ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕ್ರಿಸ್‌ ವೋಕ್ಸ್‌!

Chris Woakes retirement: ಇಂಗ್ಲೆಂಡ್‌ ತಂಡದ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ಅವರು ಸೆಪ್ಟಂಬರ್‌ 29 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ 15 ವರ್ಷಗಳ ಇಂಗ್ಲೆಂಡ್‌ ತಂಡದ ಜೊತೆಗಿನ ಪಯಣಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕ್ರಿಸ್‌ ವೋಕ್ಸ್‌.

ನವದೆಹಲಿ: ಇಂಗ್ಲೆಂಡ್‌ ತಂಡದ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ (Chris Woakes) ಅವರು ಸೋಮವಾರ (ಸೆ. 29) ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಆ ಮೂಲಕ ಅವರು ತಮ್ಮ 15 ವರ್ಷಗಳ ಇಂಗ್ಲೆಂಡ್‌ ತಂಡ (England Cricket) ಜೊತೆಗಿನ ಪಯಣವನ್ನು ಅಧಿಕೃತವಾಗಿ ಮುಗಿಸಿದ್ದಾರೆ. ಕ್ರಿಸ್‌ ವೋಕ್ಸ್‌ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಇಲ್ಲಿಯವರೆಗೂ ಎಲ್ಲಾ ಸ್ವರೂಪದಲ್ಲಿ ಆಡಿದ 217 ಪಂದ್ಯಗಳಿಂದ 396 ವಿಕೆಟ್‌ಗಳನ್ನು ಕಬಳಿಸಿದರೆ, ಬ್ಯಾಟಿಂಗ್‌ನಲ್ಲಿ 3705 ರನ್‌ಗಳನ್ನು ಬಾರಿಸಿದ್ದಾರೆ.

"ಆ ಸಮಯ ಬಂದಿದೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಮಯ ನನಗೆ ಬಂದಿದೆ ಎಂದು ನಾನು ನಿರ್ಧರಿಸಿದ್ದೇನೆ. ಇಂಗ್ಲೆಂಡ್ ಪರ ಆಡುವುದು ನನ್ನ ಬಾಲ್ಯದಿಂದಲೂ ಹಿಂದಿನ ತೋಟದಲ್ಲಿ ಕನಸು ಕಾಣುವ ಆಕಾಂಕ್ಷೆಯಾಗಿತ್ತು ಮತ್ತು ಆ ಕನಸುಗಳನ್ನು ಸಾಧ್ಯವಾದಷ್ಟು ನನಸಾಗಿಸಿರುವುದು ನನ್ನ ಪಾಲಿಗೆ ಅದೃಷ್ಟ ಎಂದು ಭಾವಿಸುತ್ತೇನೆ," ಎಂದು ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.

IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್‌ ಗೆದ್ದು ಸಂಭ್ರಮಿಸಿದ ಭಾರತ!

ಭಾರತ ವಿರುದ್ಧ ಈ ವರ್ಷದ ಆರಂಭದಲ್ಲಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಸರಣಿಯಲ್ಲಿ ಕ್ರಿಸ್‌ ವೋಕ್ಸ್‌ ಕೊನೆಯ ಬಾರಿ ಇಂಗ್ಲೆಂಡ್‌ ತಂಡವನ್ನು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರತಿನಿಧಿಸಿದ್ದರು. ಆದರೆ, ತಮ್ಮ ಕೊನೆಯ ಟೆಸ್ಟ್‌ ಪಂದ್ಯದ ಕೊನೆಯ ದಿನ ಕ್ರಿಸ್‌ ವೋಕ್ಸ್‌ ಅವರು ಗಾಯಕ್ಕೆ ತುತ್ತಾಗಿದ್ದರು ಹಾಗೂ ಇಂಗ್ಲೆಂಡ್‌ ತಂಡದ ಪರ ಅನಿವಾರ್ಯವಾಗಿ ಬ್ಯಾಟಿಂಗ್‌ಗೆ ಇಳಿದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

"ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದು, ತ್ರಿ ಲಯನ್ಸ್ ಜೆರ್ಸಿ ಧರಿಸುವುದು ಮತ್ತು ಕಳೆದ 15 ವರ್ಷಗಳಲ್ಲಿ ತಂಡದ ಸಹ ಆಟಗಾರರೊಂದಿಗೆ ಮೈದಾನ ಹಂಚಿಕೊಳ್ಳುವುದು, ಅವರಲ್ಲಿ ಹಲವರು ಜೀವಮಾನದ ಸ್ನೇಹಿತರಾಗಿದ್ದಾರೆ, ಇವುಗಳನ್ನು ನಾನು ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ," ಎಂದು ಅವರು ಹೇಳಿದ್ದಾರೆ.



"2011ರಲ್ಲಿ ಆಸ್ಟ್ರೇಲಿಯಾದಲ್ಲಿ ನನ್ನ ಚೊಚ್ಚಲ ಪ್ರವೇಶ ನಿನ್ನೆಯ ದಿನದಂತೆ ತೋರುತ್ತಿದೆ, ಆದರೆ ನೀವು ಆನಂದಿಸುತ್ತಿರುವಾಗ ಸಮಯ ಹಾರುತ್ತದೆ. ಎರಡು ವಿಶ್ವಕಪ್‌ ಟ್ರೋಫಿಗಳನ್ನು ಎತ್ತುವುದು ಮತ್ತು ಕೆಲವು ಅದ್ಭುತ ಆಶಸ್ ಸರಣಿಯ ಭಾಗವಾಗುವುದು ನಾನು ಎಂದಿಗೂ ಸಾಧ್ಯ ಎಂದು ಭಾವಿಸಿರಲಿಲ್ಲ ಮತ್ತು ನನ್ನ ತಂಡದ ಸದಸ್ಯರೊಂದಿಗಿನ ಆ ನೆನಪುಗಳು ಮತ್ತು ಆಚರಣೆಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತವೆ," ಎಂದಿದ್ದಾರೆ.

ಎರಡು ವಿಶ್ವಕಪ್‌ ಗೆದ್ದಿದ್ದ ಕ್ರಿಸ್‌ ವೋಕ್ಸ್‌

2019ರ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದಿದ್ದ ಇಂಗ್ಲೆಂಡ್‌ ತಂಡದಲ್ಲಿ ಕ್ರಿಸ್‌ ವೋಕ್ಸ್‌ ಕೂಡ ಆಡಿದ್ದರು. ಅವರು ಅಂದು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಿಂದ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.ಅವರು ಈ ಟೂರ್ನಿಯಲ್ಲಿ 134 ರನ್‌ಗಳು ಹಾಗೂ 16 ವಿಕೆಟ್‌ಗಳನ್ನು ಕಬಳಿಸಿದ್ದರು. ನ್ಯೂಜಿಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಿತ್ತಿದ್ದರು. 2022ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದಿದ್ದ ಇಂಗ್ಲೆಂಡ್‌ ತಂಡದಲ್ಲಿ ಕ್ರಿಸ್‌ ವೋಕ್ಸ್‌ ಇದ್ದರು. ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್‌ ತಂಡ ಪ್ರಶಸ್ತಿ ಗೆಲ್ಲಲು ಆಲ್‌ರೌಂಡರ್‌ ನೆರವು ನೀಡಿದ್ದರು.