ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 200ಕ್ಕೂ ಅಧಿಕ ರನ್‌ಗಳ ಗುರಿಯನ್ನು ನೀಡಿದ್ದರ ಹೊರತಾಗಿಯೂ ಫೀಲ್ಡಿಂಗ್ ವೈಫಲ್ಯದಿಂದಾಗಿ ಲಖನೌ ಸೂಪರ್ ಜಯಂಟ್ಸ್ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಈ ಆಘಾತದ ಸೋಲಿನೊಂದಿಗೆ ರಿಷಭ್ ಪಂತ್ (Rishabh Pant) ನಾಯಕತ್ವದ ಎಲ್‌ಎಸ್‌ಜಿ ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇಆಫ್ಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿತು. ಈ ಪಂದ್ಯದ ಬಳಿಕ ಮಾತನಾಡಿದ ಲಖನೌ ನಾಯಕ ರಿಷಭ್ ಪಂತ್, ಬೇಸರ ವ್ಯಕ್ತಪಡಿಸಿದರು ಹಾಗೂ ತಮ್ಮ ತಂಡ ನಿರ್ಣಾಯಕ ಸಮಯದಲ್ಲಿ ಕೆಲ ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಪಂದ್ಯದ ಫಲಿತಾಂಶದ ಪರಿಣಾಮ ಬೀರಿದೆ ಎಂದು ದೂರಿದ್ದಾರೆ.
ಭಾನುವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎಲ್‌ಎಸ್‌ಜಿ ನೀಡಿದ್ದ 204 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಸಿಎಸ್‌ಕೆ ತಂಡ ಭರ್ಜರಿ ಆರಂಭವನ್ನು ಪಡೆದಿತ್ತು. ಊರ್ವಿಲ್ ಪಟೇಲ್ ಅವರ ಐಪಿಎಲ್‌ನ ಅತ್ಯಂತ ವೇಗದ ದಾಖಲೆಯ ಅರ್ಧಶತಕದ ಬಲದಿಂದ ಕೇವಲ 9.2 ಓವರ್‌ಗಳಿಗೆ 126 ರನ್ ಗಳನ್ನು ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೂ ಕೊನೆಯ ಹಂತದಲ್ಲಿ ಎಲ್‌ಎಸ್‌ಜಿ ಕಮ್‌ಬ್ಯಾಕ್ ಮಾಡಿತ್ತು. ಕೊನೆಯ ಎರಡು ಓವರ್‌ಗಳಿಗೆ ಸಿಎಸ್‌ಕೆಗೆ 21 ರನ್ ಅಗತ್ಯವಿತ್ತು. ಈ ವೇಳೆ ಶಿವಂ ದುಬೆ ಹಾಗೂ ಪ್ರಶಾಂತ್ ವೀರ್ ಆಡುತ್ತಿದ್ದರು.
19ನೇ ಓವರ್ ಮೊದಲನೇ ಎಸೆತದಲ್ಲಿ ಪ್ರಶಾಂತ್ ವೀರ್ ಅವರ ಸುಲಭ ಕ್ಯಾಚ್ ಅನ್ನು ದಿಗ್ವೇಶ್ ರಾಠಿ ಕೈ ಚೆಲ್ಲಿದರು. ನಂತರ ಎರಡನೇ ಎಸೆತದಲ್ಲಿಯೂ ಅವಕಾಶ ಸಿಕ್ಕಿತ್ತು. ಆದರೆ, ಮತ್ತೊಂದು ಸುಲಭ ಕ್ಯಾಚ್ ಅನ್ನು ನಿಕೋಲಸ್ ಪೂರನ್ ಕೈಚೆಲ್ಲಿದ್ದರು. ಒಂದು ವೇಳೆ ಇಲ್ಲಿ ಒಂದು ಕ್ಯಾಚ್ ಯಶಸ್ವಿಯಾಗಿ ಪಡೆದಿದ್ದರೂ ಪಂದ್ಯದ ಚಿತ್ರಣ ವಿಭಿನ್ನವಾಗಿರುತ್ತಿತ್ತು. ಆದರೆ, ನಾಲ್ಕನೇ ಎಸೆತದಲ್ಲಿ ಪ್ರಶಾಂತ್ ವೀರ್ ಸಿಕ್ಸರ್ ಸಿಡಿಸಿದರು ಹಾಗೂ 20ನೇ ಓವರ್‌ನಲ್ಲಿ ದುಬೇ ಎರಡು ಸಿಕ್ಸರ್ ಬಾರಿಸಿ ಸಿಎಸ್‌ಕೆಗೆ ಗೆಲುವು ಖಚಿತಪಡಿಸಿದರು.
