ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ನಡುವಣ ಪಂದ್ಯದಲ್ಲಿ ವಿವಾದವೊಂದು ತಲೆದೋರಿದೆ. ಏಪ್ರಿಲ್ 5ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸಿಎಸ್‌ಕೆ 43 ರನ್‌ಗಳ ಅಂತರದಿಂದ ಸೋತಿತ್ತು. ಈ ವೇಳೆ ಸ್ಟೇಡಿಯಂನಲ್ಲಿ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಹಾಡನ್ನು ನಿರಂತರವಾಗಿ ಪ್ಲೇ ಮಾಡಲಾಗಿದ್ದು, ಡಿಜೆ ನೀಡಿದ ಕೆಲವು ಕಾಮೆಂಟ್‌ಗಳ ಬಗ್ಗೆ ಸಿಎಸ್‌ಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಫ್ರಾಂಚೈಸಿ ಬಿಸಿಸಿಐಗೆ (BCCI) ಅಧಿಕೃತವಾಗಿ ಪತ್ರ ಬರೆದು ಘಟನೆ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದೆ.
ಅಂದ ಹಾಗೆ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಎಂಬ ಹಾಡನ್ನು ಗಾನ ಅಪ್ಪು ರಚಿಸಿದ್ದು, ಸಿಎಸ್‌ಕೆ–ಆರ್‌ಸಿಬಿ ಪಂದ್ಯಗಳ ವೇಳೆ ಈ ಹಾಡು ಸಾಮಾನ್ಯವಾಗಿ ಕೇಳಿಬರುತ್ತದೆ. ಈ ವಿವಾದಕ್ಕೆ ಕಾರಣವಾದ ಘಟನೆ ಎಂದರೆ, ಆರ್‌ಸಿಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರು “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಎಂದು ಹಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು. ಈ ವಿಡಿಯೊ ವೈರಲ್ ಆಗಿತ್ತು ಹಾಗೂ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿಯನ್ನು ತೀವ್ರ ಟ್ರೋಲ್ ಮಾಡಿದ್ದರು.
IPL 2026 Points table: ಲಖನೌ ಎದುರು ದೊಡ್ಡ ಗೆಲುವಿನ ಬಳಿಕ ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!
ಇದಕ್ಕೂ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟ ಸೂಚನೆಗಳನ್ನು ನೀಡಿದ್ದು, ಎದುರಾಳಿ ತಂಡ ಮತ್ತು ಅವರ ಅಭಿಮಾನಿಗಳ ವಿರುದ್ಧ ಯಾವುದೇ ರೀತಿಯ ಕಾಮೆಂಟ್‌ಗಳನ್ನು ಮಾಡಬಾರದು ಎಂದು ತಿಳಿಸಿತ್ತು. ಆದಾಗ್ಯೂ, ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯಗಳಲ್ಲಿ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಹಾಡು ಪದೇ-ಪದೆ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವಿನ ವ್ಯಂಗ್ಯ ಮತ್ತು ಮೀಮ್ಸ್ ಸಾಮಾನ್ಯವಾಗಿದ್ದರೂ, ಸ್ಟೇಡಿಯಂನಲ್ಲಿ ಹಾಡು ಪ್ಲೇ ಮಾಡಿರುವುದು ಮತ್ತು ಡಿಜೆ ನೀಡಿದ ಕೆಲವು ಕಾಮೆಂಟ್‌ಗಳು ಉತ್ತಮವಾಗಿಲ್ಲ ಸಿಎಸ್‌ಕೆ ಅಭಿಪ್ರಾಯಪಟ್ಟಿದೆ.
ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಪ್ರತಿಕ್ರಿಯೆ
ಈ ಘಟನೆ ಕುರಿತು ಚೆನ್ನೈ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಾಮಾನ್ಯವಾಗಿ ಡಿಜೆಗಳು ತಮ್ಮ ತವರು ತಂಡವನ್ನು ಬೆಂಬಲಿಸಲು ಇರುತ್ತಾರೆ. ಆದರೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದು ಭಿನ್ನವಾಗಿತ್ತು. ನಮ್ಮ ಆಟಗಾರರ ವಿರುದ್ಧ ಕೆಲವು ಕಾಮೆಂಟ್‌ಗಳನ್ನು ಮಾಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಬಿಸಿಸಿಐಗೆ ಪತ್ರ ಬರೆದು ವಿಚಾರಣೆ ಮಾಡುವಂತೆ ಕೇಳಿದ್ದೇವೆ,” ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
RCB vs CSK: ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಿಗೆ ಕಾರಣ ತಿಳಿಸಿದ ಅಂಬಾಟಿ ರಾಯುಡು
“ಡಿಜೆ ಎದುರಾಳಿ ಆಟಗಾರರ ಬಗ್ಗೆ ಯಾವುದೇ ಕಾಮೆಂಟ್ ಮಾಡಬಾರದು. ಅದಲ್ಲದೆ, ನಮಗೆ ದೊಡ್ಡ ಅಭಿಮಾನಿ ಬಳಗವಿದೆ, ಅವರು ನಮ್ಮನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುತ್ತಾರೆ. ಹಾಡಿನ ವಿಷಯ ಮಾತ್ರವಲ್ಲದೆ, ಡಿಜೆ ಮಾಡಿದ ಕೆಲವು ಹೇಳಿಕೆಗಳ ಮೇಲೂ ಸಿಎಸ್‌ಕೆ ಆಕ್ಷೇಪ ವ್ಯಕ್ತಪಡಿಸಿದೆ. ಅವರು ಎದುರಾಳಿ ತಂಡವನ್ನು ಅವಹೇಳನ ಮಾಡಲು ಅಥವಾ ಅವಮಾನಿಸಬಾರದು,” ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಐಪಿಎಲ್ ಅಧಿಕಾರಿ ಹೇಳಿದ್ದೇನು?
ಈ ಕುರಿತು ಐಪಿಎಲ್ ಆಡಳಿತ ಮಂಡಳಿಯ ಉನ್ನತ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಬಿಸಿಸಿಐ ಅಡಿಯಲ್ಲಿ ಕಾರ್ಯನಿರ್ವಹಿಸುವ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಈ ಪ್ರಕರಣವನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ. ಅವರು ಹೇಳಿಕೆಯಲ್ಲಿ, "ಚೆನ್ನೈ ಸೂಪರ್ ಕಿಂಗ್ಸ್‌ನಿಂದ ನಮಗೆ ದೂರು ಬಂದಿದೆ ಮತ್ತು ನಾವು ಅದನ್ನು ಪರಿಶೀಲಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.