹಾಗೂ ವಾನಿಂದು ಹಸರಂಗ ತಲಾ ಎರಡೆರಡು ವಿಕೆಟ್‌ ಪಡೆದುಕೊಂಡರು.

IND vs PAK: ಪಾಕಿಸ್ತಾನ ವಿರುದ್ಧದ ಸೂಪರ್‌-4ರ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ಸಾಧ್ಯತೆ!

168 ರನ್‌ ಕಲೆ ಹಾಕಿದ ಶ್ರೀಲಂಕಾ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಶ್ರೀಲಂಕಾ ತಂಡ, ದಸೂನ್‌ ಶಾನಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 168 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 169 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಶಾನಕ ಬಿಟ್ಟರೆ ಕುಸಾಲ್‌ ಮೆಂಡಿಸ್‌ 34 ರನ್‌ ಗಳಿಸಿದ್ದರು.

ಇನಿಂಗ್ಸ್‌ ಆರಂಭಿಸಿದ ಕುಸಾಲ್‌ ಮೆಂಡಿಸ್‌ ಹಾಗೂ ಪತುಮ್‌ ನಿಸಾಂಕ ಜೋಡಿ 44 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿತ್ತು. 15 ಎಸೆತಗಳಲ್ಲಿ 22 ರನ್‌ ಗಳಿಸಿದ ಪತುಮ್‌ ನಿಸಾಂಕ ದೊಡ್ಡ ಹೊಡೆತಕ್ಕೆ ಕೈ ಹಾಕಿ ಟಾಸ್ಕಿನ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಕುಸಾಲ್‌ ಮೆಂಡಿಸ್‌, 25 ಎಸೆತಗಳಲ್ಲಿ 34 ರನ್‌ ಗಳಿಸಿ ಔಟ್‌ ಆದರು.



ದಸೂನ್‌ ಶಾನಕ ಸ್ಪೋಟಕ ಅರ್ಧಶತಕ

ಕಮಿಲ್‌ ಮಿಷಾರ (5) ಹಾಗೂ ಕುಸಾಲ್‌ ಪೆರೆರಾ (16) ಅವರು ಮಧ್ಯಮ ಕ್ರಮಾಂಕದಲ್ಲಿ ವಿಫಲರಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ದಸೂನ್‌ ಶಾನಕ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಪಂದ್ಯದ ದಿಕ್ಕನ್ನು ಬದಲಿಸಿದರು. ಅವರು ಆಡಿದ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 64 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಶ್ರೀಲಂಕಾ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು. ಕೊನೆಯಲ್ಲಿ ಚರಿತಾ ಅಸಲಂಕ 12 ಎಸೆತಗಳಲ್ಲಿ 21 ರನ್‌ಗಳ ಕೊಡುಗೆಯನ್ನು ನೀಡಿದರು.

ಬಾಂಗ್ಲಾದೇಶ ಪರ ಅತ್ಯುತ್ತಮ ಬೌಲ್‌ ಮಾಡಿದ ಮುಸ್ತಾಫಿಝುರ್‌ ರೆಹಮಾನ್‌ 3 ವಿಕೆಟ್‌ ಕಿತ್ತರೆ, ಮೆಹದಿ ಹಸನ್‌ ಎರಡು ವಿಕೆಟ್‌ ಉರುಳಿಸಿದರು.