ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ನಾನು ಇದು ಟಿ20 ಪಂದ್ಯ ಅಂದುಕೊಂಡಿದ್ದೆ’: ವೈಭವ್‌ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಹೇಳಿದ್ದಿದು!

ಯುಎಇ ಎ ವಿರುದ್ದದ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ 52 ಎಸೆತಗಳಲ್ಲಿ ದ್ವಿಶತಕ ಬಾರಿಸಿ ವಿಶ್ವ ದಾಖಲೆಯನ್ನು ಬರೆದ ವೈಭವ್‌ ಸೂರ್ಯವಂಶಿಯನ್ನು ಯೂನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ ಶ್ಲಾಘಿಸಿದ್ದಾರೆ. ನೀವು ನಿಮ್ಮದೇ ಆದ ದೊಡ್ಡ ಹೆಸರನ್ನು ಮಾಡಿ ಎಂದು ಅವರು ಆಶಿಸಿದ್ದಾರೆ.

ವೈಭವ್‌ ಸೂರ್ಯವಂಶಿಗೆ ವಿಶೇಷ ಸಂದೇಶ ರವಾನಿಸಿದ ಕ್ರಿಸ್‌ ಗೇಲ್‌.

ನವದೆಹಲಿ: ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ ಟೂರ್ನಿಯಲ್ಲಿ ( Rising Stars Asia Cup) ಯುಎಇ ವಿರುದ್ಧ ಭಾರತ ಎ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಸಿಡಿಸಿದ ಸ್ಫೋಟಕ ದ್ವಿಶತಕಕ್ಕೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ (Chris Gayle) ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೇವಲ 53 ಎಸೆತಗಳಲ್ಲಿ 204 ರನ್ ಗಳಿಸಿದ ವೈಭವ್ ಆಟವನ್ನು ಕಂಡು ತಾನು ಇದೊಂದು ಟಿ20 ಪಂದ್ಯ ಎಂದು ಭಾವಿಸಿದ್ದೆ ಎಂದು ಗೇಲ್ ಹೇಳಿಕೊಂಡಿದ್ದಾರೆ.

ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ 28 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಸಿಡಿಸಿದ್ದರು. ಅವರ ಸ್ಟ್ರೈಕ್ ರೇಟ್ ಬರೋಬ್ಬರಿ 384.90 ಆಗಿತ್ತು. ಈ ಅಬ್ಬರದ ಬ್ಯಾಟಿಂಗ್ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದು, ಇದೀಗ ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್ ಕೂಡ ಯುವ ಆಟಗಾರನ ಆಟಕ್ಕೆ ಮನಸೋತಿದ್ದಾರೆ.

IND A vs UAE A: 52 ಎಸೆತಗಳಲ್ಲಿ ಡಬಲ್‌ ಸೆಂಚುರಿ, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

‘ಇದು ಟಿ20 ಪಂದ್ಯವೇ ಎಂದು ಕೇಳಿದ್ದೆ’: ಗೇಲ್‌

Crex ಜೊತೆಗಿನ ಸಂಭಾಷಣೆಯಲ್ಲಿ ವೈಭವ್ ಸೂರ್ಯವಂಶಿ ಆಟದ ಕುರಿತು ಮಾತನಾಡಿದ ಕ್ರಿಸ್ ಗೇಲ್, ಯುವ ಆಟಗಾರನ ಬ್ಯಾಟಿಂಗ್ ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.

“ದ್ವಿಶತಕ ಗಳಿಸಿರುವುದು ಅದ್ಭುತ. ಅದರಲ್ಲೂ 28 ಸಿಕ್ಸರ್‌ಗಳು! ನನ್ನ ಫೋನ್ ನಿರಂತರವಾಗಿ ಸಂದೇಶಗಳಿಂದ ತುಂಬಿಹೋಗಿತ್ತು. ಏನಾಗುತ್ತಿದೆ ಎಂದು ನನಗೆ ಅರ್ಥವಾಗಿರಲಿಲ್ಲ. 12 ಓವರ್‌ಗಳಲ್ಲಿ ದ್ವಿಶತಕ ಗಳಿಸಿದ್ದಾನೆ ಎಂದು ಯಾರೋ ಹೇಳಿದಾಗ, ಇದು ಟಿ20 ಪಂದ್ಯವೇ ಎಂದು ಕೇಳಿದೆ. ಆದರೆ ಅವರು ಇದು 50 ಓವರ್‌ಗಳ ಪಂದ್ಯ ಎಂದು ಹೇಳಿದರು,” ಎಂದು ಗೇಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

“ಇದನ್ನು ನೋಡಿದರೆ 50 ಓವರ್‌ಗಳ ಪಂದ್ಯದಲ್ಲೇ ತ್ರಿಶತಕ ಗಳಿಸುವುದು ಸಾಧ್ಯ ಎಂಬುದು ಸ್ಪಷ್ಟವಾಗುತ್ತದೆ. ವೈಭವ್ ಕ್ರಿಕೆಟ್ ಆಟದ ಸ್ವರೂಪವನ್ನೇ ಬದಲಿಸುತ್ತಿದ್ದಾನೆ. ಆತನಿಗೆ ಅವಕಾಶಗಳು ಸಿಗಬೇಕು. ಈ ಪ್ರತಿಭೆ ಮರೆಯಾಗಬಾರದು. ಯುವ ಆಟಗಾರರು ಈಗ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆತ ಇನ್ನೂ ಕಾಯಬೇಕಾಗಬಹುದು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆತನನ್ನು ಹೆಚ್ಚು ಹೆಚ್ಚು ನೋಡಲು ಬಯಸುತ್ತೇವೆ,” ಎಂದು ಗೇಲ್ ಹೇಳಿದ್ದಾರೆ.

