ನವದೆಹಲಿ: ಇಂದೋರ್ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ (IND vs WI) 223 ರನ್ಗಳ ಮೊತ್ತಕ್ಕೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರ ತಂತ್ರಗಾರಿಕೆ ಮತ್ತು ಭಾರತೀಯ ಬೌಲರ್ಗಳ ಶಿಸ್ತುಬದ್ಧ ಪ್ರದರ್ಶನವನ್ನು ಭಾರತದ ಮಾಜಿ ಬ್ಯಾಟರ್ ಚೇತೇಶ್ವರ್ ಪೂಜಾರ (Cheteshwar Pujara) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ 2,000 ರನ್ಗಳ ಮೈಲುಗಲ್ಲು ತಲುಪಿದ ಅಭಿಷೇಕ್ ಶರ್ಮಾ ಅವರ ಸಾಮರ್ಥ್ಯವನ್ನು ಅವರು ಗುಣಗಾನ ಮಾಡಿದ್ದಾರೆ.
ಜಿಯೋಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೂಜಾರ, “ರಾಂಚಿಯಲ್ಲಿ ಸೋತ ನಂತರ ಭಾರತ ತಂಡ ಉತ್ತಮ ಆಟದ ಯೋಜನೆಯೊಂದಿಗೆ ಮರಳಬೇಕಿತ್ತು. ನಾಯಕನಾಗಿ ಶ್ರೇಯಸ್ ಅಯ್ಯರ್ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡರು. ಬೌಲರ್ಗಳು ಹೇಗೆ ಬೌಲ್ ಮಾಡಬೇಕು ಮತ್ತು ಗುರಿಯನ್ನು ರಕ್ಷಿಸಲು ಯಾವ ತಂತ್ರಗಳನ್ನು ಅನುಸರಿಸಬೇಕು ಎಂಬುದರ ಕುರಿತು ನಿರಂತರವಾಗಿ ಚರ್ಚಿಸಿದರು. ಬೌಲರ್ಗಳ ಕಾರ್ಯಗತಗೊಳಿಸುವಿಕೆ ಅತ್ಯುತ್ತಮವಾಗಿತ್ತು. ಆಟಗಾರರು ತಂಡಕ್ಕಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದಾಗ ನಾಯಕನೂ ಉತ್ತಮವಾಗಿ ಕಾಣಿಸುತ್ತಾರೆ. ಆದರೆ ಶ್ರೇಯಸ್ ಅಯ್ಯರ್ ಉತ್ತಮ ಪ್ರಬುದ್ಧತೆ ತೋರಿದರು. ಭಾರತೀಯ ಬೌಲರ್ಗಳೂ ಅದ್ಭುತ ಪ್ರದರ್ಶನ ನೀಡಿದರು,” ಎಂದು ಹೇಳಿದ್ದಾರೆ.
IND vs WI 4th T20I: ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
ಅಭಿಷೇಕ್ ಶರ್ಮಾ ಸಾಮರ್ಥ್ಯಕ್ಕೆ ಕ್ರಿಸ್ ಗೇಲ್ ಹೋಲಿಕೆ
ಟಿ20ಐ ಕ್ರಿಕೆಟ್ನಲ್ಲಿ ಅಭಿಷೇಕ್ ಶರ್ಮಾ 2,000 ರನ್ಗಳ ಮೈಲುಗಲ್ಲು ತಲುಪಿರುವುದನ್ನೂ ಪೂಜಾರ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿರುವುದು ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಅವರ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
“ಅಭಿಷೇಕ್ ಇಷ್ಟು ವೇಗವಾಗಿ ಇಂತಹ ಮಹತ್ವದ ಮೈಲುಗಲ್ಲು ತಲುಪುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅವರು ಪ್ರದರ್ಶಿಸಿರುವ ಆಟವನ್ನು ಗಮನಿಸಿದರೆ, ಭಾರತ ನೀಡಿರುವ ಅತ್ಯುತ್ತಮ ಟಿ20 ಆಟಗಾರರಲ್ಲಿ ಅವರೂ ಒಬ್ಬರು ಎಂದು ಹೇಳಬಹುದು. ಅವರ ಹೆಸರು ದೀರ್ಘಕಾಲ ನೆನಪಿನಲ್ಲಿ ಉಳಿಯಲಿದೆ. ಟಿ20 ಕ್ರಿಕೆಟ್ ಬಗ್ಗೆ ಮಾತನಾಡುವಾಗ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಅವರ ನೆನಪಾಗುತ್ತದೆ. ಅಭಿಷೇಕ್ ಅವರಲ್ಲಿಯೂ ಅಂತಹ ಸಾಮರ್ಥ್ಯವಿದೆ,” ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಇಂದೋರ್ ಪಂದ್ಯದಲ್ಲಿ ಅಭಿಷೇಕ್ ತೋರಿದ ಪ್ರಬುದ್ಧತೆಯನ್ನೂ ಅವರು ಪ್ರಶಂಸಿಸಿದ್ದಾರೆ. ಸಾಮಾನ್ಯವಾಗಿ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟ್ ಮಾಡುವ ಅಭಿಷೇಕ್, ಈ ಪಂದ್ಯದಲ್ಲಿ ಕ್ರೀಸ್ನಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ತಮ್ಮ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದನ್ನು ತೋರಿಸಿದ್ದಾರೆ ಎಂದು ಪೂಜಾರ ಹೇಳಿದ್ದಾರೆ.
4ನೇ ಟಿ20; ಸಂಜು ಅಥವಾ ಸೂರ್ಯವಂಶಿ? ಯಾರಿಗೆ ಚಾನ್ಸ್? ಹೀಗಿರಬಹುದು ಭಾರತದ ಸಂಭಾವ್ಯ XI
“ಅಭಿಷೇಕ್ ಐದು ಅಥವಾ ಆರು ಎಸೆತಗಳನ್ನು ಎದುರಿಸುವುದೂ ಅವರಿಗೆ ದೀರ್ಘ ಸಮಯದಂತೆ ಅನಿಸಬಹುದು. ಆದರೂ ಇಂದೋರ್ನಲ್ಲಿ ಅವರು ತಾಳ್ಮೆ ತೋರಿಸಿದರು. ಎದುರಾಳಿ ತಂಡದ ಸಾಮರ್ಥ್ಯವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದನ್ನು ಅವರು ಕಲಿಯುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ,” ಎಂದು ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿ ಅಭಿಷೇಕ್ಗೆ ತವರಿನ ಅನುಭವದ ಬಲ
ಮುಂಬರುವ ಹೈದರಾಬಾದ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರಿಗೆ ಅಲ್ಲಿನ ಮೈದಾನದ ಪರಿಚಯ ಅನುಕೂಲವಾಗಬಹುದು ಎಂದು ಪೂಜಾರ ಹೇಳಿದ್ದಾರೆ. ಆ ಮೈದಾನದಲ್ಲಿ ಅವರು ಸಾಕಷ್ಟು ಕ್ರಿಕೆಟ್ ಆಡಿರುವುದರಿಂದ ಪಿಚ್ ಮತ್ತು ಪರಿಸ್ಥಿತಿಗಳ ಬಗ್ಗೆ ಇರುವ ತಿಳಿವಳಿಕೆ ಟಿ20 ಪಂದ್ಯದಲ್ಲಿಯೂ ನೆರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.