ಪಂದ್ಯದ ಸೋಲಿನ ಬಳಿಕ ಮಾತನಾಡಿದ ರಿಷಭ್ ಪಂತ್, ಸಿಎಸ್‌ಕೆ ತಂಡದ ಚೇಸಿಂಗ್‌ನಲ್ಲಿ ಎಲ್‌ಎಸ್‌ಜಿ ತಂಡ ಹಲವು ಕ್ಯಾಚ್‌ಗಳನ್ನು ಕೈಬಿಟ್ಟಿದೆ ಎಂದು ಒಪ್ಪಿಕೊಂಡರು. ಇದಕ್ಕಾಗಿ ತಂಡ ಅಂತಿಮವಾಗಿ ಭಾರೀ ಬೆಲೆ ತೆರಬೇಕಾಯಿತು ಎಂದರು.
CSK vs LSG: ಐಪಿಎಲ್‌ನ ಜಂಟಿ ವೇಗದ ಅರ್ಧಶತಕ ಬಾರಿಸಿ ವಿಭಿನ್ನವಾಗಿ ಸಂಭ್ರಮಿಸಿದ ಊರ್ವಿಲ್ ಪಟೇಲ್!
"ಸ್ಪಷ್ಟವಾಗಿ, ಇದು ಅದ್ಭುತ ಪಂದ್ಯವಾಗಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು; ಚೆನ್ನೈನಲ್ಲಿ ಸಾಮಾನ್ಯವಾಗಿರುವಂತೆ ಅವರು ನಮ್ಮ ಮೇಲೆ ಒತ್ತಡ ಹೇರುತ್ತಾರೆಂದು ನಮಗೆ ತಿಳಿದಿತ್ತು. ಟಿ20 ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ ಗುಣಮಟ್ಟ ಹೆಚ್ಚಾಗಿರಬೇಕು ಮತ್ತು ನಾವು ಹಲವಾರು ಕ್ಯಾಚ್‌ಗಳನ್ನು ಕೈಬಿಟ್ಟಿದ್ದೇವೆ," ಎಂದು ಬೇಸರ ವ್ಯಕ್ತಪಡಿಸಿದರು.
ಊರ್ವಿಲ್ ಪಟೇಲ್ ಆಟವನ್ನು ಕೊಂಡಾಡಿದ ಪಂತ್
“ಊರ್ವಿಲ್ ಅದ್ಭುತ ಹಾಗೂ ನಂಬಲಾರದಂತಹ ಇನಿಂಗ್ಸ್ ಆಡಿದರು. ನಮ್ಮ ಪರ ಜಾಶ್ ಇಂಗ್ಲಿಸ್ (33 ಎಸೆತಗಳಲ್ಲಿ 85 ರನ್) ಹೇಗೆ ದಾಳಿ ಮಾಡಿದರೋ, ಅವರ ಪರ ಊರ್ವಿಲ್ ಕೂಡ ಅದೇ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. ಯಾರಾದರೂ ಒಬ್ಬರು ದಾಳಿಯನ್ನು ಮುನ್ನಡೆಸಬೇಕೆಂದು ನಮಗೆ ಗೊತ್ತಿತ್ತು—ನಮ್ಮ ಪರ ಇಂಗ್ಲಿಸ್, ಅವರ ಪರ ಊರ್ವಿಲ್. ಆದರೂ ನಾವು ಹೋರಾಟ ಮುಂದುವರಿಸಿದೆವು ಮತ್ತು ಗೆಲುವಿನ ಅವಕಾಶಗಳನ್ನೂ ಹೊಂದಿದ್ದೆವು,” ಎಂದು ಅವರು ತಿಳಿಸಿದ್ದಾರೆ.
CSK vs LSG: ಲಖನೌ ಪರ ಅತ್ಯಂತ ವೇಗದ ಐಪಿಎಲ್ ಅರ್ಧಶತಕ ಬಾರಿಸಿದ ಜಾಶ್ ಇಂಗ್ಲಿಸ್!
"ನಾವು ಪ್ರಾರಂಭಿಸಿದ ರೀತಿಯನ್ನು ಗಮನಿಸಿದರೆ, ಸ್ಕೋರ್‌ಬೋರ್ಡ್‌ನಲ್ಲಿ ಇನ್ನೂ ಹೆಚ್ಚಿನ ರನ್‌ಗಳನ್ನು ಕಲೆ ಹಾಕಬೇಕೆಂದು ನಾವು ಆಶಿಸಿದ್ದೆವು. 200–210ರ ಸಮೀಪದಲ್ಲಿ ಒಟ್ಟು ಮೊತ್ತವು ಬಲವಾದ ಸ್ಕೋರ್ ಆಗಿರುತ್ತದೆ ಎಂದು ನಮಗೆ ತಿಳಿದಿತ್ತು. ಆರಂಭಿಕ ಹಂತಗಳಲ್ಲಿ ಬ್ಯಾಟಿಂಗ್ ತುಲನಾತ್ಮಕವಾಗಿ ಸುಲಭವಾಗಿತ್ತು, ಆದರೆ ನಂತರ ಅದು ಹೆಚ್ಚು ಸವಾಲಿನದಾಯಿತು," ಎಂದು ರಿಷಭ್ ಪಂತ್ ಹೇಳಿದ್ದಾರೆ.