ʻಈಗ ನೀವೇ ನನಗೆ ಸ್ಪೂರ್ತಿʼ: 200 ರನ್‌ ಚಚ್ಚಿದ ವೈಭವ್‌ ಸೂರ್ಯವಂಶಿಗೆ ಸ್ಕೈ ವಿಶೇಷ ಸಂದೇಶ!

‘ಬೇಬಿ ಬಾಸ್’ ಬಿರುದು ಬಿಟ್ಟು ಸ್ವಂತ ಗುರುತು ಸೃಷ್ಟಿಸಿಕೊಳ್ಳಲಿ

ವೈಭವ್ ಸೂರ್ಯವಂಶಿಯ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದಾಗಿ ಅಭಿಮಾನಿಗಳು ಅವರಿಗೆ ‘ಬೇಬಿ ಬಾಸ್’ ಎಂಬ ಅಡ್ಡಹೆಸರು ನೀಡಿದ್ದಾರೆ. ಕ್ರಿಸ್ ಗೇಲ್ ಅವರ ‘ಯೂನಿವರ್ಸ್ ಬಾಸ್’ ಬಿರುದಿನಿಂದ ಪ್ರೇರಿತವಾಗಿ ಈ ಹೆಸರು ಜನಪ್ರಿಯವಾಗಿದೆ. ಆದರೆ, ಈ ಹೆಸರಿನ ಬಗ್ಗೆ ಮಾತನಾಡಿದ ಗೇಲ್, ವೈಭವ್ ತನ್ನದೇ ಆದ ಗುರುತನ್ನು ಸೃಷ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

“ಯೂನಿವರ್ಸ್ ಬಾಸ್ ಮತ್ತು ಬೇಬಿ ಬಾಸ್ ಎಂದು ಕರೆಯುತ್ತಿದ್ದಾರೆ. ಆದರೆ ಆತ ತನ್ನದೇ ಆದ ಹೆಸರನ್ನು ರೂಪಿಸಿಕೊಳ್ಳಬೇಕು. ಬೇರೆಯವರ ಹೆಸರಿನೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಅಗತ್ಯವಿಲ್ಲ. ಹಿಟ್‌ಮ್ಯಾನ್, ಎಬಿ 360 ಮತ್ತು ಕ್ರಿಸ್ ಗೇಲ್ ಅವರ ಯೂನಿವರ್ಸ್ ಬಾಸ್ ಎಂಬಂತೆ ಪ್ರತಿಯೊಬ್ಬರೂ ತಮ್ಮದೇ ಆದ ಗುರುತು ಬೆಳೆಸಿಕೊಳ್ಳಬೇಕು. ವೈಭವ್ ಕೂಡ ಈಗಿನಿಂದಲೇ ತನ್ನದೇ ಬ್ರ್ಯಾಂಡ್ ನಿರ್ಮಿಸಿಕೊಳ್ಳುವತ್ತ ಗಮನಹರಿಸಬೇಕು,” ಎಂದು ಗೇಲ್ ಕಿವಿಮಾತು ಹೇಳಿದ್ದಾರೆ.

ಕೇವಲ 28 ಎಸೆತಗಳಲ್ಲಿ ಲಿಸ್ಟ್ ಎ ಶತಕ; ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ದಾಖಲೆಗಳ ಮೇಲೆ ದಾಖಲೆ ಬರೆದ 15ರ ಪೋರ

ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಬಳಿಕ 52 ಎಸೆತಗಳಲ್ಲಿ ದ್ವಿಶತಕದ ಗಡಿ ದಾಟಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಹಾಗೂ ದ್ವಿಶತಕದ ದಾಖಲೆಗಳನ್ನೂ ತಮ್ಮದಾಗಿಸಿಕೊಂಡರು. 15 ವರ್ಷದ ಈ ಪ್ರತಿಭಾವಂತ ಆಟಗಾರನ ಪ್ರದರ್ಶನ ಇದೀಗ ವಿಶ್ವದ ಹಲವು ದಿಗ್ಗಜ ಕ್ರಿಕೆಟಿಗರ ಗಮನ ಸೆಳೆಯುತ್ತಿದೆ. ಗೇಲ್ ಅವರ ಮೆಚ್ಚುಗೆ ಮತ್ತು ಸಲಹೆ ವೈಭವ್ ಅವರ ಮುಂದಿನ ಕ್ರಿಕೆಟ್ ಪಯಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.