ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs LSG: ಐಪಿಎಲ್‌ನ ಜಂಟಿ ವೇಗದ ಅರ್ಧಶತಕ ಬಾರಿಸಿ ವಿಭಿನ್ನವಾಗಿ ಸಂಭ್ರಮಿಸಿದ ಊರ್ವಿಲ್‌ ಪಟೇಲ್!

Urvil Patel Joint Fastest Fifty: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಊರ್ವಿಲ್‌ ಪಟೇಲ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಐಪಿಎಲ್‌ ಇತಿಹಾಸದ ಅತ್ಯಂತ ವೇಗದ ಅರ್ಧಶತಕವನ್ನು ಬಾರಿಸಿ ಯಶಸ್ವಿ ಜೈಸ್ವಾಲ್‌ ದಾಖಲೆಯನ್ನು ಸರಿದೂಗಿಸಿದ್ದಾರೆ.

ಐಪಿಎಲ್‌ ಜಂಟಿ ವೇಗದ ಅರ್ಧಶತಕ ಸಿಡಿಸಿದ ಊರ್ವಿಲ್‌ ಪಟೇಲ್‌!

ಐಪಿಎಲ್‌ನ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಊರ್ವಿಲ್‌ ಪಟೇಲ್‌. -

Profile
Ramesh Kote May 10, 2026 7:34 PM

ಚೆನ್ನೈ: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಯುವ ಬ್ಯಾಟ್ಸ್‌ಮನ್‌ ಊರ್ವಿಲ್‌ ಪಟೇಲ್‌ (Urvil Patel) ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಪವರ್‌ಪ್ಲೇನಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಐಪಿಎಲ್‌ ಇತಿಹಾಸದ ವೇಗದ ಅರ್ಧಶತಕವನ್ನು ಬಾರಿಸಿ, ರಾಜಸ್ಥಾನ್‌ ರಾಯಲ್ಸ್‌ ಆರಂಭಿಕ ಯಶಸ್ವಿ ಜೈಸ್ವಾಲ್‌ (Yashasvi jaiswal) ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ.

ಭಾನುವಾರ ಇಲ್ಲಿನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಎಲ್‌ಎಸ್‌ಜಿ ನೀಡಿದ್ದ 204 ರನ್‌ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ ಕೇವಲ 14 ಎಸೆತಗಳಲ್ಲಿ 28 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಊರ್ವಿಲ್‌ ಪಟೇಲ್‌, ಆಡಿದ ಮೊದಲನೇ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕೆ ಕೈ ಹಾಕಿದರು. ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಸಿಎಸ್‌ಕೆ ತವರು ಅಭಿಮಾನಿಗಳನ್ನು ರಂಜಿಸಿದರು.

CSK vs LSG: ಲಖನೌ ಪರ ಅತ್ಯಂತ ವೇಗದ ಐಪಿಎಲ್‌ ಅರ್ಧಶತಕ ಬಾರಿಸಿದ ಜಾಶ್‌ ಇಂಗ್ಲಿಸ್‌!

ಊರ್ವಿಲ್‌ ಪಟೇಲ್‌ ಪಂದ್ಯದ ಐದನೇ ಓವರ್‌ನಲ್ಲಿ ತಮ್ಮ ರುದ್ರ ನರ್ತನವನ್ನು ತೋರಿದರು. ಅವರು 5ನೇ ಓವರ್‌ನ 4,5 ಹಾಗೂ 6ನೇ ಎಸೆತಗಳಲ್ಲಿ ಸತತ ಸಿಕ್ಸರ್‌ಗಳನ್ನು ಬಾರಿಸಿದರು. ನಂತರ ಆರನೇ ಓವರ್‌ನಲ್ಲಿ ದಿಗ್ವೇಶ್‌ ಸಿಂಗ್‌ ರಾಠಿ ಅವರಿಗೆ ಮೂರು ಸಿಕ್ಸರ್‌ ಹಾಗೂ ಒಂದು ಬೌಂಡರಿಯನ್ನು ಸಿಡಿಸಿದ್ದರು. ಬಳಿಕ ಏಳನೇ ಓವರ್‌ನಲ್ಲಿ ಒಂದು ಸಿಕ್ಸರ್‌ ಹೊಡೆದ ಬಳಿಕ 13 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ವೇಗದ ಜಂಟಿ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಇಷ್ಟೇ ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ ಅವರ ದಾಖಲೆಯನ್ನು ಸರಿಗಟ್ಟಿದರು.



ವೇಗದ ಅರ್ಧಶತಕದ ಬಳಿಕ ವಿಭಿನ್ನವಾಗಿ ಸಂಭ್ರಮಿಸಿದ ಊರ್ವಿಲ್‌

ದಾಖಲೆಯ ಅರ್ಧಶತಕವನ್ನು ಸಿಡಿಸಿದ ಬಳಿಕ ಊರ್ವಿಲ್‌ ಪಟೇಲ್‌ ವಿಭಿನ್ನವಾಗಿ ಸಂಭ್ರಮಿಸಿದರು. ತಮ್ಮ ಜೇಬಿನಲ್ಲಿದ್ದ ಚೀಟಿಯನ್ನು ತೆಗೆದರು ಹಾಗೂ ಕೈ ಬರವಣಿಗೆಯ ಚೀಟಿಯನ್ನು ಪ್ರೇಕ್ಷರತ್ತಾ ತೋರಿಸಿದರು. ಈ ಚೀಟಿಯಲ್ಲಿ ʻಇದು ನಿಮಗಾಗಿ ಅಪ್ಪ," ಎಂದು ಬರೆದಿದ್ದರು. ಇದು ಯುವ ಬ್ಯಾಟ್ಸ್‌ಮನ್‌ ಪಾಲಿಗೆ ಅತ್ಯಂತ ವಿಶೇಷ ಇನಿಂಗ್ಸ್‌ ಆಯಿತು. ಅಲ್ಲದೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗೆಲುವು ಸಾಧಿಸಿತು.

ಒಟ್ಟಾರೆಯಾಗಿ ಈ ಇನಿಂಗ್ಸ್‌ನಲ್ಲಿ ಆಡಿದ 23 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 65 ರನ್‌ ಚಚ್ಚಿದರು. ಆ ಮೂಲಕ ಸಿಎಸ್‌ಕೆ 9.2 ಓವರ್‌ಗಳಿಗೆ 126 ರನ್‌ಗಳನ್ನು ಕಲೆ ಹಾಕಿ ಭರ್ಜರಿ ಆರಂಭವನ್ನು ಪಡೆದಿತ್ತು. ದಾಖಲೆಯ ಶತಕದ ಹಾದಿಯಲ್ಲಿ ಸಾಗುತ್ತಿದ್ದ ಊರ್ವಿಲ್‌ ಪಟೇಲ್‌, ಶಹಬಾಝ್‌ ಅಹ್ಮದ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಅಂದ ಹಾಗೆ ಅವರು 282.61ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿದ್ದು ವಿಶೇಷ. ಈ ಪಂದ್ಯದಲ್ಲಿ ಅಂತಿಮವಾಗಿ ಸಿಎಸ್‌ಕೆ 5 ವಿಕೆಟ್‌ಗಳಿಂದ ಗೆದ್ದು ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಯಿತು.