ಬೆಂಗಳೂರು: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 22 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ. ಪ್ರಸಕ್ತ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸಲಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಆರನೇ ಟ್ರೋಫಿಯ ಪ್ರಯತ್ನದಲ್ಲಿದ್ದರೆ, ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲುವ ಹಾದಿಯಲ್ಲಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫಗ್ಸ್‌ಗೆ ಅರ್ಹತೆ ಪಡೆಯುವ ನಾಲ್ಕು ತಂಡಗಳನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್ ಆರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಡೆಗಣಿಸಿದ ಎಬಿಡಿ, ತಮ್ಮ ತಂಡ ಆರ್‌ಸಿಬಿಯನ್ನು ಆರಿಸಿದ್ದಾರೆ.
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಎಬಿಡಿ, ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವ ತಮ್ಮ ನೆಚ್ಚಿನ ನಾಲ್ಕು ತಂಡಗಳನ್ನು ಆಯ್ಕೆ ಮಾಡಿದ್ದಾರೆ. ತಾವು ಪ್ರತಿನಿಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳನ್ನು ಆಯ್ಕೆ ಮಾಡಿದ ಎಬಿಡಿ, ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಡೆಗಣಿಸಿದ್ದಾರೆ.
IPL 2025: ಆರ್‌ಸಿಬಿಗೆ ಅವಮಾನ ಮಾಡಿದ್ರಾ ಎಸ್ ಬದ್ರಿನಾಥ್? ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ ವಿಡಿಯೊ!
"ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ ಎಂದು ನಾನು ಭಾವಿಸುತ್ತೇನೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖಚಿತವಾಗಿ ಪ್ಲೇಆಫ್ಸ್‌ಗೆ ಪ್ರವೇಶ ಮಾಡಲಿದೆ ಎಂದು ನಾನು ಯೋಚಿಸುತ್ತೇನೆ. ಏಕೆಂದರೆ ಆರ್‌ಸಿಬಿ ತಂಡದ ಸಂಯೋಜನೆ ಅತ್ಯುತ್ತಮವಾಗಿದೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ ತಂಡಗಳಲ್ಲಿ ಗುಜರಾತ್ ಟೈಟನ್ಸ್ ತಂಡ ಕೂಡ ಬಲಿಷ್ಠ ಸ್ಪರ್ಧಿಯಾಗಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡ ಪ್ಲೇಆಫ್ಸ್ ರೇಸ್‌ನಲ್ಲಿದೆ. ಈ ನಾಲ್ಕೂ ತಂಡಗಳು ಪ್ಲೇಆಫ್ಸ್‌ಗೆ ಪಡೆಯಬಹುದೆಂದು ನಾನು ಭಾವಿಸುತ್ತೇನೆ," ಎಂದು ಎಬಿ ಡಿ ವಿಲಿಯರ್ಸ್ ತಿಳಿಸಿದ್ದಾರೆ.
"ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾನು ಆಯ್ಕೆ ಮಾಡಿಲ್ಲ. ಇದು ಕೂಡ ಅತ್ಯಂತ ಬಲಿಷ್ಠ ತಂಡವಾಗಿದೆ, ಆದರೆ ಸಿಎಸ್‌ಕೆ ಅಭಿಮಾನಿಗಳಿಗೆ ಬೇಸರವಾಗಬಹುದು. ಏನೇ ಆಗಲಿ ನಾನು ಈ ನಾಲ್ಕು ತಂಡಗಳೊಂದಿಗೆ ಹೋಗುತ್ತೇನೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಅಭಿಪ್ರಾಯವನ್ನು ವ್ತಕ್ತಪಡಿಸಿದ್ದಾರೆ.
IPL 2025: ʻಸ್ಟ್ರೈಕ್ ರೇಟ್ ಕಡೆಗೆ ಗಮನ ಕೊಡಬೇಡಿʼ-ಕುಚುಕು ಗೆಳೆಯ ವಿರಾಟ್ ಕೊಹ್ಲಿಗೆ ಎಬಿಡಿ ಮಹತ್ವದ ಸಲಹೆ!
ಆರ್‌ಸಿಬಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಾಯಕನಾಗಬೇಕೆಂದ ಎಬಿಬಿ
ಜಿಯೊಸ್ಟಾರ್ ಪ್ರೆಸ್ ರೂಂ ಸಂಭಾಷಣೆಯಲ್ಲಿ ಎಬಿಡಿ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವಿಭಾಗಕ್ಕೆ ವಿರಾಟ್ ಕೊಹ್ಲಿ ನಾಯಕನಾಗಬೇಕೆಂದು ಆಗ್ರಹಿಸಿದ್ದಾರೆ. ಅವರು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಸ್ಮಾರ್ಟ್ ಕ್ರಿಕೆಟ್ ಆಡಬೇಕಾಗುತ್ತದೆ. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಕುಸಿತ ಉಂಟಾಬಾರದೆಂಬ ಕಡೆಗೆ ಅವರು ಗಮನ ನೀಡಬೇಕಾಗುತ್ತದೆ.
"ಈ ಟೂರ್ನಿಯಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ವಿರಾಟ್ ಕೊಹ್ಲಿ ನಾಯಕನಾಗಬೇಕು. ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಕುಸಿತ ಉಂಟಾಗದಂತೆ ನೋಡಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ಸ್ಮಾರ್ಟ್ ಕ್ರಿಕೆಟ್ ಆಡುವ ಕಡೆಗೆ ಗಮನ ನೀಡಬೇಕು. ಆ ಮೂಲಕ ಅವರು ಸ್ಟ್ರೈಕ್ ರೇಟ್ ಹೆಚ್ಚಿಸುವ ಕಡೆಗೆ ಗಮನ ನೀಡಬಾರದು," ಎಂದು ಎಬಿಡಿ ಸಲಹೆ ನೀಡಿದ್ದರು.