ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್‌ ಗೆದ್ದು ಸಂಭ್ರಮಿಸಿದ ಭಾರತ!

IND vs PAK: ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಏಷ್ಯಾ ಕಪ್‌ ಫೈನಲ್‌ನಲ್ಲಿ ಭಾರತ ತಂಡ, ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ 9ನೇ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು. ಪಾಕಿಸ್ತಾನ ನೀಡಿದ್ದ 147 ರನ್‌ಗಳ ಗುರಿಯನ್ನು ಟೀಮ್‌ ಇಂಡಿಯಾ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ತಲುಪಿತು.

ಪಾಕಿಸ್ತಾನಕ್ಕೆ ಹ್ಯಾಟ್ರಿಕ್‌ ಸೋಲು, 9ನೇ ಏಷ್ಯಾ ಕಪ್‌ ಗೆದ್ದ ಟೀಮ್‌ ಇಂಡಿಯಾ

ಪಾಕಿಸ್ತಾನವನ್ನು ಮಣಿಸಿ 9ನೇ ಬಾರಿ ಏಷ್ಯಾ ಕಪ್‌ ಮುಡಿಗೇರಿಸಿಕೊಂಡ ಭಾರತ! -

Profile Ramesh Kote Sep 29, 2025 12:14 AM

ದುಬೈ: ಕುಲ್ದೀಪ್‌ ಯಾದವ್‌ (30ಕ್ಕೆ 4) ಅವರ ಸ್ಪಿನ್‌ ಮೋಡಿ ಹಾಗೂ ತಿಲಕ್‌ ವರ್ಮಾ (69*) ಅವರ ಅರ್ಧಶತಕದ ಬಲದಿಂದ ಭಾರತ ತಂಡ, ಫೈನಲ್‌ ಪಂದ್ಯದಲ್ಲಿ (IND vs PAK) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ 2025ರ ಏಷ್ಯಾ ಕಪ್‌ (Asia Cup 2025) ಮುಡಿಗೇರಿಸಿಕೊಂಡಿತು. ಆ ಮೂಲಕ 9ನೇ ಬಾರಿ ಟೀಮ್‌ ಇಂಡಿಯಾ (India) ಏಷ್ಯಾ ಕಪ್‌ ಗೆದ್ದಂತಾಯಿತು. ಇನ್ನು ಫೈನಲ್‌ ಗೆದ್ದು ಭಾರತಕ್ಕೆ ತಿರುಗೇಟು ನೀಡಲು ಬಯಸಿದ್ದ ಸಲ್ಮಾನ್‌ ಆಘಾ ನಾಯಕತ್ವದ ಪಾಕಿಸ್ತಾನ ತಂಡಕ್ಕೆ ಭಾರಿ ನಿರಾಶೆಯಾಯಿತು. ಆ ಮೂಲಕ ಪಾಕ್‌ಗೆ ಈ ಟೂರ್ನಿಯಲ್ಲಿ ಭಾರತದ ಎದುರು ಹ್ಯಾಟ್ರಿಕ್‌ ಸೋಲಿನ ಆಘಾತ ಉಂಟಾಯಿತು.

ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡ ನೀಡಿದ್ದ 147 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ತಿಲಕ್‌ ವರ್ಮಾ ಹಾಗೂ ಶಿವಂ ದುಬೆ (33 ರನ್‌) ಅವರ ಬ್ಯಾಟಿಂಗ್‌ ಬಲದಿಂದ 19.4 ಓವರ್‌ಗಳಿಗೆ 150 ರನ್‌ಗಳನ್ನು ಕಲೆ ಹಾಕಿ ಗೆದ್ದು ಬೀಗಿತು. ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿ ಅರ್ಧಶತಕವನ್ನು ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ತಿಲಕ್‌ ವರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IND vs PAK: ಟಾಸ್‌ ವೇಳೆ ರವಿ ಶಾಸ್ತ್ರಿ ಜೊತೆ ಮಾತನಾಡಲು ಸಲ್ಮಾನ್‌ ಆಘಾ ನಿರಾಕರಣೆ!

ಆರಂಭಿಕ ಆಘಾತ ಅನುಭವಿಸಿದ್ದ ಭಾರತ

ಸಾಧಾರಣ ಗುರಿಯನ್ನು ಹಿಂಬಾಲಿಸಿದರೂ ಭಾರತ ತಂಡ 20 ರನ್‌ಗಳಿಗೆ ಅಗ್ರ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಟೂರ್ನಿಯುದ್ದಕ್ಕೂ ಅದ್ಭುತವಾಗಿ ಬ್ಯಾಟ್‌ ಮಾಡಿದ್ದ ಅಭಿಷೇಕ್‌ ಶರ್ಮಾ (5) ಹಾಗೂ ಉಪ ನಾಯಕ ಶುಭಮನ್‌ ಗಿಲ್‌ (12) ಅವರನ್ನು ಫಾಹೀಮ್‌ ಅಶ್ರಫ್‌ ಔಟ್‌ ಮಾಡಿದರು. ಸೂರ್ಯಕುಮಾರ್‌ ಯಾದವ್‌ ಅವರನ್ನು ಶಾಹೀನ್‌ ಶಾ ಅಫ್ರಿದಿ ಔಟ್‌ ಮಾಡಿದ್ದರು.



ಭಾರತವನ್ನು ಗೆಲ್ಲಿಸಿದ ತಿಲಕ್‌ ವರ್ಮಾ

ಭಾರತ ತಂಡ 3 ವಿಕೆಟ್‌ ಕಳೆದುಕೊಂಡಿದ್ದ ವೇಳೆ ಜೊತೆಯಾದ ತಿಲಕ್‌ ವರ್ಮಾ ಹಾಗೂ ಸಂಜು ಸ್ಯಾಮ್ಸನ್‌ 57 ರ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. 21 ಎಸೆತಗಳಲ್ಲಿ 24 ರನ್‌ ಗಳಿಸಿದ ಬಳಿಕ ಸಂಜು ಸ್ಯಾಮ್ಸನ್‌ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ಶಿವಂ ದುಬೆ ಜೊತೆಯೂ ತಿಲಕ್‌ 60 ರನ್‌ಗಳ ಜೊತೆಯಾಟವನ್ನು ಆಡಿದರು. ಸ್ಪೋಟಕ ಬ್ಯಾಟ್‌ ಮಾಡಿದ ದುಬೆ, 22 ಎಸೆತಗಳಲ್ಲಿ 33 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ, 53 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 69 ರನ್‌ ಗಳಿಸಿ ಭಾರತ ತಂಡವನ್ನು ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆಲ್ಲಿಸಿದರು. ರಿಂಕು ಸಿಂಗ್‌ ಕೊನೆಯಲ್ಲಿ ವಿನ್ನಿಂಗ್‌ ಬೌಂಡರಿ ಬಾರಿಸಿದರು.



ಸ್ಪೋಟಕ ಆರಂಭ ಪಡೆದಿದ್ದ ಪಾಕಿಸ್ತಾನ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಪಾಕಿಸ್ತಾನ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಾಹಿಬ್‌ಝಾದ ಫರ್ಹಾನ್‌ ಹಾಗೂ ಫಖರ್‌ ಝಮಾನ್‌ ಜೋಡಿ ಪವರ್‌ಪ್ಲೇನಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಇವರು ಮುರಿಯದ ಮೊದಲನೇ ವಿಕೆಟ್‌ಗೆ 84 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪಾಕ್‌ಗೆ ಭರ್ಜರಿ ಆರಂಭವನ್ನು ನೀಡಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ಸಾಹಿಬ್‌ಝಾದ ಫರ್ಹಾನ್‌ 38 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 57 ರನ್‌ಗಳನ್ನು ಸಿಡಿಸಿದರು. ಫಖರ್‌ ಝಮಾನ್‌ 35 ಎಸೆತಗಳಲ್ಲಿ 46 ರನ್‌ಗಳನ್ನು ಬಾರಿಸಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ವರುಣ್‌ ಚಕ್ರವರ್ತಿ ಔಟ್‌ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು.



146ಕ್ಕೆ ಪಾಕಿಸ್ತಾನ ಆಲ್‌ಔಟ್‌

ಮೂರನೇ ಕ್ರಮಾಂಕದಲ್ಲಿ ಆಡಿದ್ದ ಸೈಯಮ್‌ ಆಯುಬ್‌ 14 ರನ್‌ ಗಳಿಸಿದ ಕುಲ್ದೀಪ್‌ ಯಾದವ್‌ಗೆ ಶರಣಾದರು. ನಂತರ ಮೊಹಮ್ಮದ್‌ ಹ್ಯಾರಿಸ್‌ ಶೂನ್ಯಕ್ಕೆ ಔಟ್‌ ಆದರು. ನಂತರ ಸ್ಪಿನ್‌ ಮೋಡಿ ಮಾಡಿದ ಕುಲ್ದೀಪ್‌ ಯಾದವ್‌, ಸಲ್ಮಾನ್‌ ಆಘಾ ಸೇರಿದಂತೆ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು. ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕ ಎರಡಂಕಿಯನ್ನು ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಪಾಕಿಸ್ತಾನ, 19.1 ಓವರ್‌ಗಳಿಗೆ 146 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಕುಲ್ದೀಪ್‌ ಯಾದವ್‌ 4 ವಿಕೆಟ್‌ ಪಡೆದರೆ, ಜಸ್‌ಪ್ರೀತ್‌ ಬುಮ್ರಾ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.

ಸ್ಕೋರ್‌ ವಿವರ

ಪಾಕಿಸ್ತಾನ: 19.1 ಓವರ್‌ಗಳಿಗೆ 146-10 (ಸಾಹಿಬ್‌ಝಾದ ಫರ್ಹಾನ್‌ 57, ಫಖರ್‌ ಝಮಾನ್‌ 47; ಕುಲ್ದೀಪ್‌ ಯಾದವ್‌ 30ಕ್ಕೆ 4, ವರುಣ್‌ ಚಕ್ರವರ್ತಿ 30ಕ್ಕೆ 2, ಜಸ್‌ಪ್ರೀತ್‌ ಬಮ್ರಾ 25ಕ್ಕೆ 2, ಅಕ್ಷರ್‌ ಪಟೇಲ್‌ 26ಕ್ಕೆ 2)

ಭಾರತ: 19.4 ಓವರ್‌ಗಳಿಗೆ 150-5 (ತಿಲಕ್‌ ವರ್ಮಾ 69*, ಶಿವಂ ದುಬೆ 33, ಸಂಜು ಸ್ಯಾಮ್ಸನ್‌ 24; ಫಾಹೀಮ್‌ ಅಶ್ರಫ್‌ 29ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ತಿಲಕ್‌ ವರ್ಮಾ